‘ನನ್ನ ಹೆಂಡತಿ ದೇವತೆ, ಅವಳಿಗೆ ಎಷ್ಟು ಕೈ ಮುಗಿದರೂ ಸಾಲದು ಅಂತ ಹೇಳುತ್ತಿದ್ದರು ಈಗ ದಿವಂಗತರಾಗಿರುವ ಹಿರಿಯ ರಂಗಕರ್ಮಿಯೊಬ್ಬರು’ ಎಂದರು ನನ್ನ ಗೆಳತಿ ಬಿ.ಯು.ಗೀತಾ. ಈ ಮಾತನ್ನು ಅನೇಕರ ಬಾಯಲ್ಲಿ ಅವರ ಕೊನೆಯ ಕಾಲಕ್ಕೆ ಕೇಳಿದ್ದೇನೆ. ಇವರದ್ದೇನಂತೆ? ಅಂದೆ ನಾನು. ತಾವು ಹರೆಯದಲ್ಲಿ ತಮ್ಮ ಒಂದು ಕೋಣೆಯ ಮನೆಗೆ ಪರಸ್ತ್ರೀಯನ್ನು ಕರೆತಂದು ಕೋಣೆಯೊಳಗಿದ್ದರೆ, ಮಡದಿ ಮೂವರು ಮಕ್ಕಳೊಂದಿಗೆ ಹಾಲ್‌ನಲ್ಲಿ ಮಲಗುತ್ತಿದ್ದಳು ಎಂಬುದನ್ನು ಅವರು ಸ್ಮರಿಸಿಕೊಂಡು ತಾನು ನೀಚ, ಪತ್ನಿ ದೇವತೆ ಅಂದಿದ್ದಂತೆ.

ಅವರಾರ‍ಯರೂ ಈಗ ಬದುಕಿಲ್ಲವಾದರೂ ಅವರ ಹೆಂಡತಿಯನ್ನು ನೆನೆದು ಬೇಸರವಾಯಿತು. ಜತೆಗೆ ಮತ್ತೊಂದು ವಿಚಾರವೂ ಕಾಡತೊಡಗಿತು. ಪತ್ನಿಯನ್ನುದೇವತೆಯೆಂದು ಕರೆದು ಅವರು ಪ್ರಾಯಶ್ಚಿತ್ತ ಮಾಡಿಕೊಂಡರು. ತನ್ನ ಪತಿಗೆ ತಪ್ಪಿನ ಅರಿವಾಯಿತಲ್ಲ ಎಂದು ಮಡದಿಯೂ ಕ್ಷಮಿಸಿರುತ್ತಾಳೆ. ಆದರೆ, ಆ ಮತ್ತೊಬ್ಬಾಕೆ? ಅವಳು ಯಾರು? ಅಂದವಳ ಅನಿವಾರ್ಯತೆಯೇನಾಗಿತ್ತು? ಆಮೇಲವಳೆಲ್ಲಿಗೆ ಹೋದಳು? ಅವಳನ್ನು ದೇವತೆಯೆನ್ನುವುದು ಬೇಡ, ಮತ್ತೊಬ್ಬ ಜೀವವೆಂದಾದರೂ ಯಾರೂ ಅವಳಲ್ಲಿ ಕ್ಷಮೆ ಯಾಚಿಸಲಿಲ್ಲವಲ್ಲ! ಅವಳನ್ನು, ಅವಳಂತಹ ಹಲವು ಅನಾಮಿಕೆಯರನ್ನು ನೆನೆದು ಹೃದಯ ರೋದಿಸಿತು.

ಮನುಷ್ಯ ರೂಪದ ರಾಕ್ಷಸರಿದ್ದಾರೆ: ಪೋರ್ನ್‌ ಸೈಟ್‌ನಲ್ಲಿ ಪ್ರಿಯಾಂಕಾ ರೇಪ್ ವಿಡಿಯೋ ಹುಡುತ್ತಿದ್ದಾರೆ!

