ದಾವಣಗೆರೆ (ಡಿ. 02): ರಾಜ್ಯದ ಸಾಮಾನ್ಯ ಪ್ರಜೆಯ ಮೇಲೆ ಖಾಸಗಿ ಬ್ಯಾಂಕುಗಳ ಕಾನೂನು ಪ್ರಹಾರ ಮುಂದುವರಿದಿದೆ. ಸಾಲ ಮರುಪಾವತಿಸದ ರೈತರ ಚೆಕ್‌ಗಳು ಬೌನ್ಸ್‌ ಆಗಿವೆ ಎಂದು ಬೆಳಗಾವಿಯ ಸುಮಾರು 180ಕ್ಕೂ ಹೆಚ್ಚು ರೈತರ ಮೇಲೆ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದ ನ್ಯಾಯಾಲಯದಲ್ಲಿ ಎಕ್ಸಿಸ್‌ ಬ್ಯಾಂಕ್‌ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಿ ಬಂಧನ ವಾರಂಟ್‌ ಹೊರಡಿಸಿರುವ ಪ್ರಕರಣ ಹಸಿಯಾಗಿರುವಾಗಲೇ, ದಾವಣಗೆರೆ ಜಿಲ್ಲೆಯ ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರ ಮೇಲೆ ಖಾಸಗಿ ಹಣಕಾಸು ಸಂಸ್ಥೆಯೊಂದು ಇದೇ ರೀತಿಯ ಕ್ರಮ ಕೈಗೊಂಡ ಪ್ರಕರಣ ಬೆಳಕಿಗೆ ಬಂದಿದೆ.

ಸುಮಾರು 25ರಿಂದ 50 ಸಾವಿರ ರು.ವರೆಗೆ ಸಾಲ ಪಡೆದು ಕೆಲವು ಕಂತುಗಳನ್ನು ಪಾವತಿಸದೆ ಸುಸ್ತಿದಾರರಾಗಿದ್ದ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸ್ವಸಹಾಯ ಸಂಘವೊಂದರ ಐವರು ಮಹಿಳೆಯರ ವಿರುದ್ಧ ಕೋಲ್ಕತಾ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಲಾಗಿದೆ.

ಭಾರತೀಯ ದಂಡ ಸಂಹಿತೆಯ 406 (ವಿಶ್ವಾಸದ್ರೋಹ), 420 (ವಂಚನೆ), 120ಬಿ (ಒಳಸಂಚು) ಗಂಭೀರ ಆರೋಪಗಳನ್ನು ಹೇರಿ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಇತ್ತೀಚೆಗೆ ಜಾಮೀನುರಹಿತ ಬಂಧನ ವಾರಂಟ್‌ ಜಾರಿಯಾಗಿದೆ. ಬಂಧಿಸುವಂತೆ ದಾವಣಗೆರೆ ಪೊಲೀಸರಿಗೆ ಕೋರ್ಟ್‌ನಿಂದಲೇ ಸೂಚನೆ ಇರುವುದರಿಂದ ಈ ಮಹಿಳೆಯರು ಇದೀಗ ತಲೆಮರೆಸಿಕೊಂಡು ತಿರುಗಾಡುವಂತಾಗಿದೆ.

ನ.30ರೊಳಗೆ ಬಂಧಿಸಿ: ಸಂತೇಬೆನ್ನೂರಿನಲ್ಲಿ ಕಚೇರಿ ಹೊಂದಿರುವ ಎಲ್‌ ಆ್ಯಂಡ್‌ ಟಿ ಫೈನಾನ್ಸ್‌ ಕಂಪನಿಯಿಂದ ತೋಪೆನಹಳ್ಳಿ ಗ್ರಾಮದಲ್ಲಿ ಸ್ವಸಹಾಯ ಸಂಘದ ಐವರು ಮಹಿಳೆಯರಾದ ರೇಖಾ, ಸರೋಜಮ್ಮ, ಶಾಂತಮ್ಮ, ಭಾಗ್ಯಮ್ಮ, ನಾಗರತ್ನಮ್ಮ ಅವರಿಗೆ 25 ಸಾವಿರದಿಂದ 50 ಸಾವಿರದವರೆಗೂ ಸಾಲ ನೀಡಲಾಗಿದೆ.

ಕಂಪನಿ ಏಜೆಂಟರೇ ಗ್ರಾಮಕ್ಕೆ ಬಂದು ದಾಖಲೆಗಳನ್ನು ಪಡೆದು ಸಾಲ ನೀಡಿದ್ದಾರೆ. ಈ ವೇಳೆ ಪ್ರತಿ ತಿಂಗಳು .1350 ಕಂತು ನಿಗದಿಪಡಿಸಿದ್ದಾರೆ. ಆರು ತಿಂಗಳಿನಿಂದ ಕಂತು ಪಾವತಿಸದ ಹಿನ್ನೆಲೆಯಲ್ಲಿ ಕಂಪನಿಯು ಐವರು ಮಹಿಳೆಯರ ವಿರುದ್ಧ ಕೋಲ್ಕತಾ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಿದೆ.

