ಬೆಂಗಳೂರು(ಅ.21): ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ. ಅದರಂತೆ ಇಂದಿನ ಅಸಂಖ್ಯ ಘಟನಾವಳಿಗಳ ಸಮುದ್ರದಿಂದ ಟಾಪ್ 10 ಸುದ್ದಿ ಎಂಬ ಬೊಗಸೆಯಲ್ಲಿಡಿದು ಓದುಗರ ಮುಂದಿಟ್ಟಿದೆ. ಸುವರ್ಣನ್ಯೂಸ್.ಕಾಂ. ಓದಿರಿ, ಓದಿಸಿರಿ.

1. ‘ನೋ ಕಾಂಗ್ರೆಸ್, ನೋ ಬಿಜೆಪಿ, ಓನ್ಲಿ ಶಿವಸೇನೆ’; ಹುಬ್ಬಳ್ಳಿ ಸ್ಫೋಟಕ್ಕೆ ದೇವರ ಪ್ರಸಾದ ಟ್ವಿಸ್ಟ್!

ನೈಋತ್ಯ ರೈಲ್ವೇಯ ಕೇಂದ್ರವಾಗಿರುವ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ನಡೆದ ಸ್ಫೋಟಕ್ಕೆ ಟ್ವಿಸ್ಟ್ ಸಿಕ್ಕಿದೆ. ಬಾಕ್ಸ್ ಮೇಲೆ ‘ನೋ ಕಾಂಗ್ರೆಸ್, ನೋ ಬಿಜೆಪಿ, ಓನ್ಲಿ ಶಿವಸೇನೆ’ ಎಂದು ಬರೆಯಲಾಗಿದ್ದು, ಅನಾಥವಾಗಿ ಬಿದ್ದಿತ್ತು. ಅದನ್ನು ತನ್ನ ಗಮನಕ್ಕೆ ತಂದ ಯುವಕನ ಬಳಿಯೇ  ಸ್ಟೇಷನ್ ಮಾಸ್ಟರ್‌ ತೆರೆಯಲು ಹೇಳಿದ್ದಾರೆ. ಆ ವೇಳೆ ಅದು ಸ್ಫೋಟಗೊಂಡಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.

2. ಮಹಾರಾಷ್ಟ್ರ ವಿಧಾನಸಭೆಗೆ ಮತದಾನ: ಮತಗಟ್ಟೆಯ ಸರತಿ ಸಾಲಿನಲ್ಲಿ ಪ್ರತಿಷ್ಠಿತರು!

ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 1 ಗಂಟೆವರೆಗೂ ಮಹಾರಾಷ್ಟ್ರದಲ್ಲಿ ಶೇ.18.5 ಹಾಗೂ ಹರಿಯಾಣದಲ್ಲಿ ಶೇ.27ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಮಹಾರಾಷ್ಡ್ರ ವಿಧಾನಸಭೆ ಚುನಾವಣೆ ನಿಮಿತ್ತ ರಾಜಧಾನಿ ಮುಂಬೈನಲ್ಲಿ ಬಾಲಿವುಡ್ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರತಿಷ್ಠಿತರು ಮತದಾನ ಮಾಡಿ ಗಮನ ಸೆಳೆದರು.

3. ಬಹು​ಕಾ​ಲದ ಪ್ರೇಯಸಿಯೊಂದಿಗೆ ನಡಾಲ್ ವಿವಾ​ಹ

ವಿಶ್ವ ನಂ.2 ಟೆನಿಸಿಗ ರಾಫೆಲ್‌ ನಡಾಲ್‌ ತಮ್ಮ ಬಹು​ಕಾಲದ ಪ್ರೇಯಸಿ ಮರಿಯಾ ಫ್ರಾನ್ಸಿಸ್ಕಾ ಪೆರೆಲ್ಲೋ ಜೊತೆ ಶನಿವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸ್ಪೇನ್‌ನ ಅತ್ಯಂತ ದುಬಾರಿ ಅರ​ಮನೆ ಲಾ ಫೋರ್ಟಾ​ಲೆ​ಜಾ​ದಲ್ಲಿ ವಿವಾಹ ನಡೆ​ಯಿತು. ಕೇವಲ 350 ಆಪ್ತ ಸಂಬಂಧಿ​ಕರು, ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡ​ಲಾ​ಗಿತು. 14 ವರ್ಷ​ಗ​ಳಿಂದ ನಡಾಲ್‌ ಹಾಗೂ ಮರಿಯಾ ಜತೆಯಲ್ಲಿದ್ದಾರೆ.

4. ಅಬುಧಾಬಿಯಲ್ಲಿ 8000 ವರ್ಷ ಹಳೆಯ ವಿಶ್ವದ ಪುರಾತನ ಮುತ್ತು ಪತ್ತೆ!

ಸಂಯುಕ್ತ ಅರಬ್‌ ಸಂಸ್ಥಾನದ ರಾಜಧಾನಿ ಅಬುಧಾಬಿಯ ಮರ್ವಾ ದ್ವೀಪದಲ್ಲಿ ಉತ್ಖನನ ನಡೆಸುತ್ತಿದ್ದ ವೇಳೆ 8000 ವರ್ಷ ಹಳೆಯ ಮುತ್ತು ಪತ್ತೆಯಾಗಿದೆ. ಅದನ್ನು ಅತ್ಯಂತ ಪ್ರಾಚೀನ ಮುತ್ತು ಎಂದು ಹೇಳಲಾಗಿದೆ. ಮುತ್ತಿನ ಪದರವು ನವಶಿಲಾಯುಗದ ರಚನೆಯಂತಿದ್ದು, ಕ್ರಿ.ಪೂ. 5800-5600 ರಷ್ಟುಹಳೆಯದಾಗಿರಬಹುದು ಎಂದು ಅಂದಾಜಿಸಾಲಾಗಿದೆ ಎಂದು ಅಬುಧಾಬಿ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸಚಿವಾಲಯ ಹೇಳಿದೆ.

5. ಶಿವಮೊಗ್ಗ : ಮಂಗಗಳ ಪಾರ್ಕ್ ನಿರ್ಮಾಣಕ್ಕೆ ಸಚಿವ ಈಶ್ವರಪ್ಪ ಭರವಸೆ

ಮಲೆನಾಡಿನಲ್ಲಿ ಮಂಗಗಳ ಹಾವಳಿಯಿಂದ ಅಡಿಕೆ, ಭತ್ತ ಸೇರಿದಂತೆ ರೈತರ ಬೆಳೆಗಳಿಗೆ ಕಂಟಕ ಎದುರಾಗಿದ್ದು, ಮಂಕಿಪಾರ್ಕ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಭರವಸೆ ನೀಡಿದರು. ಶಿವಮೊಗ್ಗದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೊಂದಿಗೆ ಚರ್ಚಿಸಿ, ಮಲೆನಾಡಿನ ರೈತರ ಅನುಕೂಲಕ್ಕಾಗಿ ಮಂಕಿಪಾರ್ಕ್ ನಿರ್ಮಿಸಲಾಗುವುದು. ಅಸ್ಸಾಂನಲ್ಲಿ ಮಂಕಿಪಾರ್ಕ್ ನಿರ್ಮಿಸಿದ್ದು,ಮಂಗಗಳ ಹಾವಳಿ ನಿಯಂತ್ರಿಸಲಾಗಿದೆ ಎಂದರು.

6. ಜೀ ಕನ್ನಡ ಅವಾರ್ಡ್ಸ್: ಯಾರಿಗೆ ಯಾವುದರಲ್ಲಿ ಗೆಲುವು?

ಕರ್ನಾಟಕ ಜನತೆ ಮೆಚ್ಚಿರುವ ಸೂಪರ್ ಡೂಪರ್ ಎಂಟರ್ಟೇನ್‌ಮೆಂಟ್ ವಾಹಿನಿ 'ಜೀ ಕನ್ನಡ' ಕೆಲ ದಿನಗಳ ಹಿಂದೆ ಕುಟುಂಬ ಅವಾರ್ಡ್ ಕಾರ್ಯಕ್ರಮ ಆಯೋಜಿಸಿದ್ದು ಸ್ಯಾಂಡಲ್‌ವುಡ್ ನಟ-ನಟಿಯರು ಭಾಗಿಯಾಗಿ ಕಲಾವಿದರಿಗೆ ಬಹಮಾನಗಳನ್ನು ವಿತರಿಸಿದ್ದಾರೆ. ವಿಜೇತರ ಪಟ್ಟಿ ಇಲ್ಲಿದೆ ನೋಡಿ.

7. ‘ಸಿದ್ದರಾಮಯ್ಯ ಕುಟುಂಬದವರು ಯಾರೂ ಸ್ವಾತಂತ್ರ್ಯಕ್ಕಾಗಿ ಸತ್ತಿಲ್ಲ’

ವೀರ ಸಾವರ್ಕರಗೆ ಭಾರತ ರತ್ನ ನೀಡುವ ಬಗ್ಗೆ ವಿವಾದ ಎದ್ದಿರುವುದು ವಿಷಾದಕರ. ಸಾವರ್ಕರ ಮತ್ತು ಅವರ ಕುಟುಂಬದವರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನ ಮಾಡಿದವರ ಪಟ್ಟಿಯಲ್ಲಿದ್ದಾರೆ. ನಾನು, ನನ್ನ ಕುಟುಂಬ, ಸಿದ್ದರಾಮಯ್ಯ ಮತ್ತು ಅವರ ಕುಟುಂಬದವರು ಯಾರೂ ಸ್ವಾತಂತ್ರ್ಯಕ್ಕಾಗಿ ಸತ್ತಿಲ್ಲ. ನಮ್ಮ ಆಸ್ತಿಯೂ ಹೋಗಿಲ್ಲ. ವೀರ ಸಾವರ್ಕರ ಅವರಂಥ ನಾಯಕರು  ಅವರಂಥ ನಾಯಕರು  ಹೋರಾಟ ನಡೆಸಿದ್ದರಿಂದ ಅದರ ಫಲವನ್ನು ಇಂದು ನಾವು ಉಣ್ಣುತ್ತಿದ್ದೇವೆ ಎಂದು  ಜೆಡಿಎಸ್ ಅನರ್ಹ ಶಾಸಕ ಎಚ್. ವಿಶ್ವನಾಥ ಹೇಳಿದ್ದಾರೆ.

