ರಾಮನಗರ :  ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ ಮತ್ತು ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿ, ಎರಡೂ ವಾಹನಗಳು ಬೆಂಕಿಗೆ ಆಹುತಿ ಆಗಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ದೇವಿಗೆರೆ ಬಳಿ ಸೋಮವಾರ ನಡೆದಿದೆ.

ಬೆಂಗಳೂರಿನ ಮಡಿವಾಳದ ಅವಿನಾಶ್‌, ಉತ್ತರಹಳ್ಳಿಯ ಪ್ರದೀಪ್‌, ರಾಮನಗರ ಜಿಲ್ಲೆ ಕನಕಪುರದ ಬಸವರಾಜ್‌ ಮೃತರು.

ಮಾರ್ಕೆಟ್‌ನಿಂದ ಕಗ್ಗಲೀಪುರಕ್ಕೆ (ಕೆಎ- 01, ಎಫ್‌ಎ- 931) ಬಿಎಂಟಿಸಿ ಬಸ್‌ ಸಂಚರಿಸುತಿತ್ತು. ಕುಂಬಳಗೂಡು ಕಡೆಯಿಂದ ಪಲ್ಸರ್‌ ಬೈಕಿನಲ್ಲಿ ಮೂವರು ಕಗ್ಗಲೀಪುರ ಕಡೆಗೆ ಪ್ರಯಾಣಿಸುತ್ತಿದ್ದರು.

ಬೆಂಗಳೂರು ಹೊರವಲಯದ ಕುಂಬಳಗೂಡು- ಕಗ್ಗಲೀಪುರ ಮಾರ್ಗ ಮಧ್ಯದ ದೇವಿಗೆರೆ ಗ್ರಾಮದ ಬಳಿ ಪಲ್ಸರ್‌ ಬೈಕ್‌ ಲಾರಿಯನ್ನು ಹಿಂದಿಕ್ಕುವ ಭರದಲ್ಲಿ ಎದುರಿಗೆ ಬರುತ್ತಿದ್ದ ಬಿಎಂಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಪಲ್ಸರ್‌ ಬೈಕ್‌ ಬಸ್ಸಿನ ಕೆಳಗೆ ತೂರಿದ್ದು, ಪೆಟ್ರೋಲ್‌ ಸೋರಿಕೆಯಾಗಿ ಸ್ಪಾರ್ಕ್ನಿಂದ ಬೆಂಕಿ ಹೊತ್ತಿಕೊಂಡಿದೆ.

ಬೈಕಿಗೆ ತಗುಲಿದ್ದ ಬೆಂಕಿ ಬಸ್ಸಿಗೂ ಆವರಿಸಿದೆ. ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರು ಬಸ್‌ನಿಂದ ತಕ್ಷಣ ಇಳಿದು ಪ್ರಾಣ ಉಳಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಎರಡು ಅಗ್ನಿ ಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದರು. ಆದರೂ ಬೈಕ್‌ ಮತ್ತು ಬಸ್‌ ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.

ಅಪಘಾತದಲ್ಲಿ ಸಾವನ್ನಪ್ಪಿದ ಮೂವರ ಬಳಿ ಇದ್ದ ಬ್ಯಾಗ್‌ನಲ್ಲಿ ಡ್ಯಾಗರ್‌, ದೊಣ್ಣೆ ಪತ್ತೆಯಾಗಿರುವುದು ಸಾಕಷ್ಟುಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕಗ್ಗಲೀಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.