ನವದೆಹಲಿ, [ಅ.23]: ಹಲವು ದಿನಗಳ ಹಗ್ಗ ಜಗ್ಗಾಟದ ಬಳಿಕ ಬಿಹಾರದಲ್ಲಿ ಲೋಕಸಭೆ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಯು ಸೀಟು ಹಂಚಿಕೆ ಸೂತ್ರವನ್ನು ಅಂತಿಮಗೊಳಿಸಿವೆ. 

ಅದರಂತೆ 40 ಲೋಕಸಭಾ ಕ್ಷೇತ್ರಗಳ ಕ್ಷೇತ್ರಗಳ ಪೈಕಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯುಗೆ 16 ಸೀಟುಗಳನ್ನು ಬಿಟ್ಟುಕೊಡಲು ಬಿಜೆಪಿ ಒಪ್ಪಿಗೆ ಸೂಚಿಸಿದೆ. 

ಬಿಜೆಪಿ 17 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಇನ್ನುಳಿದ ಸ್ಥಾನಗಳಲ್ಲಿ ಎನ್‌ಡಿಎ ಇತರ ಮೈತ್ರಿ ಪಕ್ಷಗಳಾದ ರಾಮ್‌ ವಿಲಾಸ್‌ ಪಾಸ್ವಾನ್‌ ಅವರ ಲೋಕ ಜನಶಕ್ತಿ ಪಕ್ಷಕ್ಕೆ 5 ಸ್ಥಾನ ಮತ್ತು ಉಪೇಂದ್ರ ಕುಶ್ವಾ ಅವರ ರಾಷ್ಟ್ರೀಯ ಲೋಕ ಸಮತಾ ಪಕ್ಷಕ್ಕೆ 2 ಸ್ಥಾನಗಳನ್ನು ನೀಡುವ ನಿರ್ಧಾರಕ್ಕೆ ಬರಲಾಗಿದೆ.

ಕಳೆದ ತಿಂಗಳ ಎರಡನೇ ವಾರದಲ್ಲಿ ದೆಹಲಿಯಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ನಿತೀಶ್‌ ನಡುವಿನ ಭೇಟಿ ವೇಳೆ ಈ ಸೀಟು ಹಂಚಿಕೆಯನ್ನು ಅಂತಿಮಗೊಳಿಸಲಾಗಿದೆ. ಮೈತ್ರಿಕೂಟದ ಉಳಿದ 2 ಪಕ್ಷಗಳ ಸಮ್ಮತಿಯ ಬಳಿಕ ಶೀಘ್ರವೇ ಈ ವಿಷಯ ಬಹಿರಂಗಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.