ಕಾಫಿ ಬೆಳೆಗಾರ ವಂಶದ ಏಕೈಕ ಕುಡಿ ಸಿದ್ಧಾರ್ಥ| | ಹುಟ್ಟೂರಿನ ಜನರಿಗಾಗಿ ಶಾಲಾ- ಕಾಲೇಜು ನಡೆಸುತ್ತಿದ್ದ ಎಸ್‌.ಎಂ. ಕೃಷ್ಣ ಅಳಿಯ| 12 ಸಾವಿರ ಎಕರೆ ಕಾಫಿ ತೋಟದ ಒಡೆಯ| 

ಚಿಕ್ಕಮಗಳೂರು[ಜು.31]: ಯಶಸ್ವಿ ಉದ್ಯಮಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಸಿದ್ಧಾರ್ಥ ಅವರ ಹುಟ್ಟೂರು ಮೂಡಿಗೆರೆ ತಾಲೂಕು ಚೇತನ ಹಳ್ಳಿ. ಗಂಗಯ್ಯ ಹೆಗ್ಡೆ - ವಾಸಂತಿ ಹೆಗ್ಡೆ ದಂಪತಿಯ ಏಕೈಕ ಪುತ್ರ ಸಿದ್ಧಾರ್ಥ ಹೆಗ್ಡೆ ಹುಟ್ಟಿದ್ದು 1959ರ ಆಗಸ್ಟ್‌ 23ರಂದು. ಗಂಗಯ್ಯ ಹೆಗ್ಡೆ ಅವರ ಮೂಲ ಊರು ಮೂಡಿಗೆರೆ ತಾಲೂಕಿನ ತನೂಡಿ ಗ್ರಾಮ. ಅವರ ಪೂರ್ವಿಕರು ಕಾಫಿ ಬೆಳೆಗಾರರು. ಅಲ್ಲಿಂದ ಅವರು ಮೂಡಿಗೆರೆ ಮತ್ತು ಬೇಲೂರು ತಾಲೂಕಿನ ಚೇತನಹಳ್ಳಿ ಗ್ರಾಮಕ್ಕೆ ಬಂದು ಅಲ್ಲಿ ಕಾಫಿ ತೋಟವನ್ನು ಮಾಡುವ ಜತೆಗೆ ಕಾಫಿ ವ್ಯಾಪಾರ ಮಾಡುತ್ತಿದ್ದರು.

ಮಂಗಳೂರಿನಲ್ಲಿ ಎಂ.ಎ. ಪದವಿ:

ಚೇತನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಸಿದ್ಧಾರ್ಥ, ನಂತರ ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನಲ್ಲಿ ಶಿಕ್ಷಣ ಮುಂದುವರಿಸಿದರು. ಬಳಿಕ ಮಂಗಳೂರಿನ ಸೇಂಟ್‌ ಅಲೋಷಿಯಸ್‌ ಕಾಲೇಜಿನಲ್ಲಿ ಪದವಿ ಪಡೆದ ಅವರು, ಮಂಗಳೂರು ವಿಶ್ವವಿದ್ಯಾಲಯದ ದೂರ ಶಿಕ್ಷಣ ಕೇಂದ್ರದಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದುಕೊಂಡಿದ್ದರು. æಂಗಳೂರಿನಲ್ಲಿ ನೆಲೆಸಿದ್ದ ಸಿದ್ಧಾರ್ಥ, ಇತ್ತ ಚಿಕ್ಕಮಗಳೂರು ಜಿಲ್ಲೆಯನ್ನು ಮರೆಯಲಿಲ್ಲ. ಚಿಕ್ಕಮಗಳೂರಿನ ಕತ್ತಲೆಖಾನ್‌, ಮುಳ್ಳಯ್ಯನಗಿರಿ, ಮೂಡಿಗೆರೆ ಮತ್ತು ಬೇಲೂರು ತಾಲೂಕಿನ ಚೇತನಹಳ್ಳಿ, ಚಂದ್ರಾಪುರ, ಕುದುರೆಗುಂಡಿಯಲ್ಲಿ ಸುಮಾರು 12 ಸಾವಿರ ಎಕರೆಯಷ್ಟುಕಾಫಿ ತೋಟ ಖರೀದಿಸಿ ಅವುಗಳನ್ನು ಅಭಿವೃದ್ಧಿ ಪಡಿಸಿದರು. ತಮ್ಮದೇ ಆದ ಎಬಿಸಿ ಸಂಸ್ಥೆಯಲ್ಲಿ ಕಾಫಿ ಸಂಶೋಧನಾ ಕೇಂದ್ರವನ್ನು ತೆರೆದಿದ್ದರು.