ನಾನು ಮಹಿಳಾ ದಿನಾಚರಣೆಗೆ ಹಿಂದೊಮ್ಮೆ ಬರೆದ ಅಂಕಣವೊಂದು ನೆನಪಾಗುತ್ತಿದೆ. ಸ್ತ್ರೀಯೊಬ್ಬಳು ರಾತ್ರಿಯ ಹೊತ್ತು ಒಂಟಿಯಾಗಿ ಓಡಾಡಲು ಸಾಧ್ಯವಾಗುವ ದಿನ ನಮಗೆ ನಿಜವಾಗಿಯೂ ಸ್ವಾತಂತ್ರ್ಯ ಬಂದಂತೆ ಎಂದು ಗಾಂಧಿ ಹೇಳಿದ್ದುಂಟು. ಪುರುಷರಂತೆ ಸೋಮಾರಿತನಕ್ಕಲ್ಲವಾದರೂ, ತನ್ನ ಸುಸ್ತು ನಿವಾರಿಸಿಕೊಳ್ಳಲು ಹಗಲಲ್ಲಿ ಪಾರ್ಕಿನ ಬೆಂಚ್‌ ಮೇಲೆ ನಿರಾತಂಕವಾಗಿ ಓರ್ವ ಸ್ತ್ರೀ ಎಂದು ಮಲಗಲು ಸಾಧ್ಯವೋ ಅಂದೇ ನಮಗೆ ಸ್ವಾತಂತ್ರ್ಯ ಬಂದಂತೆ ಎಂದು ನಾನು ಬರೆದಿದ್ದೆ!

ಹ್ಹ! ಪಾರ್ಕ್ ಬೆಂಚಾ? ಕೆಲಸಕ್ಕೆ ಹೋಗಿ ಸುರಕ್ಷಿತವಾಗಿ ಮನೆ ತಲುಪುತ್ತೀರಾ ನೋಡಿಕೊಳ್ಳಿ. ಸವಾಲನ್ನು ಒಡ್ಡುತ್ತಿದೆ ಸಮಾಜ. 1987ರಲ್ಲಿ ರಾಜಸ್ಥಾನದ ಬಾಲವಿವಾಹವೊಂದನ್ನುತಡೆಯಲು ಯತ್ನಸಿದ ಭವರೀ ದೇವಿ ಎಂಬ ಸಮಾಜ ಸೇವಕಿಯ ಮೇಲೆ ಅತ್ಯಂತ ಕ್ರೂರ ರೀತಿಯಲ್ಲಿ ಸಾಮೂಹಿಕವಾಗಿ ಅತ್ಯಾಚಾರ ಮಾಡುತ್ತಾರೆ. ಮುಂದದೇ ಪ್ರಕರಣ ವಿಶಾಖಾ ಮಾರ್ಗಸೂಚಿಗಳಾಗಿ, ಕೆಲಸ ಮಾಡುವ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯವನ್ನು ನಿಯಂತ್ರಿಸುವ ಕಾನೂನಿಗೆ ನಾಂದಿಯಾಗಿದ್ದು.

ಈ ಆಕ್ರೋಶವೆಲ್ಲ ಎಷ್ಟು ದಿನ?

ಹೈದರಾಬಾದಿನ ಆ ಡಾಕ್ಟರ್‌ ಪಟ್ಟನೋವು, ಸಂಕಟ, ಆಕೆಯ ಮೇಲೆ ನಡೆದ ಪೈಶಾಚಿಕ ಕೃತ್ಯ, ಆಕೆಯ ದಾರುಣ ಹತ್ಯೆ... ಅರೆಬೆಂದ ಅವಳ ನರಳಾಟ... ಇವೆಲ್ಲವನ್ನುನೆನೆದಾಗ... ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ? ನಮಗಂತೂ ಅಲ್ಲ!

ವೈದ್ಯೆ ಕಿರುಚದಂತೆ ವಿಸ್ಕಿ ಸುರಿದಿದ್ದ ರೇಪಿಸ್ಟ್‌ಗಳು: ಪ್ರಜ್ಞೆ ತಪ್ಪಿದಾಗ ಅತ್ಯಾಚಾರ!

