ಲಂಡನ್‌ (ಫೆ. 03): 9 ಸಾವಿರ ಕೋಟಿ ರು. ಸಾಲ ಮರುಪಾವತಿಸದೇ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯ ಅವರಿಂದ ಸಾಧ್ಯವಾದಷ್ಟುಹಣ ವಸೂಲಿ ಮಾಡಲು ಹರಸಾಹಸ ನಡೆಸುತ್ತಿರುವ ಭಾರತೀಯ ಬ್ಯಾಂಕುಗಳ ಕಣ್ಣು ಇದೀಗ ‘ಮದ್ಯದ ದೊರೆ’ ಹೊಂದಿದ್ದ ಐಷಾರಾಮಿ ವಿಹಾರ ದೋಣಿ (ಯಾಟ್‌), ದುಬಾರಿ ಬೆಲೆಯ ಕಾರುಗಳು ಹಾಗೂ ಪೇಟಿಂಗ್‌ನಂತಹ ವಸ್ತುಗಳ ಮೇಲೆ ಬಿದ್ದಿದೆ.

ಮಲ್ಯ ಅವರು ಬಳಸುತ್ತಿದ್ದ ಈ ವಸ್ತುಗಳ ನೈಜ ಮಾಲೀಕತ್ವದ ಮೇಲೆ ಬೆಳಕು ಚೆಲ್ಲುವಂತಹ ದಾಖಲೆ ತಮಗೆ ಬೇಕಾಗಿದೆ ಎಂದು ಬ್ಯಾಂಕುಗಳು ಲಂಡನ್‌ ಕೋರ್ಟ್‌ ಮೊರೆ ಹೋಗಿವೆ. ಆದರೆ ಮಲ್ಯ ಪ್ರಕಾರ, ಈ ಎಲ್ಲ ಚರಾಸ್ತಿಗಳು ಟ್ರಸ್ಟ್‌ಗೆ ಸೇರಿವೆ.

ಇಂಡಿಯನ್‌ ಎಂಪ್ರೆಸ್‌ ಹಾಗೂ ಫೋರ್ಸ್‌ ಇಂಡಿಯಾ ಎಂಬ ಸೂಪರ್‌ಯಾಟ್‌ಗಳು ಮಲ್ಯ ಬಳಿ ಇದ್ದವು. ಅವು ಈಗಾಗಲೇ ಮಾರಾಟವಾಗಿವೆ. ಅದರೊಳಗೆ ಎಲ್ಟನ್‌ ಜಾನ್‌ ಪಿಯಾನೋ ಹಾಗೂ ದುಬಾರಿ ಬೆಲೆಯ ಪೇಂಟಿಂಗ್‌ ಇತ್ತು. ಮಾರಾಟ ಮಾಡುವಾಗ ಅವನ್ನು ತೆಗೆದಿಟ್ಟು ಯಾಟ್‌ ಮಾರಲಾಗಿದೆಯೇ ಎಂಬ ಮಾಹಿತಿಯನ್ನೂ ಬ್ಯಾಂಕುಗಳು ಬಯಸಿವೆ. ಮಲ್ಯ ಬಳಿ 27 ಕಾರುಗಳಿದ್ದವು. ಅವುಗಳ ಬಗ್ಗೆಯೂ ಮಾಹಿತಿ ನೀಡುವಂತೆ ಮನವಿ ಮಾಡಿವೆ.