ಚಿಕ್ಕಮಗಳೂರಿನಲ್ಲೇ ಕಂಪನಿ ಸ್ಥಾಪನೆ

ಚಿಕ್ಕಮಗಳೂರು- ಮೂಡಿಗೆರೆ ರಸ್ತೆಯಲ್ಲಿ ಎಬಿಸಿ ಕಂಪನಿಯನ್ನು 1993ರಲ್ಲಿ ಸ್ಥಾಪಿಸಲಾಯಿತು. ಚಿಕ್ಕಮಗಳೂರು, ಹಾಸನ ಮತ್ತು ಮಡಿಕೇರಿ ಜಿಲ್ಲೆಗಳಲ್ಲಿ ಬೆಳೆಗಾರರಿಂದ ಕಾಫಿಯನ್ನು ಖರೀದಿ ಮಾಡಿ ಅದನ್ನು ವಿದೇಶಕ್ಕೆ ರಫ್ತು ಮಾಡುತ್ತಿದ್ದರು. ಸದ್ಯ ವಾರ್ಷಿಕ 28 ಸಾವಿರ ಟನ್‌ ಕಾಫಿ ವಿದೇಶಗಳಿಗೆ ರಫ್ತು ಆಗುತ್ತಿದೆ.

ನಾಪತ್ತೆಯಾದ ಕಾಫಿ ಡೇ ಒಡೆಯ ಮೃತದೇಹ ಪತ್ತೆ: ಸೋಮವಾರದಿಂದ ಏನೇನಾಯ್ತು?

ಕಾಫಿ ಉದ್ಯಮದಲ್ಲಿ ಬೆಳವಣಿಗೆಯನ್ನು ಕಂಡಿದ್ದ ಸಿದ್ಧಾರ್ಥ ಇವರು 1996ರಲ್ಲಿ ಬೆಂಗಳೂರಿನ ಬ್ರಿಗೇಡ್‌ ರಸ್ತೆಯಲ್ಲಿ ಕೆಫೆ ಕಾಫಿ ಡೇ ಮೊದಲ ಶಾಪ್‌ ಆರಂಭಿಸಿದರು. ಇದೀಗ ಕಾಫಿ ಡೇ, ಕರ್ನಾಟಕ ರಾಜ್ಯ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ಸುಮಾರು 1550 ಕೇಂದ್ರಗಳನ್ನು ಹೊಂದಿವೆ. 2000ರಲ್ಲಿ ಐಟಿ ಕಂಪನಿಯಲ್ಲಿ ಹೂಡಿಕೆ ಮಾಡುವವರಿಗೆ ಮಾರ್ಗದರ್ಶಕರಾಗಿ ಗ್ಲೋಬಲ್‌ ಟೆಕ್ನಾಲಜಿ ವೆಂಚರ್ಸ್‌ ಆರಂಭಿಸಿದ್ದರು. ಜಿಟಿವಿ, ಮೈಂಡ್‌ ಟ್ರೀ, ಲಿಕ್ವಿಡ್‌ ಕ್ರಿಸ್ಟಲ್‌, ವೇ ಟು ವೆಲ್ತ್‌ ಮತ್ತು ಇಟ್ಟಿಯಂ ಕಂಪನಿಯಲ್ಲಿ ಪಾಲುದಾರಿಕೆ ಹೊಂದಿದ್ದಾರೆ. ಕಾಫಿ ಉದ್ಯಮದ ಜೊತೆ ಚಿಕ್ಕಮಗಳೂರಿನಲ್ಲಿ ಕತ್ತಲೆಕಾಡು ಎಸ್ಟೇಟ್‌ನಲ್ಲಿ ಪೀಠೋಪಕರಣ ಕಂಪನಿ ತೆರೆದಿದ್ದ ಮಾಡಿದ್ದ ಸಿದ್ಧಾರ್ಥ, ಗಯಾನದಲ್ಲಿ ಮಳೆ ಕಾಡಿನಿಂದ ಮರಗಳನ್ನ ತರಲು ಯೋಜನೆ ರೂಪಿಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ರಫ್ತು ಮತ್ತು ಆಮದು ಸಂಸ್ಥೆಯ ಪಾಲುದಾರರು ಆಗಿದ್ದು, ಈ ಸಂಸ್ಥೆಯ ಕೇಂದ್ರ ಸ್ಥಾನ ಚೆನ್ನೈ. ವೆಸ್ಟ್‌ ಇಂಡೀಸ್‌ನ ಗಯಾನದಲ್ಲಿ ಟಿಂಬರ್‌ ವ್ಯವಹಾರ ನಡೆಸುತ್ತಿದ್ದರು. ಮಲೇಷಿಯಾ, ಸಿಂಗಾಪುರ, ಇಟಲಿ, ಯೂರೋಪ್‌ ರಾಷ್ಟ್ರಗಳಲ್ಲಿ ವಿವಿಧ ಉದ್ಯಮಗಳನ್ನು ನಡೆಸುತ್ತಿದ್ದರು.

