ರಾಮನಗರ :  ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ರಾಜ್ಯದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಸರ್ಕಾರ ರಚಿಸಿದ್ದರೆ, ಅತ್ತ ಮುಖ್ಯಮಂತ್ರಿ ತವರು ಕ್ಷೇತ್ರ ರಾಮನಗರದಲ್ಲೇ ಬಿಜೆಪಿ ಸದಸ್ಯೆಗೆ ಕಾಂಗ್ರೆಸ್‌ ಬೆಂಬಲ ನೀಡಿ, ನಗರಸಭಾ ಅಧ್ಯಕ್ಷ ಸ್ಥಾನ ಪಡೆಯಲು ನೆರವಾದ ಘಟನೆ ರಾಮನಗರದಲ್ಲಿ ನಡೆದಿದೆ.

ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಬಿಜೆಪಿ ಸದಸ್ಯೆ ರತ್ನಮ್ಮ ಪಾಪಣ್ಣ ಆಯ್ಕೆಯಾಗಿದ್ದಾರೆ. ಬಿಜೆಪಿ ಚಿಹ್ನೆಯಿಂದ ಗೆದ್ದು, ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದ ರತ್ನಮ್ಮ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ರತ್ಮಮ್ಮ 19 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಜೆಡಿಎಸ್‌ನ ಸುಜಾತಾ (11 ಮತ) ವಿರುದ್ಧ 8 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಸ್ವತಃ ಸಂಸದ ಡಿ.ಕೆ.ಸುರೇಶ್‌ ಅವರು ರತ್ನಮ್ಮ ಪರವಾಗಿ ಮತ ಚಲಾಯಿಸಿದರು.

ಮೊದಲ 20 ತಿಂಗಳ ಅವಧಿಗೆ ಅಧ್ಯಕ್ಷರಾಗಿದ್ದ ಕಾಂಗ್ರೆಸ್‌ ಸದಸ್ಯ ಪಿ.ರವಿಕುಮಾರ್‌ ಅವರನ್ನು ಸ್ವಪಕ್ಷೀಯರೇ ಅವಿಶ್ವಾಸ ಗೊತ್ತುವಳಿ ಮಂಡಿಸಿ ಪದಚ್ಯುತಿಗೊಳಿಸಿದ್ದರು. ನಗರಸಭೆಯಲ್ಲಿ 31 ಸದಸ್ಯರು, ಸಂಸದರು ಸೇರಿ ಒಟ್ಟು 32 ಮಂದಿ ಮತದಾನದ ಹಕ್ಕು ಹೊಂದಿದ್ದರು. ರತ್ಮಮ್ಮ ಪರವಾಗಿ ಸಂಸದರ ಮತ ಸೇರಿ ಒಟ್ಟು 19 ಮತಗಳು ಚಲಾವಣೆಯಾದವು. ರಾಮನಗರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ರಾಮನಗರ ಕ್ಷೇತ್ರ ತೊರೆದಿದ್ದರಿಂದ ಮತದಾನದ ಹಕ್ಕು ಹೊಂದಿರಲಿಲ್ಲ.