ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಮೋದಿ ಸರ್ಕಾರ ಪೆಟ್ಟಿಗೆಯಿಂದ ಹೊರಗೆ ತೆಗೆದಿರುವ ಎನ್ ಆರ್‌ಸಿ ಅಸ್ತ್ರ ಕಾಂಗ್ರೆಸ್‌ನಲ್ಲಿಯೇ ಆಂತರಿಕ ಕಸಿವಿಸಿ ಉಂಟುಮಾಡಿದ್ದು ಬೆಂಬಲಿಸಬೇಕೋ, ವಿರೋಧಿಸಬೇಕೋ ಎಂಬ ದ್ವಂದ್ವ ಕಾಂಗ್ರೆಸ್ ಅಂಗಳದಲ್ಲಿಯೇ ಸ್ಪಷ್ಟವಾಗಿದೆ.

ಜೂನ್ ಕೊನೆಯ ವಾರ ಎನ್‌ಆರ್‌ಸಿ ಕರಡು ಪಟ್ಟಿಯನ್ನು ಅಸ್ಸಾಂ ಸರ್ಕಾರ ಪ್ರಕಟಿಸಿದಾಗ ಕಾಂಗ್ರೆಸ್ ಸಹಜವಾಗಿ ಇದನ್ನು ವಿರೋಧಿಸುವ ಮನಸ್ಸಿನಲ್ಲಿತ್ತು. ದಿಲ್ಲಿಯಲ್ಲಿ ಕುಳಿತುಕೊಳ್ಳುವ ವಕ್ತಾರರು ಎನ್‌ಆರ್‌ಸಿಯನ್ನು ವಿರೋಧಿಸಲೂ ಆರಂಭಿಸಿದ್ದರು. ಆದರೆ ಯಾವಾಗ ಸ್ವತಃ ರಾಹುಲ್ ಗಾಂಧಿ ಅಸ್ಸಾಂ ಮತ್ತು ಬಂಗಾಳದ ನಾಯಕರೊಂದಿಗೆ ಮಾತನಾಡಲು ಆರಂಭಿಸಿದರೋ ಆಗ ಎನ್‌ಆರ್‌ಸಿ ವಿರೋಧಿಸಿದರೆ ರಾಜಕೀಯವಾಗಿ ಅತ್ಮಹತ್ಯೆ ಎಂಬ ಅಂಶ ಅರಿವಿಗೆ ಬಂತು.

ಹೀಗಾಗಿ ತರಾತುರಿಯಲ್ಲಿ ರವಿವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಕರೆದ ರಾಹುಲ್ ಗಾಂಧಿ ಸಭೆಗೆ ಅಸ್ಸಾಂನ ಸ್ಥಳೀಯ ನಾಯಕರನ್ನೆಲ್ಲಾ ಕರೆಸಿಕೊಂಡರು.
ಅಸ್ಸಾಂ ಮತ್ತು ಬಂಗಾಳದ ನಾಯಕರು ಎನ್‌ಆರ್‌ಸಿ ಅನ್ನು ಬೆಂಬಲಿಸದೇ ಹೋದರೆ ಆಗುವ ಅನಾಹುತಗಳನ್ನು ವಿವರಿಸಿದ ನಂತರವೇ ಕೊನೆಗೂ ಕಾಂಗ್ರೆಸ್ ನಾಲ್ಕೂವರೆ ವರ್ಷದಲ್ಲಿ ಮೊದಲ ಬಾರಿ ಮೋದಿ ಸರ್ಕಾರವನ್ನು ಬೆಂಬಲಿಸುವ ನಿರ್ಣಯ ತೆಗೆದುಕೊಳ್ಳಲೇಬೇಕಾಯಿತು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಜೊತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಬೇಕು ಎಂದು ಹೊರಟಿದ್ದ ಕಾಂಗ್ರೆಸ್, ಇವತ್ತು ಎನ್‌ಆರ್‌ಸಿ ವಿಷಯದಲ್ಲಿ ಮಮತಾರನ್ನೇ ಟೀಕಿಸುವ ಹಾಗಾಗಿದೆ.

[ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ]