ಕೋಲ್ಕತಾ[ಜೂ.11]: ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದು 20 ದಿನಗಳಾಗುತ್ತಾ ಬಂದಿದ್ದರೂ, ಚುನಾವಣೆ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಆರಂಭವಾದ ಸಂಘರ್ಷ ಇನ್ನೂ ನಿಂತಿಲ್ಲ. ಬಸಿರ್ಹಾಟ್‌ನಲ್ಲಿ ಮೂವರು ಬಿಜೆಪಿ ಕಾರ್ಯಕರ್ತರ ಹತ್ಯೆಗೆ ತೃಣಮೂಲ ಕಾಂಗ್ರೆಸ್ಸೇ ಕಾರಣ ಎಂದು ದೂರುತ್ತಿರುವ ಬಿಜೆಪಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಬಂಗಾಳದಾದ್ಯಂತ ಸೋಮವಾರ ಬೀದಿಗಳಿದು ಕರಾಳ ದಿನ ಆಚರಿಸಿದೆ. ಬಸಿರ್ಹಾಟ್‌ನಲ್ಲಿ ಬಂದ್‌ ನಡೆಸಿದೆ. ಈ ಸಂದರ್ಭ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ಕೂಡ ನಡೆದಿದೆ.

ಈ ನಡುವೆ ಬಂಗಾಳದ ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ನಡುವೆ, ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿರುವ ತೃಣಮೂಲ ಕಾಂಗ್ರೆಸ್‌ ಅಧಿನಾಯಕಿಯೂ ಆಗಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಹಿಂಸೆಗೆ ಕುಮ್ಮಕ್ಕು ನೀಡಿ, ನನ್ನ ಸರ್ಕಾರವನ್ನು ಬೀಳಿಸುವ ಸಂಚು ನಡೆಯುತ್ತಿದೆ. ದೇಶದಲ್ಲಿ ಬಿಜೆಪಿ ವಿರುದ್ಧ ಪ್ರತಿಭಟಿಸುತ್ತಿರುವುದು ನಾನೊಬ್ಬಳೇ. ಹೀಗಾಗಿ ನನ್ನ ದನಿ ಹತ್ತಿಕ್ಕುವ ಯತ್ನ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲು ಬಿಜೆಪಿ ಕೋಟಿಗಟ್ಟಲೆ ಹಣ ಸುರಿಯುತ್ತಿದೆ ಎಂದು ಹರಿಹಾಯ್ದಿದ್ದಾರೆ.

ಮತ್ತೊಂದೆಡೆ, ಬಂಗಾಳದಲ್ಲಿನ ಹಿಂಸೆಗೆ ಕಳವಳ ವ್ಯಕ್ತಪಡಿಸಿ, ಕಾನೂನು- ಸುವ್ಯವಸ್ಥೆ ಕಾಪಾಡುವಂತೆ ಕೇಂದ್ರ ಗೃಹ ಇಲಾಖೆ ನೀಡಿದ್ದ ಸಲಹಾವಳಿಗೆ ತೃಣಮೂಲ ಕಾಂಗ್ರೆಸ್‌ ತಿರುಗೇಟು ಕೊಟ್ಟಿದೆ. ತಳಮಟ್ಟದ ಪರಿಸ್ಥಿತಿಯ ಬಗ್ಗೆ ಪರಾಮರ್ಶೆ ನಡೆಸದೇ, ರಾಜ್ಯ ಸರ್ಕಾರದಿಂದ ವರದಿಯನ್ನೂ ಕೇಳದೇ ಗೃಹ ಇಲಾಖೆ ತೀರ್ಮಾನಕ್ಕೆ ಬಂದುಬಿಟ್ಟಿದೆ. ಅಧಿಕಾರ ಹಿಡಿಯಲು ನಡೆಸಿರುವ ದುಷ್ಟಸಂಚು ಇದು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.