ಶ್ರೀನಗರ(ನ.2): ಕಣಿವೆ ರಾಜ್ಯದಲ್ಲಿ ಮತ್ತೆ ಉಗ್ರರು ಅಟ್ಟಹಸ ಮೆರೆದಿದ್ದು, ಇಲ್ಲಿನ ಕಿಶ್ತವಾರ್ ನಲ್ಲಿ ಅಪರಿಚಿತ ಬಂದೂಕುದಾರಿಗಳು ರಾಜ್ಯ ಬಿಜೆಪಿ ಕಾರ್ಯದರ್ಶಿ ಅನಿಲ್ ಪರಿಹರ್  ಹಾಗೂ ಅವರ  ಸಹೋದರ ಅಜಿತ್ ವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. 

ಅನಿಲ್ ಪರಿಹರ್ ಹಾಗೂ ಅಜಿತ್ ತಮ್ಮ ಸ್ಟೇಷನರಿ ಅಂಗಡಿ ಮುಚ್ಚಿ ಮನೆಗೆ  ಮರಳುತ್ತಿದ್ದಾಗ ಅವರ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ ನಡೆದಿದೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ  ಅನಿಲ್ ಪರಿಹರ್  ಹಾಗೂ ಅನಿಲ್ ಅವರನ್ನು  ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ರವೀಂದರ್ ರೈನಾ ತಿಳಿಸಿದ್ದಾರೆ.

ಗುಂಡಿನ ದಾಳಿ ನಡೆದ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಉಗ್ರರು ಈ ದಾಳಿ ನಡೆಸಿರುವ ಸಾಧ್ಯತೆ ಇದ್ದು, ಸದ್ಯ ಈ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ಕಣಿವೆಯಲ್ಲಿ ಶಾಂತಿ ಸ್ಥಾಪನೆಗೆ ನಡೆಯುತ್ತಿರುವ ಪ್ರಯತ್ನಗಳು ಮುಂದುವರೆಯಲಿವೆ ಎಂದು ತಿಳಿಸಿದೆ. ಸದ್ಯ ಘಟನೆಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144ನ್ನು ಜಾರಿಗೊಳಿಸಲಾಗಿದೆ.