ಚಂಡೀಗಢ: ಹೆದ್ದಾರಿಗಳ ಬದಿಯಿಂದ 500 ಮೀ. ವ್ಯಾಪ್ತಿಯಲ್ಲಿ ಮದ್ಯದ ಅಂಗಡಿಗಳನ್ನು ನಿಷೇಧಿಸಿ ಸುಪ್ರೀಂಕೋರ್ಟ್‌ ಕಳೆದ ವರ್ಷ ಆದೇಶಿಸಿತ್ತು. ಪರಿಣಾಮ ಇಂಥ ಬಹುತೇಕ ಮದ್ಯದ ಅಂಗಡಿಗಳು ಬಂದ ಆಗಿದ್ದವು. ಆದರೆ, ಶೇ.70ರಷ್ಟುಮದ್ಯದ ಅಂಗಡಿಗಳು ಇದೀಗ ಮರಳಿ ಆರಂಭವಾಗಿವೆ ಹೆದ್ದಾರಿಗಳಲ್ಲಿ ಮದ್ಯ ನಿಷೇಧಕ್ಕೆ ಕಾರಣರಾಗಿದ್ದ ಅರ್ಜಿದಾರ ಹರ್ಮನ್‌ ಸಿಧು ಹೇಳಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳ ಬದಿಯಲ್ಲಿನ ಮದ್ಯದಂಗಡಿ ತೆರವಿಗೆ ಕೋರ್ಟ್‌ ಆದೇಶಿಸಿದ್ದ ಹಿನ್ನೆಲೆಯಲ್ಲಿ, ಸರ್ಕಾರಗಳು ಅಂತಹ ಹೆದ್ದಾರಿಗಳನ್ನು ಜಿಲ್ಲಾ ಹೆದ್ದಾರಿಗಳನ್ನಾಗಿ ಪರಿವರ್ತಿಸುವ ಮೂಲಕ ಮದ್ಯದಂಗಡಿ ಮತ್ತೆ ತೆರೆಯಲು ಅನುಕೂಲ ಮಾಡಿಕೊಟ್ಟಿದ್ದವು. ಪರಿಣಾಮ ಇಂಥ ಅಂಗಡಿಗಳು ಮರಳಿ ಆರಂಭವಾಗಿದೆ.

 ’ನನ್ನ ತವರು ನಗರ ಚಂಡೀಗಢದಲ್ಲೇ ಇಂತಹ ಅತ್ಯಧಿಕ ವಿನಾಯ್ತಿ ನೀಡಲಾಗಿರುವುದಕ್ಕೆ ನನಗೆ ಬೇಸರವಾಗಿದೆ. ಕೋರ್ಟ್‌ ಆದೇಶದಿಂದ ಹೇಗೆ ತಪ್ಪಿಸಿಕೊಳ್ಳಬಹುದು ಮತ್ತು ಅದನ್ನು ವಿಫಲಗೊಳಿಸಬಹುದು ಎಂಬುದನ್ನು ಚಂಡೀಗಢ ದೇಶಕ್ಕೇ ತೋರಿಸಿಕೊಟ್ಟಿರುವುದು ವಿಷಾಧನೀಯ’ ಎಂದು ಸಿಧು ಹೇಳಿದ್ದಾರೆ. 20 ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಸೊಂಟದ ಕೆಳಗೆ ಬಲವನ್ನು ಕಳೆದುಕೊಂಡಿರುವ ಸಿಧು ಎನ್‌ಜಿಒ ಆರಂಭಿಸಿ, ರಸ್ತೆ ಬದಿಗಳ ಮದ್ಯದ ಅಂಗಡಿಗಳ ವಿರುದ್ಧ ಹೋರಾಟ ನಡೆಸಿಕೊಂಡು ಬಂದಿದ್ದಾರೆ.