ಇದರ ಮಧ್ಯೆ ಒಂದು ಕಡೆ ಮೇಣದ ಬತ್ತಿ ಹಚ್ಚಿ, ಮತ್ತೊಂದು ಕಡೆ ಗಲ್ಲುಶಿಕ್ಷೆ ಸಲ್ಲ ಎಂದು ವಾದ ಮಾಡುವ ಸ್ತ್ರೀವಾದಿಗಳು. ಯಾಕೆಂದರೆ ಪ್ರಗತಿಪರರೂ ಅವರೇ, ಮಾನವ ಹಕ್ಕುಗಳ ಕುರಿತು ಭಾಷಣ ಬಿಗಿಯುವವರೂ ಅವರೇ. ಸತ್ತವರಿಗಿಲ್ಲದ ಮಾನವ ಹಕ್ಕು, ಅವರು ಎಷ್ಟೇ ಅಮಾನವೀಯವಾದ ಕೃತ್ಯ ಎಸಗಿದ್ದರೂ ಬದುಕಿರುವವರಿಗುಂಟು! ಅದೊಂದು ಕಡೆಯಾದರೆ, ಅಪರಾಧಿಗಳನ್ನು ಹೊಡೆದು ಕೊಲ್ಲಬೇಕೆಂದು ಕೆಲವರು, ಮರ್ಮಾಂಗಗಳನ್ನು ಜಜ್ಜಿಹಾಕಬೇಕೆಂದು ಕೆಲವರು ಮಾತನಾಡುತ್ತಾರೆ.

ಈ ಆಕ್ರೋಶ, ಪ್ರತಿಭಟನೆಗಳು, ಭಾಷಣ ಎಲ್ಲವೂ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತವೆ. ಇನ್ನಷ್ಟುಕಾನೂನುಗಳು, ತಿದ್ದುಪಡಿ ಎಲ್ಲವೂ ಹುಟ್ಟುತ್ತವೆ. ರಾಜಕೀಯ ಕೆಸರೆರಚಾಟ, ನನ್ನಂಥವರು ಟೀವಿಗಳಲ್ಲಿ ಟೇಬಲ್‌ ಗುದ್ದಿ ಚರ್ಚೆ ಮಾಡುವುದು, ಹ್ಯಾಶ್‌ಟ್ಯಾಗ್‌, ಅತ್ಯಾಚಾರಿಗಳನ್ನು ಕಂಡಲ್ಲಿ ಕೊಲ್ಲಿ ಎಂಬ ಕೂಗು ಕೇಳಿಬರುತ್ತದೆ.

ಮಕ್ಕಳೇ ಬೇಡಪ್ಪ, ಅದರಲ್ಲೂ ಹೆಣ್ಣುಮಕ್ಕಳು ಬೇಡವೇ ಬೇಡ, ಅವರಿಗ್ಯಾರು ರಕ್ಷಣೆ ಕೊಡುವುದು ಎಂದು ಇನ್ನೊಂದಷ್ಟುಜನರು ಅಲವತ್ತುಕೊಳ್ಳುತ್ತಾರೆ. ಎಲ್ಲವೂ ಒಂದಷ್ಟುದಿನ, ಆಮೇಲೆ ಸ್ಮಶಾನ ಮೌನ... ಮತ್ತೊಂದು ಘಟನೆಯು ಘಟಿಸುವತನಕ...

