ಮಂಡ್ಯ :  ರಾಜ್ಯದ ಮೂರು ಲೋಕಸಭಾ ಉಪ ಚುನಾವಣೆಯಲ್ಲಿ ನಾವು ಶಿವಮೊಗ್ಗ, ಬಳ್ಳಾರಿಯಲ್ಲಿ ಈಗಾಗಲೇ ಗೆದ್ದಾಗಿದೆ. ಮಂಡ್ಯ ಕ್ಷೇತ್ರವನ್ನು ಗೆಲ್ಲಬೇಕೆಂಬ ಹಠದಿಂದ ಹೋರಾಟ ಆರಂಭಿಸಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಸಿಲ್ವರ್‌ ಜ್ಯುಬಿಲಿ ಪಾರ್ಕಿನಲ್ಲಿ ಮಂಗಳವಾರ ಬಹಿರಂಗ ಸಭೆಯಲ್ಲಿ ಪಕ್ಷದ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಪರ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ ಅವರು, ಮಂಡ್ಯ ಕ್ಷೇತ್ರವನ್ನು ಗೆಲ್ಲಲೇಬೇಕೆಂಬ ಹಠ, ಆತ್ಮ ವಿಶ್ವಾಸದಿಂದ ಹೋರಾಟ ಆರಂಭಿಸಿದ್ದೇವೆ. ಈ ಬಾರಿ ಜಿಲ್ಲೆಯಲ್ಲಿ ಬಿಜೆಪಿ ಗೆದ್ದು ಮಂಡ್ಯದ ಮೂಲಕ ಇಡೀ ಇಂಡಿಯಾಗೆ ಮಾದರಿ ಫಲಿತಾಂಶ ಸಿಗಲಿದೆ ಎಂದು ಭವಿಷ್ಯ ನುಡಿದರು.

ಮಂಡ್ಯ ಜನರು ಬದಲಾವಣೆ ಬಯಸಿದ್ದಾರೆ. ಈ ಮೂಲಕ ಪ್ರಧಾನಿ ಮೋದಿಯವರ ಕೈ ಬಲ ಪಡಿಸಲು ಮಂಡ್ಯ ಫಲಿತಾಂಶ ಇಂಡಿಯಾಗೆ ಅಚ್ಚರಿಯಾಗಲಿದೆ ಎಂದರು.

ಮಂಡಿಯೂರಿ ಅಧಿಕಾರ ಕೊಟ್ಟಿದ್ದಾರೆ:  ರಾಜ್ಯದಲ್ಲಿ 80 ವಿಧಾನಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್‌ಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಒಬ್ಬ ಅಭ್ಯರ್ಥಿ ಸಿಗಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ದುರಂತ ಸ್ಥಿತಿಗೆ ಬಂದು ತಲುಪಿದೆ. 80 ಸ್ಥಾನದಲ್ಲಿ ಗೆದ್ದರೂ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಜೆಡಿಎಸ್‌ ಎದುರು ಮಂಡಿಯೂರಿ ಅಧಿಕಾರ ನೀಡಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ದಿವಾಳಿಯಾಗಲಿದೆ ಕಾದು ನೋಡಿ ಎಂದರು.