ನವದೆಹಲಿ (ಡಿ. 02): ಪಾಕಿಸ್ತಾನ ಗಡಿಗೆ ಸಮೀಪದಲ್ಲಿರುವ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಮುಸಲ್ಮಾನರ ಸಂಖ್ಯೆ ಅನಿರೀಕ್ಷಿತ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಕೇಂದ್ರ ಗೃಹ ಸಚಿವಾಲಯಕ್ಕೆ ವರದಿಯೊಂದನ್ನು ಸಲ್ಲಿಸಿದೆ. ಆದರೆ ಈ ವರದಿ ಗೃಹ ಇಲಾಖೆಯಲ್ಲಿ ಭಾರಿ ಅಸಮಾಧಾನಕ್ಕೆ ಕಾರಣವಾಗಿದೆ.

ಕಳೆದ ಕೆಲವು ವರ್ಷಗಳಿಂದ ಜೈಸಲ್ಮೇರ್‌ನ ಗಡಿ ಭಾಗಗಳಲ್ಲಿ ಮುಸ್ಲಿಮರ ಜನಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಮುಸ್ಲಿಮ್‌ ಧಾರ್ಮಿಕ ಕೇಂದ್ರಗಳ ಸಂಖ್ಯೆಯಲ್ಲೂ ಏರಿಕೆ ಕಂಡುಬಂದಿದೆ. ಈ ಬೆಳವಣಿಗೆಗಳಿಂದಾಗಿ ಮೂಲಭೂತವಾದಿ ಶಕ್ತಿಗಳು ಸ್ಥಳೀಯ ಜನರಿಗೆ ಆಮಿಷವೊಡ್ಡಿ ಸೇನೆಯ ಚಲನವಲನದ ಬಗ್ಗೆ ಮಾಹಿತಿ ಪಡೆಯಬಹುದು ಎಂಬ ಆತಂಕವನ್ನು ವರದಿಯಲ್ಲಿ ವ್ಯಕ್ತಪಡಿಸಲಾಗಿದೆ ಎಂದು ಹೇಳಲಾಗಿದೆ.

ಆದರೆ ಈ ವರದಿಗೆ ಕೇಂದ್ರ ಗೃಹ ಸಚಿವಾಲಯದ ಹಲವು ಹಿರಿಯ ಅಧಿಕಾರಿಗಳು ಆಕ್ಷೇಪ ಎತ್ತಿದ್ದಾರೆ. ಕೇಂದ್ರ ಸರ್ಕಾರ ಮುಸ್ಲಿಮರನ್ನು ಓಲೈಸಲು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಇಂತಹ ಸಂದರ್ಭದಲ್ಲಿ ಬಿಎಸ್‌ಎಫ್‌ ಕೊಟ್ಟಿರುವ ವರದಿ ಆ ಸಮುದಾಯದಲ್ಲಿ ಅನುಮಾನ ಹಾಗೂ ಅಭದ್ರತೆಗೆ ಕಾರಣವಾಗಬಹುದು. ತಮ್ಮನ್ನು ವ್ಯವಸ್ಥಿತವಾಗಿ ತನಿಖೆಗೊಳಪಡಿಸಲಾಗುತ್ತಿದೆ. ತಮ್ಮ ಮೇಲೆ ಬೇಹುಗಾರಿಕೆ ನಡೆಯುತ್ತಿದೆ ಎಂದು ಅವರಿಗೆ ಅನ್ನಿಸಬಹುದು ಎಂದು ಐಪಿಎಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಲ್ಲದೆ ಹಿಂದು ಬಾಹುಳ್ಯದ ಪ್ರದೇಶಗಳಲ್ಲಿ ಇಂತಹ ಸಮೀಕ್ಷೆಯನ್ನೇಕೆ ಬಿಎಸ್‌ಎಫ್‌ ನಡೆಸಿಲ್ಲ? ಎಂದು ಪ್ರಶ್ನಿಸಿರುವ ಆ ಅಧಿಕಾರಿ, ಭಯೋತ್ಪಾದನೆ ವಿರುದ್ಧ ಹೋರಾಡುವ ಹೆಸರಿನಲ್ಲಿ ಧಾರ್ಮಿಕ ನೆಲೆಗಟ್ಟಿನ ಇಂತಹ ವರದಿಗಳು ಒಂದು ನಿರ್ದಿಷ್ಟಸಮುದಾಯದಲ್ಲಿ ಆತಂಕ ಸೃಷ್ಟಿಸುತ್ತವೆ ಎಂದು ಹೇಳಿದ್ದಾರೆ.