ದನಿಯೆತ್ತಿದವರೇ ಶಿಕ್ಷೆ ಉಣ್ಣಬೇಕು

ಕೆಲವು ಕಾನ್ವೆಂಟುಗಳಲ್ಲಿ ಹರೆಯದ ವಯಸ್ಸಿನ ನನ್‌ಗಳನ್ನು ಹೇಗೆ ಬಲಪೂರ್ವಕವಾಗಿ ಪ್ರೀಸ್ಟುಗಳ ಬಳಿ ಕಳುಹಿಸಲಾಗುತ್ತದೆ ಎಂಬುದನ್ನು ನಾನು ಬಲ್ಲೆ. ಅಲ್ಲಿ ಬೇರೆ ಬೇರೆಯ ರೀತಿಯ ಲೈಂಗಿಕ ವಿಕೃತಿಗಳಿಗೆ ಅವರು ಒಳಪಡುತ್ತಾರೆ. ಗಂಟೆಗಟ್ಟಲೆ ಬೆತ್ತಲೆ ಕೂರಿಸಿ ಅವರನ್ನು ವೀಕ್ಷಿಸುತ್ತಿದ್ದ ಪಾದ್ರಿಗಳಿದ್ದಾರೆ. ಕೆಲವು ಪಾದ್ರಿಗಳು ಎಂತಹ ವಿಕೃತ ಮನಸ್ಸಿನವರೆಂದರೆ, ನನ್‌ಗಳು ತಮಗೆ ಸಾಕಾಗಿದೆ ಎಂದು ಎಷ್ಟೇ ಗೋಳು ಹೇಳಿಕೊಂಡರೂ ಕೇಳರು ಎನ್ನುತ್ತಾರೆ ಸಿಸ್ಟರ್‌ ಲೂಸಿ ತಮ್ಮ ‘ಕರ್ತಾವಿಂಡೇನಾಮತ್ತಿಲ…’ (ಯೇಸುವಿನ ಹೆಸರಿನಲ್ಲಿ) ಎಂಬ ಆತ್ಮಕಥನದಲ್ಲಿ.

2018 ರಲ್ಲಿ ಜಲಂಧರ್‌ನ ಬಿಷಪ್‌ ಫ್ರಾನ್ಸಿಸ್‌ ಮುಲಕ್ಕಲ್‌ ಮೇಲಿನ ನನ್‌ ಅತ್ಯಾಚಾರದ ಪ್ರಕರಣದಲ್ಲಿ ಆಹುತಿಯಾದ ನನ್‌ ಪರವಾಗಿ ದನಿಯೆತ್ತಿದ್ದಕ್ಕಾಗಿ ಸಿಸ್ಟರ್‌ ಲೂಸಿಯನ್ನು ಚಚ್‌ರ್‍ ಅಮಾನತು ಮಾಡಿರುವುದು ವಿಪರ್ಯಾಸವಾದರೂ ನಿಜ. 2009ರಲ್ಲಿ ಸಿಸ್ಟರ್‌ ಜೆಸ್ಮಿ ಆಮಿನ್‌ ‘ಓರ್ವ ಕ್ರೈಸ್ತ ಸನ್ಯಾಸಿನಿಯ ಆತ್ಮಕಥೆ’ ಎಂಬ ಶೀರ್ಷಿಕೆಯಡಿ ಇಂತಹ ಹಲವಾರು ಘಟನೆಗಳ ಕುರಿತು ಬರೆಯುತ್ತಾಳೆ.

ಸುರಕ್ಷಾ ಆ್ಯಪ್‌: 9 ನಿಮಿಷದಲ್ಲಿ ನೆರವು ನೀಡದ ಪೊಲೀಸರ ವಿರುದ್ಧ ಕ್ರಮ

ಸಂತ್ರಸ್ತರಿಗೆ ಉಪದೇಶ, ತಪ್ಪಿತಸ್ಥರಿಗೆ ಕ್ಷಮೆ!