ಆಸ್ಪತ್ರೆಗೆ ಶಂಕುಸ್ಥಾಪನೆ ಮಾಡಿದ್ದರು

ಚಿಕ್ಕಮಗಳೂರು ಜಿಲ್ಲೆಯ ಜನತೆಗೆ ಅದರಲ್ಲೂ ಬಡವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಇಲ್ಲಿನ ಅಂಬರ್‌ ವ್ಯಾಲಿ ಸ್ಕೂಲ್‌ ಬಳಿ ಕಳೆದ 3 ನಾಲ್ಕು ವರ್ಷಗಳ ಹಿಂದೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಕಾರ್ಯಕ್ರಮಕ್ಕೆ ಸಿದ್ಧಾರ್ಥ ಅವರ ಮಾವ, ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಹಾಗೂ ಕೇಂದ್ರದ ಸಚಿವರು ಆಗಮಿಸಿದ್ದರು. ಅಂಬರ್‌ ವ್ಯಾಲಿ ರೆಸಿಡೆನ್ಷಿಯಲ್‌ ಸ್ಕೂಲ್‌ ತೆರೆದಿದ್ದರು. ಮಲೆನಾಡಿನ ಮಕ್ಕಳಿಗೆ ನಿರುದ್ಯೋಗ ಸಮಸ್ಯೆ ಕಾಡಬಾರದು. ಅವರು ಸ್ವತಂತ್ರರಾಗಿ ಬದುಕಲಿ ಎಂಬ ಮಹದಾಸೆಯಿಂದ ಇಲ್ಲಿನ ಅಂಬರ ವ್ಯಾಲಿ ಶಾಲೆಯ ಬಳಿ ಎಸ್‌ವಿಜಿಎಚ್‌ ವೃತ್ತಿಪರ ತರಬೇತಿ ಕೇಂದ್ರವನ್ನು ಸ್ಥಾಪಿಸಿ, ಅಲ್ಲಿ ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್‌ ಹಾಗೂ ಬಹು ಬೇಡಿಕೆಯ ಸರ್ಟಿಫಿಕೇಟ್‌ ಕೋರ್ಸ್‌ಗಳ ತರಬೇತಿ ಕೇಂದ್ರವನ್ನು ಸ್ಥಾಪಿಸಿದರು. ಅತ್ತ ಹೋಟೆಲ್‌ ಉದ್ಯಮದಲ್ಲೂ ಆಸಕ್ತಿ ಹೊಂದಿದ್ದ ಅವರು ಇಲ್ಲಿನ ಮೂಡಿಗೆರೆ ರಸ್ತೆಯಲ್ಲಿ ಸೆರಾಯಿ ರೆಸಾರ್ಟ್‌ವನ್ನು ನಿರ್ಮಾಣ ಮಾಡಿದ್ದಾರೆ.

