ಬೆಂಗಳೂರು: ಚುನಾವಣಾ ದಿನ ಹತ್ತಿರವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗಳ ಆರೋಪ-ಪ್ರತ್ಯಾರೋಪ ಶುರುವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟರ್ ಹಾಗೂ ಫೇಸ್‌ಬುಕ್‌ನಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಿವೃದ್ಧಿ ಕುರಿತು ಹತ್ತು ಪ್ರಶ್ನೆಗಳನ್ನು ಕೇಳಿದ್ದಾರೆ. ಕರ್ನಾಟಕವನ್ನು ಅತ್ಯಂತ ಭ್ರಷ್ಟ ರಾಜ್ಯವಾಗಿಸಿದ, ಬೆಂಗಳೂರು ನಗರವನ್ನು ಗಾರ್ಬೇಜ್ ಸಿಟಿ ಎಂದು ವಿಶ್ವಮಟ್ಟದಲ್ಲಿ ಕುಖ್ಯಾತಿ ಗಳಿಸುವಂತೆ ಮಾಡಿದ ಹಾಗೂ ರೈತರ ಮೇಲೆ ಗೋಲಿಬಾರ್‌ಗೆ ಆದೇಶಿಸಿದವರೊಬ್ಬರು ಚುನಾವಣಾ ಪ್ರಚಾರದಲ್ಲಿ ದೊಡ್ಡ ದೊಡ್ಡ ಮಾತುಗಳಾಡುತ್ತಿದ್ದಾರೆ. ಇದೊಂದು ವಿಪರ್ಯಾಸವಾಗಿದ್ದು, ಆಧಾರ ರಹಿತ ಆರೋಪಗಳ ಹೊರತಾಗಿ ಕರ್ನಾಟಕದ 6.5 ಕೋಟಿ ಜನತೆಗೆ ನೀಡಲು ನಿಮ್ಮ ಬಳಿ ಏನಿದೆ ಎಂದು ಬಿಜೆಪಿಯ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಇದೇ ವೇಳೆ ನೀವು ಅಭಿವೃದ್ಧಿಯ ಬಗ್ಗೆ ಚರ್ಚಿಸಬಹುದಾದರೆ ದಯವಿಟ್ಟು ಹತ್ತು ಪ್ರಶ್ನೆಗಳಿಗೆ ಉತ್ತರಿಸಿ ಎಂದು ಸವಾಲು ಎಸೆದಿದ್ದು, ಮತದಾರರೊಂದಿಗೆ ನಿಮ್ಮ ದೂರದೃಷ್ಟಿಯ ಬಗ್ಗೆ ಮಾತನಾಡಿ ಹಾಗೂ ಆಧಾರರಹಿತ ಆರೋಪ ಮಾಡುವುದನ್ನು ನಿಲ್ಲಿಸಿ ಎಂದು ಹೇಳಿದ್ದಾರೆ.

 