ರಾತ್ರಿ ಹೊತ್ತು ಒಬ್ಬೊಬ್ಬಳೇ ಓಡಾಡಬೇಡ, ಬ್ಯಾಗಲ್ಲಿ ಪೆಪ್ಪರ್‌ ಸ್ಪ್ರೇ ಇಟ್ಟುಕೊ, ಟ್ಯಾಕ್ಸಿ ಹತ್ತಿದ ಕೂಡಲೇ ಫೋನ್ಮಾಡು, ಪಬ್ಬು ಗಿಬ್ಬು ಅಂತ ಸುತ್ತಾಡಬೇಡ, ಟೈಟ್‌ ಬಟ್ಟೆಹಾಕ್ಕೋಬೇಡ, ದುಪಟ್ಟಾಮರೀಬೇಡ, ಅಪರಿಚಿತರನ್ನು ಮಾತನಾಡಿಸಬೇಡ ಅಂತೆಲ್ಲಾ ಎಚ್ಚರಿಕೆಯ ಮಾತುಗಳನ್ನು ಹೆಣ್ಣುಮಕ್ಕಳಿಗೇ ಹೇಳುತ್ತದೆ ಸಮಾಜ! ಕೇರಳದ ವಯಲಾರಿನ ಆ ಪುಟ್ಟ12 ಮತ್ತು 9 ವಯಸ್ಸಿನ ಬಡ ದಲಿತ ಸಹೋದರಿಯರು ಯಾವ ರಾತ್ರಿ ಹೊತ್ತಲ್ಲಿ ಉಡಬಾರದ ಬಟ್ಟೆತೊಟ್ಟು ಯಾವ ಪಬ್ಬಿಗೆ ಹೋಗಿದ್ದರು? ಅವರ ಮನೆಯಲ್ಲೇ, ನೆರೆಯ ದಾನವರ ಪೈಶಾಚಿಕ ಕೃತ್ಯಕ್ಕೆ ಒಳಗಾಗಿ ದಾರುಣವಾಗಿ ಹತ್ಯೆಯಾದರಲ್ಲ.

ಎಷ್ಟೋ ಪ್ರಕರಣಗಳಲ್ಲಿ ಎಂತಹ ಘೋರ ರಾಕ್ಷಸರನ್ನೂ ಹಿಡಿಯಲು ಸಾಧ್ಯವಾಗುವುದಿಲ್ಲ. ಅವರು ಪ್ರಭಾವಿ ವ್ಯಕ್ತಿಗಳು, ಕೂಲಿಗಾಗಿ ವಲಸೆ ಬಂದವರು, ಹಿಡಿದು ನಾಲ್ಕು ಬಡಿದುಬಿಡಿ ಸಾಕು,  ಯಾಕೆ ಸುಮ್ಮನೆ ಬೆಳೆಸುವುದು-ಮೇಲ್ಜಾತಿಯವರು, ರಾಜಿ ಮಾಡಿಕೊಂಡರೆ ಹುಡುಗಿಯ, ಮನೆಯ ಮರ್ಯಾದೆ ಉಳಿಯುತ್ತೆ.  ನ್ಯಾಯ ನೀತಿ ಅಂತ ತುಂಬಾ ಜಿಗಿದರೆ ಇಡಿ ಕುಟುಂಬವನ್ನು ಮುಗಿಸಿದರಾಯಿತು... ಸಾಕ್ಷ್ಯಾಧಾರಗಳ ಕೊರತೆಗೆ ಎಲ್ಲರೂ ಬಿಡುಗಡೆಯಾದರು... ಇಂತಹ ಉದಾಹರಣೆಗಳನ್ನು ನೋಡುತ್ತಲೇ ಇದ್ದೇವೆ. ್ಕa್ಟಛಿsಠಿ ಟ್ಛ ಠಿhಛಿ ್ಕa್ಟಛಿ ್ಚasಛಿ (ವಿರಳಾತಿವಿರಳ ಪ್ರಕರಣ) ನಲ್ಲಿ ಗಲ್ಲು ಶಿಕ್ಷೆಯಾದರೂ ಅಪೀಲಿಗೆ ಹಾಕಿಕೊಂಡು ಜೈಲಿನಲ್ಲಿ ಕೂಳುಂಡು ಆರಾಮಾಗಿಯೇ ಇರುವವರಿದ್ದಾರೆ. ರಾಷ್ಟ್ರಪತಿಗಳ ಕ್ಷಮೆಗಾಗಿ ಕಾಯುತ್ತಿದ್ದಾರೆ.

ರೇಪ್ ಪ್ರಕರಣಕ್ಕೆ ಧರ್ಮದ ಬಣ್ಣ ಬಳಿದವರಿಗೆ ಕಠಿಣ ಶಿಕ್ಷೆ: ಹೈದರಾಬಾದ್ ಡಿಸಿಪಿ

ಸಾಮೂಹಿಕ ಸಾಕ್ಷಿಪ್ರಜ್ಞೆಯಿದೆಯೇ?

