ನವದೆಹಲಿ[ಅ.19]: ಅಯೋಧ್ಯೆ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂವಿವಾದದ ಪ್ರಮುಖ ಪಕ್ಷಗಾರನಾದ ಸುನ್ನಿ ವಕ್ಫ್ ಮಂಡಳಿಯು ಷರತ್ತಿನ ಸಂಧಾನಕ್ಕೆ ಮುಂದಾಗಿದೆ ಎಂಬ ವರದಿಗಳ ಬಗ್ಗೆ, ಪ್ರಕರಣದ ಇತರ ಮುಸ್ಲಿಂ ಪಕ್ಷಗಾರರು ಆಘಾತ ವ್ಯಕ್ತಪಡಿಸಿದ್ದಾರೆ.

ಸುನ್ನಿ ವಕ್ಫ್ ಮಂಡಳಿಯು ತಾನು ಸಂಧಾನಕ್ಕೆ ಸಿದ್ಧ ಎಂದು ಹಾಗೂ ಕೇಸು ವಾಪಸು ಪಡೆಯಲು ತಯಾರಿದ್ದೇನೆ ಎಂದು ಸುಪ್ರೀಂ ಕೋರ್ಟ್‌ನಿಂದ ನೇಮಕಗೊಂಡಿದ್ದ ನ್ಯಾ

ಎಫ್‌.ಎಂ. ಖಲೀಫುಲ್ಲಾ ಹಾಗೂ ಶ್ರೀ ಶ್ರೀ ರವಿಶಂಕರ ಗುರೂಜಿ ನೇತೃತ್ವದ ಸಂಧಾನ ಸಮಿತಿ ಮುಂದೆ ಹೇಳಿತ್ತು ಎನ್ನಲಾಗಿದೆ. ಈ ಬಗ್ಗೆ ಸಂಧಾನ ಸಮಿತಿಯು ಕೋರ್ಟ್‌ಗೆ ಮಾಹಿತಿ ನೀಡಿದೆ ಎಂದು ವರದಿಯಾಗಿತ್ತು.

ಈ ಬಗ್ಗೆ ಶುಕ್ರವಾರ ಪ್ರತಿಕ್ರಿಯೆ ನೀಡಿರುವ ಮುಸ್ಲಿಂ ಪಕ್ಷಗಾರರ ವಕೀಲ ಎಜಾಜ್‌ ಮಕ್ಬೂಲ್‌, ‘ಸುನ್ನಿ ವಕ್ಫ್ ಮಂಡಳಿ ಹೊರತುಪಡಿಸಿ ಮಿಕ್ಕೆಲ್ಲ ಮುಸ್ಲಿಂ ಪಕ್ಷಗಳು ಮಧ್ಯಸ್ಥಿಕೆಯನ್ನು ತಿರಸ್ಕರಿಸಿವೆ. ಅಲ್ಲದೆ, ಸಂಧಾನಕ್ಕೆ ಸಿದ್ಧವಿರುವ ಸುನ್ನಿ ಮಂಡಳಿ ಹೇಳಿಕೆಗೂ ನಮಗೂ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಸುನ್ನಿ ಮಂಡಳಿಯ ಪ್ರಸ್ತಾವದ ಆಧಾರದ ಮೇರೆಗೆ ಸಂಧಾನ ಸಮಿತಿ ನೀಡಿರುವ ಸಂಧಾನ ಸೂತ್ರವನ್ನು ತಾವು ಒಪ್ಪುವುದಿಲ್ಲ. ಸುನ್ನಿ ಮಂಡಳಿಯ ಜತೆ ಸಂಧಾನ ಸಮಿತಿ ಶಾಮೀಲಾಗಿ ಇಂಥ ಹೇಳಿಕೆ ನೀಡಿಸಿರಬಹುದು. ಮೇಲಾಗಿ, ಗೌಪ್ಯವಾಗಿರಬೇಕಿದ್ದ ಸಂಧಾನ ಸಮಿತಿ ವರದಿಯ ಅಂಶಗಳು ಬಹಿರಂಗ ಆಗಿದ್ದು ಹೇಗೆ? ಎಂದು ಎಜಾಜ್‌ ಪ್ರಶ್ನಿಸಿದ್ದಾರೆ.

ಸುನ್ನಿ ಮಂಡಳಿಯ ಷರತ್ತಿನ ಸಂಧಾನವನ್ನು ಹಿಂದೂ ಪಕ್ಷಗಾರರಾದ ನಿರ್ವಾಣಿ ಸಖಾಡಾ, ರಾಮಜನ್ಮಭೂಮಿ ಪೂರ್ಣೋದ್ಧಾರ ಸಮಿತಿ ಹಾಗೂ ಕೆಲ ಹಿಂದೂ ಪಕ್ಷಗಾರರು ಬೆಂಬಲಿಸಿದ್ದರು ಎನ್ನಲಾಗಿತ್ತು.

ಬಾಬ್ರಿ ಮಸೀದಿ ರೀತಿ ಇನ್ನಾವ ಮಸೀದಿಯನ್ನು ಕೂಡ ಇನ್ನು ಮುಂದೆ ಧ್ವಂಸವಾಗಲು ಬಿಡುವುದಿಲ್ಲ ಎಂದು ಕೇಂದ್ರ ಸರ್ಕಾರ ಒಪ್ಪಿದರೆ ತಾನು ಹೂಡಿರುವ ಅಯೋಧ್ಯೆ ಮೊಕದ್ದಮೆ ವಾಪಸು ಪಡೆಯಲು ಸಿದ್ಧ ಎಂದು ಸಂಧಾನ ಸಮಿತಿ ಮುಂದೆ ಸುನ್ನಿ ವಕ್ಫ್ ಮಂಡಳಿ ಹೇಳಿತ್ತು ಎನ್ನಲಾಗಿದೆ.