ಸಿದ್ಧಾರ್ಥ ಅವರು ಮಾಜಿ ಮುಖ್ಯಮಂತ್ರಿ ಎಸ್‌.ಎಸ್‌. ಕೃಷ್ಣ ಅವರ ಪುತ್ರಿ ಮಾಳವಿಕಾ ಅವರನ್ನು ಮದುವೆಯಾಗಿದ್ದು, ಅವರಿಗೆ ಅಮರ್ತ್ಯ, ಈಶಾನ್‌ ಎಂಬ ಇಬ್ಬರು ಗಂಡು ಮಕ್ಕಳು ಇದ್ದಾರೆ. ಅವರು ಎಂ.ಟೆಕ್‌ ಶಿಕ್ಷಣ ಪಡೆದಿದ್ದಾರೆ. ಅವರಿಗೆ ತಾವು ನಡೆಸುತ್ತಿರುವ ವ್ಯವಹಾರದ ಬಗ್ಗೆ ಸಿದ್ಧಾರ್ಥ ತಿಳಿಸಿಕೊಟ್ಟಿದ್ದಾರೆ.

ಅಂದು ತಂದೆ ಕೊಟ್ಟ ಕೇವಲ 20 ಸಾವಿರ ರು.ನಲ್ಲಿ ಇಂದು ಸಿದ್ಧಾರ್ಥ 22000 ಕೋಟಿ ರು. ಒಡೆಯರಾಗಿದ್ದರು.

ಶಿಕ್ಷಣ ಮುಗಿಯುತ್ತಿದ್ದಂತೆ ಅವರು ಮುಂಬೈಗೆ ತೆರಳಿ ಅಲ್ಲಿನ ಜೆ.ಎಂ. ಫೈನಾನ್ಸಿಯಲ್‌ ಲಿಮಿಟೆಡ್‌ನಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ನಂತರ ಮಹೇಂದ್ರ ಕಂಪನಿ ನೇತೃತ್ವದಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಪೋಟ್ಪೋಲಿಯೊ ಮ್ಯಾನೇಜ್ಮೆಂಟ್‌ ಮತ್ತು ಸೆಕ್ಯುರಿಟಿ ವಹಿವಾಟಿನ ಟ್ರೈನಿಯಾಗಿ ಕೆಲಸ ಮಾಡಿ ಮರಳಿ ಚೇತನಹಳ್ಳಿಗೆ ಆಗಮಿಸಿದರು. ತಂದೆಯ ಬಳಿ ಸ್ವಂತ ಉದ್ಯೋಗ ಮಾಡಲು ಒಂದಿಷ್ಟುಹಣ ಬೇಕೆಂದು ಕೇಳಿ ಕೊಂಡಾಗ ಗಂಗಯ್ಯ ಹೆಗ್ಡೆ ಅವರು 20 ಸಾವಿರ ರುಪಾಯಿ ಕೊಟ್ಟರಂತೆ, ಅವರು ತಮ್ಮ 24 ವರ್ಷ ವಯಸ್ಸಿನಲ್ಲೇ ಷೇರು ಖರೀದಿ ಆರಂಭಿಸಿದರು. ಶಿವನ್‌ ಸೆಕ್ಯುರಿಟಿ ಕಂಪನಿಯನ್ನು ಹುಟ್ಟು ಹಾಕಿದರು, ಈಗ ಇದು ವೆ ಟು ವೆಲ್ತ್‌ ಎಂಬ ಹೆಮ್ಮರವಾಗಿದೆ. ಇದರ ಕೇಂದ್ರ ಕಚೇರಿ ಚೆನ್ನೈನಲ್ಲಿದೆ.