ಫäಲನ್‌ ದೇವಿ ತನ್ನ ಪತಿಯದೇ ಭೀಕರ ಕಾಮಕ್ಕೊಳಗಾದವಳು. ಬಹಮಾಯಿಯ ರಾಜಪೂತರ ಸಾಮೂಹಿಕ ರಾಕ್ಷಸತ್ವಕ್ಕೆ ಬಲಿಯಾದವಳು. 21 ರಾಕ್ಷಸರನ್ನು ಬಲಿ ತೆಗೆದುಕೊಂಡ ದುರ್ಗೆಯ ಅವತಾರ ಅವಳು. ಕೊನೆಗೆ ಅಮಾಯಕ ಕುರಿಮರಿಯಂತೆ ಅವರದೇ ಗುಂಡೇಟಿಗೆ ಮಡಿದಳು.

ನಿರ್ಭಯಾ ಮತ್ತು ಪ್ರಿಯಾಂಕಾ ರೆಡ್ಡಿ ನಡುವೆ, ಅದೆಷ್ಟುನನ್ನ ಸಹೋದರಿಯರು ತಮ್ಮ ಗಂಡನಿಂದಲೇ ಅತ್ಯಾಚಾರಕ್ಕೊಳಗಾಗಿದ್ದಾರೋ, ಮಾವ/ ಬಂಧು-ಬಳಗ/ ಕುಟುಂಬದ ಸ್ನೇಹಿತರ ವಿಕೃತಿಗೆ ತುತ್ತಾಗಿದ್ದಾರೋ, ರೈಲು ಬಸ್ಸುಗಳಲ್ಲಿ ನೀಚರ ಕಾಮುಕತೆಗೆ ತುತ್ತಾಗಿದ್ದಾರೋ, ಅದೆಷ್ಟುಪುಟಾಣಿಗಳು ಕರುಗಳಂತೆ ಕಿರುಬಗಳಿಗೆ ಬಲಿಯಾಗಿದ್ದಾವೋ, ವೇಶ್ಯಾವಾಟಿಕೆಯನ್ನು ವೃತ್ತಿಯಾಗಿಸಿಕೊಂಡರೂ ಬಿಟ್ಟಿಲ್ಲವಲ್ಲ... ಹಣ ಕೊಡದೆ ತಪ್ಪಿಸಿಕೊಳ್ಳುವುದಕ್ಕಾಗಿ ಅವರ ಮೇಲೂ ಅತ್ಯಾಚಾರ...ಅದೆಷ್ಟುರಣಹದ್ದುಗಳೋ, ಅದೆಷ್ಟುಬಲಿಪಶುಗಳೋ.

ತನ್ನ ಉದ್ದನೆಯ ದಟ್ಟತಲೆಗೂದಲನ್ನು ಮೈತುಂಬ ಉಟ್ಟು ನಡೆದಾಡಿದ ಅಕ್ಕಮಹಾದೇವಿಯ ನಾಗರಿಕತೆ ಅಲ್ಲವೇ ನಮ್ಮದು? ಏನಾಯಿತು ನಮಗೆ, ಏನಾಗಿದೆ ನಮಗೆ? ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ?

2001 ರ ಚಾಮರಾಜನಗರ ಪ್ರಕರಣದ ರೇಪಿಸ್ಟುಗಳಿಗೆ ಮರಣದಂಡನೆ ನೀಡಲಾಗಿದ್ದರೂ ಇಂದಿಗೂ ಆ ಇಬ್ಬರು ನೇಣುಗಂಬವೇರಿಲ್ಲ! ನಮಗೊಂದು ಸಾಮೂಹಿಕ ಸಾಕ್ಷಿಪ್ರಜ್ಞೆಯಿದೆಯೇ? ಇದ್ದರೆ ಈವರೆಗೆ ಎಷ್ಟು ರಾಕ್ಷಸರನ್ನು ಗಲ್ಲಿಗೇರಿಸಿದ್ದೇವೆ?

- ಮಾಳವಿಕಾ ಅವಿನಾಶ್‌, ಬಿಜೆಪಿ ವಕ್ತಾರರು