ಶಿಲ್ಲಾಂಗ್‌ (ಫೆ. 20):  ಪುಲ್ವಾಮಾ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಕಾಶ್ಮೀರಿ ವ್ಯಾಪಾರಿಗಳಿಗೆ ಹಾಗೂ ಕಾಶ್ಮೀರ ಪ್ರವಾಸಕ್ಕೆ ಬಹಿಷ್ಕಾರ ಹಾಕುವಂತೆ ಮೇಘಾಲಯ ರಾಜ್ಯಪಾಲ ತಥಾಗತ ರಾಯ್‌ ಕರೆ ನೀಡಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.

ಸಂವಿಧಾನಿಕ ಹುದ್ದೆಯಲ್ಲಿದ್ದರೂ ರಾಜಕಾರಣಿಗಳಂತೆ ವಿವಾದ ಮೈಮೇಲೆ ಎಳೆದುಕೊಂಡಿರುವ ರಾಯ್‌ ಅವರು, ರಾಜ್ಯಪಾಲರು ಎಂಬುದನ್ನು ಮರೆತು ಟೀವಿ ಚಾನೆಲ್‌ಗಳ ಚರ್ಚೆಯಲ್ಲೂ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.

‘ಕಾಶ್ಮೀರಕ್ಕೆ ಹೋಗಬೇಡಿ. ಮುಂದಿನ 2 ವರ್ಷ ಅಮರನಾಥ ಯಾತ್ರೆಗೂ ತೆರಳಬೇಡಿ. ಕಾಶ್ಮೀರಿ ಎಂಪೋರಿಯಂಗಳಿಂದ ಅಥವಾ ಪ್ರತಿ ಚಳಿಗಾಲದಲ್ಲೂ ಬರುವ ಕಾಶ್ಮೀರಿ ವ್ಯಾಪಾರಿಗಳಿಂದ ವಸ್ತುಗಳನ್ನು ಖರೀದಿಸಬೇಡಿ. ಕಾಶ್ಮೀರಕ್ಕೆ ಸಂಬಂಧಿಸಿದ ಎಲ್ಲವನ್ನೂ ಬಹಿಷ್ಕರಿಸಿ ಎಂದು ಭಾರತೀಯ ಸೇನೆಯ ನಿವೃತ್ತ ಕರ್ನಲ್‌ವೊಬ್ಬರು ಕರೆ ನೀಡಿದ್ದಾರೆ. ಇದಕ್ಕೆ ನನ್ನ ಒಲವೂ ಇದೆ’ ಎಂದು ತಥಾಗತ ಟ್ವೀಟ್‌ ಮಾಡಿದ್ದಾರೆ.

1971ರ ಯುದ್ಧದ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿ ಪಾಕಿಸ್ತಾನ ಸೇನೆ ಹತ್ಯಾಕಾಂಡ, ಅತ್ಯಾಚಾರಗಳನ್ನು ನಡೆಸಿತು. ಆ ಹಂತದವರೆಗೆ ಹೋಗುವುದು ಬೇಡ. ಸ್ವಲ್ಪ ಅಂತರದಿಂದಲಾದರೂ ಆ ತಂತ್ರ ಬಳಸಬೇಕು ಎಂದು ಮತ್ತೊಂದು ಟ್ವೀಟ್‌ ಮಾಡಿದ್ದಾರೆ. ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಟೀವಿ ಚಾನೆಲ್‌ಗಳ ಜತೆ ಫೋನ್‌ನಲ್ಲಿ ಮಾತನಾಡಿ ಸಮರ್ಥಿಸಿಕೊಂಡಿದ್ದಾರೆ.

ತಥಾಗತ ಅವರ ಹೇಳಿಕೆಗೆ ಒಮರ್‌ ಅಬ್ದುಲ್ಲಾ ತಿರುಗೇಟು ನೀಡಿದ್ದು, ಕಾಶ್ಮೀರ ವಿಪ್ಲವಕ್ಕೆ ಇಂತಹ ಮತಾಂಧರೇ ಕಾರಣ. ತಥಾಗತ ಅವರೇ, ನಮ್ಮ ನದಿಗಳಿಂದ ವಿದ್ಯುತ್‌ ಉತ್ಪಾದಿಸುತ್ತೀರಲ್ಲ, ಅದನ್ನೂ ಏಕೆ ನಿಲ್ಲಿಸಬಾರದು? ಇಂತಹ ವ್ಯಕ್ತಿಗಳಿಗೆ ಕಾಶ್ಮೀರ ಬೇಕು, ಕಾಶ್ಮೀರಿಗಳು ಬೇಡ ಎಂದು ಕಿಡಿಕಾರಿದ್ದಾರೆ.