ವಿಚಾರಣೆಗೆ ಹಾಜರಾಗದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಇದೀಗ ಈ ಮಹಿಳೆಯರ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್‌ ಜಾರಿಗೊಳಿಸಿದೆ. ಆರೋಪಿ ಮಹಿಳೆಯರನ್ನು ನÜ.30ರೊಳಗೆ ಬಂಧಿಸಿ ಹಾಜರುಪಡಿಸುವಂತೆ ಕೋರ್ಟ್‌ ಆದೇಶಿಸಿದೆ. ಬಂಧನ ವಾರಂಟ್‌ ಬಂದುದರಿಂದ ಮಹಿಳೆಯರಿಗೆ ದಿಕ್ಕೇ ತೋಚದಂತಾಗಿದ್ದಾರೆ.

ಗ್ರಾಮದಲ್ಲಿ ಆತಂಕ:

ನಾವು ಪ್ರತಿ ತಿಂಗಳು ತಪ್ಪದೇ ಕಂತು ಪಾವತಿ ಮಾಡುತ್ತಿದ್ದೆವು. ಆದರೆ 50 ರುಪಾಯಿ ಕಡಿಮೆಯಾದರೂ ಕಂಪನಿಯವರು ಹಣ ಮುಟ್ಟುತ್ತಿರಲಿಲ್ಲ. ಇದರಿಂದ ಒಂದೇ ಸಲ ನಮ್ಮ ಕಂತು ಪಾವತಿಗೆ ತೊಂದರೆಯಾಯಿತು. ಇದೀಗ ಕೋರ್ಟ್‌ ನೋಟಿಸ್‌ ನಮ್ಮನ್ನು ಮನೆ ಬಿಡುವಂತೆ ಮಾಡಿದೆ. ನನ್ನ ಗಂಡನಿಗೆ ಅಪಘಾತ ಆಗಿ ಚಿಕಿತ್ಸೆಗೆ ಹಣವಿಲ್ಲದ ಸಂದರ್ಭದಲ್ಲಿ ಕಂತು ಪಾವತಿಸಿ ಎಂದರೆ ಹೇಗೆ ಪಾವತಿಸುವುದು? ಎಂದು ರೇಖಾ ಅವರು ಅಳಲು ತೋಡಿಕೊಂಡಿದ್ದಾರೆ.

ಸರ್ಕಾರ ಮಧ್ಯ ಪ್ರವೇಶಿಸದಿದ್ದರೆ ನಮಗೆ ಜೈಲೇ ಗತಿ 

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬ್ಯಾಂಕ್‌ ಅಧಿಕಾರಿಗಳ ಸಭೆಯಲ್ಲಿ ಕೃಷಿ ಕೂಲಿ ಕಾರ್ಮಿಕರಿಗೆ ಯಾವುದೇ ತೊಂದರೆ ಕೊಡಬೇಡಿ ಎಂದರೂ ಹೇಳಿದ ಮೇಲೂ ನೋಟಿಸ್‌ ಕೊಟ್ಟಿದ್ದಾರೆ. ನಮಗೆ ಆತ್ಮಹತ್ಯೆ ಬಿಟ್ಟರೆ ಬೇರೆ ದಾರಿ ಕಾಣುತ್ತಿಲ್ಲ. ಸರ್ಕಾರವೇ ನಮ್ಮ ಸಂಕಷ್ಟಬಗೆಹರಿಸಬೇಕೆಂದು ಮನವಿ ಮಾಡಿದ್ದಾರೆ.

ಈ ಹಿಂದೆ ಬೆಳಗಾವಿಯಲ್ಲಿ ಎಕ್ಸಿಸ್‌ ಬ್ಯಾಂಕ್‌ನವರು ಸಾಲ ಮರುಪಾವತಿಸದ ರೈತರಿಗೆ ಕೋಲ್ಕತಾ ಕೋರ್ಟ್‌ ಮೂಲಕ ಬಂಧನ ವಾರೆಂಟ್‌ ಹೊರಡಿಸಿತ್ತು. ಈ ಮೂಲಕ ರೈತರನ್ನು ಬೆಳಗಾವಿಯಿಂದ ಕೋಲ್ಕತಾಗೆ ಅಲೆದಾಡಿಸಲು ಮುಂದಾಗಿತ್ತು. ಇದರಿಂದ ಕಂಗಾಲಾಗಿದ್ದ ರೈತರು ಕೆಲ ದಿನ ಮನೆ,ಮಠ ಬಿಟ್ಟು ತಲೆಮರೆಸಿಕೊಂಡಿದ್ದರು.

ಬ್ಯಾಂಕ್‌ನ ಈ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದಲ್ಲದೆ ರೈತ ಸಂಘಟನೆಗಳು ಬ್ಯಾಂಕ್‌ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದವು. ರಾಜ್ಯದಲ್ಲಿ ಪಡೆದ ಸಾಲಕ್ಕೆ ಕೋಲ್ಕತಾ ಕೋರ್ಟ್‌ನಿಂದ ಯಾಕೆ ವಾರಂಟ್‌ ಹೊರಡಿಸಬೇಕು ಎಂದು ಪ್ರಶ್ನಿಸಿದ್ದರು.