8. ಸ್ವಾಮಿ 'ಅರ್ಥ' ಬದಲಾಯ್ತು: 'ಸಮಾಜ'ವೇ ಮುಖ್ಯ ಎಂದು 'ವಾದ' ಮಾಡಿದ್ದಾಯ್ತು!

ಬಲಪಂಥೀಯ ರಾಜಕಾರಣದ ಜೊತೆ ಜೊತೆಗೆ ಬಲಪಂಥೀಯ ಆರ್ಥಿಕ ನೀತಿಗಳನ್ನೂ ಬೆಂಬಲಿಸುವ ಸುಬ್ರಮಣಿಯನ್ ಸ್ವಾಮಿ, ಈ ಬಾರಿ ದೇಶಿಯ ವರ್ತಕರ ಬೆಂಬಲಕ್ಕೆ ದೌಡಾಯಿಸಿದ್ದಾರೆ. ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ಗಳಂತಹ ದೈತ್ಯ ವ್ಯಾಪಾರಿ ಕಂಪನಿಗಳ ಪ್ರಸ್ತುತತೆಯನ್ನು ಸ್ವಾಮಿ ವಿರೋಧಿಸಿದ್ದಾರೆ.

9. ಓಸ್ಟಿಯೋಪೋರೋಸಿಸ್ ಬಗ್ಗೆ ತಿಳ್ಕೊಳ್ಳೇಬೇಕು; ಹೆಣ್ಮಕ್ಕಳಲ್ಲಿ ಹೆಚ್ಚು ಈ ಕಾಯಿಲೆ!

ಮೂಳೆಗಳು ಅದರಲ್ಲೂ ನಿರ್ದಿಷ್ಟವಾಗಿ ಬೆನ್ನುಮೂಳೆ, ಕೈ ಮಣಿಕಟ್ಟು ಮತ್ತು ಸೊಂಟದ ಮೂಳೆಗಳು ದುರ್ಬಲಗೊಳ್ಳುವ ಸ್ಥಿತಿ ಅಸ್ಥಿರಂಧ್ರತೆ ಅರ್ಥಾತ್ ಓಸ್ಟಿಯೋಪೋರೋಸಿಸ್. ಎಷ್ಟೋ ಸಲ ಮೂಳೆ ಮುರಿಯುವವರೆಗೆ ಈ ಸಮಸ್ಯೆಯ ಸುಳಿವೇ ಸಿಕ್ಕಿರೋದಿಲ್ಲ. ಹೆಂಗಸರಲ್ಲಿ ಮೆನೋಪಾಸ್‌ನ ಸಮಯದಲ್ಲಿ ಹಾರ್ಮೋನ್ ಬದಲಾವಣೆಗಳಿಂದ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತೆ. ಈಸ್ಟ್ರೋಜೆನ್ ಮೂಳೆಯ ಸಾಂಧ್ರತೆಯನ್ನು ಹೆಚ್ಚಿಸಲು ಸಹಕಾರಿ. ಮುಟ್ಟು ನಿಲ್ಲುವಾಗ ಈಸ್ಟ್ರೋಜೆನ್ ಪ್ರಮಾಣ ಗಮನಾರ್ಹವಾಗಿ ಇಳಿದು ಮೂಳೆಗೆ ಹಾನಿಯಾಗುತ್ತದೆ.

10. ರಾಂಚಿ ಟೆಸ್ಟ್: ದಕ್ಷಿಣ ಆಫ್ರಿಕಾ ಆಲೌಟ್ @162, ಫಾಲೋ ಆನ್’ಗೆ ಸಿಲುಕಿದ ಹರಿಣಗಳು

ಜುಬೇರ್ ಹಮ್ಜಾ ಏಕಾಂಗಿ ಹೋರಾಟದ ಹೊರತಾಗಿಯೂ ಟೀಂ ಇಂಡಿಯಾ ಬೌಲರ್’ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವನ್ನು 162 ರನ್’ಗಳಿಗೆ ಆಲೌಟ್ ಮಾಡಿದೆ. ಇದರೊಂದಿಗೆ ಭಾರತ ಮೊದಲ ಇನಿಂಗ್ಸ್’ನಲ್ಲಿ 335 ರನ್’ಗಳ ಮುನ್ನಡೆ ಸಾಧಿಸಿದ್ದು, ಹರಿಣಗಳ ಪಡೆಯ ಮೇಲೆ ಫಾಲೋ ಆನ್ ಹೇರಿದೆ.