ಬೆಂಗಳೂರು : ಕೇಂದ್ರ ಸರ್ಕಾರದ ವಿವಿಧ ನೀತಿಗಳ ವಿರುದ್ಧ ಹತ್ತಾರು ಕಾರ್ಮಿಕ ಸಂಘಟನೆಗಳ ಒಕ್ಕೂಟ ದೇಶವ್ಯಾಪಿ ಕರೆ ನೀಡಿದ್ದ ಬಂದ್‌ನಿಂದಾಗಿ ರಾಜ್ಯದ ಬೊಕ್ಕಸಕ್ಕೆ ಕಳೆದ ಎರಡು ದಿನಗಳಲ್ಲಿ ಸುಮಾರು 1100 ಕೋಟಿ ರು. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಕರ್ನಾಟಕ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಅಧ್ಯಕ್ಷ ಸುದರ್ಶನ್ ಎಸ್.ಶೆಟ್ಟಿ, ಎರಡು ದಿನಗಳ ಬಂದ್‌ನಿಂದ ಸಾರಿಗೆ, ಕೃಷಿ, ಕೈಗಾರಿಕೆ, ಮಾರುಕಟ್ಟೆ, ವ್ಯಾಪಾರ, ವಾಣಿಜ್ಯೋದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರಗಳಿಂದ ಒಟ್ಟಾರೆ ರಾಜ್ಯದ ಬೊಕ್ಕಸಕ್ಕೆ ಸುಮಾರು 1100 ಕೋಟಿ ರುಪಾಯಿ ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.  

ಅದೇ ರೀತಿ ದೇಶವ್ಯಾಪಿ ಬಂದ್‌ನಿಂದ ರಾಷ್ಟ್ರೀಯ ಬೊಕ್ಕಸಕ್ಕೆ 28 ಸಾವಿರ ಕೋಟಿ ರು. ನಷ್ಟದ ಅಂದಾಜು ಮಾಡಲಾಗಿದೆ ಎಂದು ತಿಳಿಸಿದರು.

ಬಿಎಂಟಿಸಿ-ಕೆಎಸ್‌ಆರ್‌ಟಿಸಿಗೆ 14 ಕೋಟಿ ನಷ್ಟ: 2 ದಿನಗಳ ಬಂದ್ ವೇಳೆ ನಡೆದ ಬಸ್ಸುಗಳ ಮೇಲಿನ ಕಲ್ಲುತೂರಾಟ ಮತ್ತು ಸಂಚಾರ ಸ್ಥಗಿತದಿಂದ ಕೆಎಸ್‌ಆರ್ ಟಿಸಿ ಮತ್ತು ಬಿಎಂಟಿಸಿ ಸಂಸ್ಥೆಗಳಿಗೆ ಒಟ್ಟಾರೆ 14.13 ಕೋಟಿ ರು.ನಷ್ಟ ಉಂಟಾಗಿದೆ. ಮೊದಲ ದಿನ ಬಂದ್ ವೇಳೆ 12 ಬಿಎಂಟಿಸಿ ಮತ್ತು 5 ಕೆಎಸ್‌ಆರ್‌ಟಿಸಿ ಬಸ್ಸುಗಳ ಮೇಲೆ ಕಲ್ಲು ತೂರಲಾಗಿತ್ತು. ಎರಡನೇ ದಿನ  48 ಬಿಎಂಟಿಸಿ ಮತ್ತು 12 ಕೆಎಸ್‌ಆರ್‌ಟಿಸಿ ಬಸ್ಸುಗಳ ಮೇಲೆ ವಿವಿಧೆಡೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಇದರಿಂದ ಎರಡೂ ದಿನಗಳ ಬಂದ್ ವೇಳೆ ಒಟ್ಟಾರೆ  17 ಕೆಎಸ್‌ಆರ್‌ಟಿಸಿ ಮತ್ತು 58 ಬಿಎಂಟಿಸಿ ಬಸ್ಸುಗಳಿಗೆ ಹಾನಿಯಾಗಿದೆ.