ನವದೆಹಲಿ(ನ.09): ದೇಶ ಕಾತರದಿಂದ ಕಾಯುತ್ತಿದ್ದ ಐತಿಹಾಸಿಕ ಅಯೋಧ್ಯೆ-ಬಾಬರಿ ಮಸೀದಿ ಭೂವಿವಾದದ ತೀರ್ಪನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪಂಚ ಸದಸ್ಯ ಪೀಠ ಓದುತ್ತಿದೆ.

ಆರಂಭದಲ್ಲೇ ಶಿಯಾ ವಕ್ಫ್ ಬೋರ್ಡ್ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್, ಬಾಬರ್ ಯಾವಾಗ ಮಸೀದಿ ಕಟ್ಟಿದ ಎಂಬುದು ಈಗ ಪ್ರಸ್ತುತವಲ್ಲ ಎಂದು ಅಭಿಪ್ರಾಯಪಟ್ಟಿತು.

ಅಲ್ಲದೇ ವಿಳಂಬ ದಾವೆ ಕಾರಣ ನೀಡಿ ನಿರ್ಮೋಹಿ ಅಖಾಡದ ಅರ್ಜಿಯನ್ನೂ ಸುಪ್ರೀಕೋರ್ಟ್ ಪಂಚಪೀಠ ವಜಾಗೊಳಿಸಿದೆ. ನಿರ್ಮೋಹಿ ಅಖಾಡಕ್ಕೆ ವಿವಾದಿತ ಸ್ಥಳದಲ್ಲಿ ಪೂಜೆಗೆ ಅಧಿಕಾರವಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು. 

ವಿವಾದಕ್ಕೆ ಸಂಬಂಧಿಸಿದಂತೆ ರಾಮಲಲ್ಲಾ ಹಾಗೂ ಸುನ್ನಿ ವಕ್ಫ್ ಬೋರ್ಡ್ ಅರ್ಜಿಯನ್ನು ಮಾತ್ರ ಪರಿಗಣಿಸುತ್ತಿರುವುದಾಗಿ  ರಂಜನ್ ಗೊಗೊಯ್ ನೇತೃತ್ವದ ಪಂಚಪೀಠ ಸ್ಪಷ್ಟಪಡಿಸಿತು.

ಬಾಬರ್ ಆದೇಶದಂತೆ ಮೀರ್ ಬಾಕಿ ಮಸೀದಿ ಕಟ್ಟಿರುವುದು ಹೌದು ಎಂದ ಸುಪ್ರೀಂಕೋರ್ಟ್, ಧಾರ್ಮಿಕ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ ಎಂದು ಮಾರ್ಮಿಕವಾಗಿ ಹೇಳಿತು. 

ಯಾವುದೇ ಖಾಸಗಿ ವ್ಯಕ್ತಿಗಳು ಭೂಮಿಗಾಗಿ ಹಕ್ಕು ಮಂಡನೆ ಮಾಡದಿರುವುದರಿಂದ, ವಿವಾದಿತ ಸ್ಥಳವನ್ನು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ನೋಡುವುದು ಅನಿವಾರ್ಯ ಎಂದು ಪೀಠ ಹೇಳಿತು.

ಆದರೆ ಬಾಬಿ ಮಸೀದಿ ಖಾಲಿ ಸ್ಥಳದಲ್ಲಿ ನಿರ್ಮಾಣ ಮಾಡಿಲ್ಲ ಎಂದಿರುವ ಸುಪ್ರೀಂಕೋರ್ಟ್, ಅದಕ್ಕೂ ಮುಂಚೆ ಅಲ್ಲಿ ಮಂದಿರವಿತ್ತು ಎಂದು ಅಭಿಪ್ರಾಯಪಟ್ಟಿದೆ.

ಮಸೀದಿ ಕೆಳಗೆ ವಿಶಾಲ ಅಡಿಪಾಯದ ಮಂದಿರವಿದ್ದು, ಅದು ಖಂಡಿತವಾಗಿಯೂ ಇಸ್ಲಾಮೇತರ ರಚನೆಯಾಗಿತ್ತು ಎಂದು ಪೀಠ ಐತಿಹಾಸಿಕ ತೀರ್ಪು ನೀಡಿದೆ.

ಉತ್ಖನನದ ಸಂದರ್ಭದಲ್ಲಿ ವಿವಾದಿತ ಸ್ಥಳದಲ್ಲಿ ದೊರೆತಿರುವ ಕಲಾಕೃತಿಗಳು ಹಿಂದೂ ಸಂಸ್ಕೃತಿಯನ್ನು ಬಿಂಬಿಸುತ್ತಿದ್ದು, ಅಯೋಧ್ಯೆಯಲ್ಲಿ ರಾಮನ ಜನನವಾಗಿತ್ತು ಎಂಬ ಹಿಂದೂಗಳ ನಂಬಿಕೆ ಸರಿ ಎಂದು ಪೀಠ ಹೇಳಿದೆ..

ಶತಮಾನಗಳಿಂದ ವಿವಾದಿತ ಜಾಗದಲ್ಲೇ ಹಿಂದೂಗಳು ಪೂಜೆ ಮಾಡುತ್ತಾ ಬಂದಿದ್ದು, ೀ ಪರಂಪರೆಯನ್ನು ಗೌರವಿಸಬೇಕಾಗುತ್ತದೆ ಎಂದು ಗೊಗೊಯ್ ಉಲ್ಲೇಖಿಸಿದರು.

ಹಿಂದೂ ಪುರಾಣಗಳಲ್ಲೂ ರಾಮಲಲ್ಲಾ ಉಲ್ಲೇಖವಿದ್ದು, ವಿವಾದಿತ ಸ್ಥಳದಲ್ಲೇ ರಾಮನ ಜನನವಾಗಿತ್ತು ಎಂಬುದು ಇದರಿಂದ ಖಚಿತವಾಗಿದೆ ಎಂದು ಪೀಠ ಹೇಳಿದೆ.

ಇದೇ ವೇಳೆ 1949ರಲ್ಲಿ ಅಕ್ರಮವಾಗಿ ವಿವಾದಿತ ಜಾಗದಕಲ್ಲಿ ರಾಮನ ಮೂರ್ತಿ ಇಡಲಾಗಿತ್ತು ಎಂಬ ಸುನ್ನಿ ವಕ್ಫ್ ಬೋರ್ಡ್ ಅರ್ಜಿಯನ್ನು ಮಾನ್ಯ ಮಾಡಿರುವ ಘನ ನ್ಯಾಯಾಲಯ, 1856ರ ವರೆಗೆ ಅಲ್ಲಿ ನಮಾಜ ಮಾಡಲಾಗುತ್ತಿತ್ತು ಎಂಬ ವಾದಕ್ಕೆ ಪುರಾವೆಯಿಲ್ಲ ಎಂದು ಸ್ಪಷ್ಟಪಡಿಸಿತು.

ಅಯೋಧ್ಯೆ ತೀರ್ಪು ಪ್ರಕಟಿಸಲಿರುವ ಐವರು ನ್ಯಾಯಾಧೀಶರಿವರು