ಅವರು ಸಾಮಾಜಿಕ ಜಾಲತಾಣದಲ್ಲಿ ಯಡಿಯೂರಪ್ಪ ಅವರಿಗೆ ಕೇಳಿದ ಪ್ರಶ್ನೆಗಳು ಕೆಳಗಿನಂತಿವೆ 

- ಕನ್ನಡಿಗರ ಆಕಾಂಕ್ಷೆಯಂತೆ ನಾಡಿಗೆ ತನ್ನದೇ ಆದ ಪ್ರಮುಖ ಹೆಗ್ಗುರುತು ನೀಡುವ ‘ನಾಡಧ್ವಜ’ ಹೊಂದಲು ನೀವು ಬೆಂಬಲ ನೀಡುವಿರಾ?
- ಸ್ವತಂತ್ರ ಧರ್ಮಕ್ಕಾಗಿ ಹೋರಾಡುತ್ತಿರುವ ಬಸವೇಶ್ವರ ಅನುಯಾಯಿಗಳ ಆಕಾಂಕ್ಷೆಗಳನ್ನು ನೀವು ಬೆಂಬಲಿಸುವಿರಾ?
- ಮಹದಾಯಿ ನದಿ ವಿವಾದ ಶೀಘ್ರ ಪರಿಹರಿಸಲು ಪ್ರಧಾನಮಂತ್ರಿಯವರ ಮಧ್ಯಸ್ಥಿಕೆ ವಹಿಸಲು ನಿಮ್ಮ ಬೆಂಬಲ ಇದೆಯೇ?
- ಕೇಂದ್ರ ಸರ್ಕಾರವು ವಾಣಿಜ್ಯ ಬ್ಯಾಂಕ್‌ಗಳಲ್ಲಿರುವ ರಾಜ್ಯದ ರೈತರ ಸಾಲ ಮನ್ನಾ ಮಾಡಬೇಕು ಎಂಬ ರೈತರ ನಿಲುವನ್ನು ನೀವು ಬೆಂಬಲಿಸುವಿರಾ?
- ಮಹಾರಾಷ್ಟ್ರದ ಯಾವತ್ಮಲ್‌ನಲ್ಲಿ ರೈತನೊಬ್ಬ ಪ್ರಧಾನಮಂತ್ರಿ ನರೇಂದ್ರ ಮೋದಿಯೇ ಹೊಣೆ ಎಂದು ದೂರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದರ ಬಗ್ಗೆ ಬಿಜೆಪಿ ಸರ್ಕಾರ ಏನು ಮಾಡುತ್ತಿದೆ? ರೈತರ ಆತ್ಮಹತ್ಯೆಗಳಿಗೆ ನೀವು ನಮ್ಮನ್ನು ದೂಷಿಸುತ್ತೀರಾ ಎಂದಾದರೆ ಈ ವಿಚಾರದಲ್ಲಿ ಮೋದಿ
ನಡವಳಿಕೆ ಬಗ್ಗೆ ನೀವೇನು ಹೇಳುವಿರಿ?
- ಮುಖ್ಯಮಂತ್ರಿಯಾಗಿದ್ದಾಗ ನೀವು ನೂರಾರು ಎಕರೆಯಷ್ಟು ಬಿಡಿಎ ಭೂಮಿಯನ್ನು ಡಿನೋಟಿಫೈ ಮಾಡಿದ್ದೀರಿ. ಈ ಮೂಲಕ ಹಲವಾರು ಬಡಾವಣೆ
ನಾಶಪಡಿಸಿ ಹಲವಾರು ಮಂದಿ ಸೂರು ಕಳೆದು ಕೊಳ್ಳುವಂತೆ ಮಾಡಿದ್ದೀರಿ. ನೀವು ಡಿನೋಟಿಫಿಕೇಷನ್ ಅಕ್ರಮ ಮಾಡಿದ್ದು ಏಕೆ ಹಾಗೂ
ಬೆಂಗಳೂರಿನವರು ಮತ್ತೆ ನಿಮ್ಮನ್ನು ಹೇಗೆ ನಂಬುತ್ತಾರೆ?
- ರೆಡ್ಡಿ ಸಹೋದರರು ೨೫ ಸಾವಿರ ಕೋಟಿ ರು. ಖನಿಜ ಸಂಪತ್ತು ಲೂಟಿ ಮಾಡಲು ನೀವು ಅವಕಾಶ ಮಾಡಿಕೊಟ್ಟಿದ್ದು ಏಕೆ? ಅವರು ಲೂಟಿ
ಹೊಡೆಯುತ್ತಿದ್ದಾಗ ನೀವೇಕೆ ಅಸಹಾಯಕರಂತೆ ವರ್ತಿಸಿದಿರಿ?
- ನಾವು ಅನ್ನಭಾಗ್ಯ ಯೋಜನೆಯಡಿ 4 ಕೋಟಿ ಜನರಿಗೆ ಪ್ರತಿ ತಿಂಗಳೂ ವ್ಯಕ್ತಿಗೆ 7 ಕೆ.ಜಿ. ಉಚಿತ ಅಕ್ಕಿ ಹಾಗೂ 1 ಕೋಟಿ ಮಕ್ಕಳಿಗೆ ಹಾಲು
ನೀಡುತ್ತಿದ್ದೇವೆ. ನೀವು ಇದಕ್ಕಿಂತ ಭಿನ್ನವಾಗಿ ಏನು ಮಾಡುವಿರಿ?
- ಬಿಜೆಪಿಯ ಮೂರು ಮುಖ್ಯಮಂತ್ರಿಗಳು 5 ವರ್ಷದಲ್ಲಿ 6 ಕಿ.ಮೀ. ಮೆಟ್ರೋ ಮಾರ್ಗ ನಿರ್ಮಿಸಿದ್ದರು. ನಾವು 5 ವರ್ಷದಲ್ಲಿ 36 ಕಿ.ಮೀ. ಮೆಟ್ರೋ
ನಿರ್ಮಿಸಿದ್ದೇವೆ. 2ನೇ ಹಂತವನ್ನು ನಿರ್ಮಿಸುತ್ತಿದ್ದು, 3ನೇ ಹಂತದ ಸಿದ್ಧತೆಯಲ್ಲಿದ್ದೇವೆ.
- ನಾವು ಕೇಂದ್ರ ಸರ್ಕಾರದಿಂದ ಉಪನಗರ ರೈಲು ಯೋಜನೆಗೆ ಅನುದಾನ ದೊರೆಯುವಂತೆ ಮಾಡಿದ್ದೇವೆ. ಎಲೆಕ್ಟ್ರಿಕಲ್ ಬಸ್ ಸೇವೆ ಸೇರಿದಂತೆ
ಬಿಎಂಟಿಸಿ ಬಸ್ಸುಗಳ ಸಂಖ್ಯೆ ಹೆಚ್ಚಿಸಿದ್ದೇವೆ. ಸಂಚಾರದಟ್ಟಣೆ ನಿವಾರಣೆಗೆ ನಿಮ್ಮ ಪರಿಹಾರವೇನು?