Asianet Suvarna News Asianet Suvarna News

2024ರ ಸಮರಕ್ಕೆ ಈಗಲೇ ಸಿದ್ಧವಾಯ್ತು ಬಿಜೆಪಿ ರಣತಂತ್ರ!

ಮಿಷನ್‌ 333: 2024ರ ಸಮರಕ್ಕೆ ಈಗಲೇ ಬಿಜೆಪಿ ಯೋಜನೆ ಸಿದ್ಧ!| ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಲ ಹೆಚ್ಚಿಸಿಕೊಳ್ಳಲು ಬಿಜೆಪಿ ಪ್ಲಾನ್‌

BJP s next target 333 in 2024 Loksabha polls with focus on south
Author
Bangalore, First Published May 29, 2019, 8:44 AM IST

ನವದೆಹಲಿ[ಮೇ.29]: ‘ಮಿಷನ್‌ 333’. ಇದು ಬಿಜೆಪಿ ಮುಂದಿನ ಲೋಕಸಭಾ ಚುನಾವಣೆಗೆ ಈಗಲೇ ಹಾಕಿಕೊಂಡಿರುವ ಟಾರ್ಗೆಟ್‌! 2019ರ ಲೋಕಸಭಾ ಚುನಾವಣೆಯಲ್ಲಿ 303 ಸೀಟುಗಳನ್ನು ಗೆದ್ದು ದೇಶದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಎರಡನೇ ಅವಧಿಗಾಗಿ ಪದಗ್ರಹಣ ಮಾಡುವುದಕ್ಕೂ ಮುನ್ನವೇ 2024ರ ಲೋಕಸಭಾ ಚುನಾವಣೆಯಲ್ಲಿ 333 ಸೀಟುಗಳನ್ನು ಗೆಲ್ಲುವ ಹಾಗೂ ಕರ್ನಾಟಕದಲ್ಲಿ ಸಿಕ್ಕಿರುವ ಯಶಸ್ಸನ್ನು ದಕ್ಷಿಣದ ಉಳಿದ ರಾಜ್ಯಗಳಲ್ಲೂ ಪಡೆದುಕೊಳ್ಳಲು ಪಕ್ಷವನ್ನು ಇನ್ನಷ್ಟುಬಲಗೊಳಿಸುವ ಗುರಿ ಹೊತ್ತು ಪ್ರಾಥಮಿಕ ಸಿದ್ಧತೆ ಮಾಡಿಕೊಳ್ಳುತ್ತಿದೆ.

‘2014ರಲ್ಲಿ 282 ಸೀಟುಗಳನ್ನು ಗೆದ್ದಿದ್ದೆವು, 2019ರಲ್ಲಿ 303 ಸೀಟುಗಳನ್ನು ಗೆದ್ದುಕೊಂಡಿದ್ದೇವೆ. 2024ರಲ್ಲಿ 333ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವುದೇ ಬಿಜೆಪಿಯ ಮುಂದಿನ ಗುರಿಯಾಗಿದೆ. ಇದರ ಜತೆ ಜೊತೆಯಲ್ಲೇ ದಕ್ಷಿಣದ ರಾಜ್ಯಗಳಲ್ಲಿ ಪಕ್ಷವನ್ನು ಇನ್ನಷ್ಟುಬಲಗೊಳಿಸುವತ್ತ ಪಕ್ಷದ ದೃಷ್ಟಿನೆಟ್ಟಿದೆ’ ಎಂದು ಆಂಧ್ರಪ್ರದೇಶ ಮತ್ತು ತ್ರಿಪುರಾ ಉಸ್ತುವಾರಿ ಮತ್ತು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯೂ ಆಗಿರುವ ಸುನಿಲ್‌ ದೇವಧರ್‌ ಹೇಳಿದ್ದಾರೆ.

ಪಶ್ಚಿಮ ಬಂಗಾಳದಿಂದ ತಮಿಳುನಾಡು ವರೆಗಿನ ಪ್ರಮುಖರ ನಿಯೋಗವೊಂದು ಈ ದಿಕ್ಕಿನಲ್ಲಿ ಬಹಳ ಮಹತ್ವದ ಹೆಜ್ಜೆ ಇಡುತ್ತಿದೆ. ಇನ್ನೈದು ವರ್ಷಗಳ ಅವಧಿಯಲ್ಲಿ ನಾವು ನಮ್ಮ ಗುರಿ ತಲುಪುತ್ತೇವೆ. ಕರಾವಳಿ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಪಕ್ಷವನ್ನು ಹೆಚ್ಚು ಬಲಗೊಳಿಸಲಾಗುತ್ತದೆ ಎಂದಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಣತಿಯಲ್ಲೇ ಪಕ್ಷದ ಸಂಘಟನೆಗೆ ಬಿಜೆಪಿ ತಯಾರಿ ಮಾಡಿಕೊಂಡಿದೆ. ಹಿಂದಿ ಭಾಷೆ ಪ್ರಧಾನವಾಗಿರುವ ರಾಜ್ಯಗಳಲ್ಲಿ ಅಲ್ಲದೇ ಉಳಿದ ರಾಜ್ಯಗಳಲ್ಲೂ ಬಲ ಹೆಚ್ಚಿಸಿಕೊಳ್ಳುವ ಲೆಕ್ಕಾಚಾರ ಬಿಜೆಪಿಯದ್ದಾಗಿದೆ.

ತಮಿಳುನಾಡಲ್ಲೂ ಕರ್ನಾಟಕ ಮಾದರಿ ಸಂಘಟನೆ

ಕರ್ನಾಟಕದಲ್ಲಿ ಪಕ್ಷ ಸಂಘಟನೆಗೆ ನಡೆಸಿದ ತಂತ್ರಗಾರಿಕೆಯನ್ನು ಮುಂದಿನ ದಿನಗಳಲ್ಲಿ ತಮಿಳುನಾಡಿನಲ್ಲಿ ಅನುಸರಿಸಲಾಗುತ್ತದೆ. ಪ್ರಾದೇಶಿಕವಾಗಿ ಅಗತ್ಯವಿರುವ ಕೆಲ ಬದಲಾವಣೆಯೊಂದಿಗೆ ಮತಗಳನ್ನು ಜಾತಿ ಲೆಕ್ಕಾಚಾರದ ಮೇಲೆ ಕೇಂದ್ರೀಕರಿಸುವುದು ಬಿಜೆಪಿ ಲೆಕ್ಕಾಚಾರ ಎನ್ನಲಾಗಿದೆ. ಕರ್ನಾಟಕದಲ್ಲಿ ಲಿಂಗಾಯತರ ಮತಗಳು ಭಾರೀ ಪ್ರಮಾಣದಲ್ಲಿ ಒಡೆದು ಬೇರೆ ಪಕ್ಷದತ್ತ ಹೊರಳದಂತೆ ನೋಡಿಕೊಂಡ ತಂತ್ರವನ್ನೇ ತಮಿಳುನಾಡಲ್ಲೂ ಅನುಸರಿಸುವುದು ಪಕ್ಷದ ಮುಂದಿರುವ ಸವಾಲಾಗಿದೆ ಎಂದು ಹೆಸರೇಳಲಿಚ್ಚಿಸದ ತಮಿಳುನಾಡು ನಾಯಕರೊಬ್ಬರು ಹೇಳಿಕೊಂಡಿದ್ದಾರೆ.

Follow Us:
Download App:
  • android
  • ios