ದಾಂಡೇಲಿ :  ಕಾಳಿ ನದಿಯಲ್ಲಿ ಶುಕ್ರವಾರ ಸ್ನಾನಕ್ಕಿಳಿದು ಮೊಸಳೆ ಬಾಯಿಗೆ ಸಿಲುಕಿದ ವ್ಯಕ್ತಿಯೊಬ್ಬ ಧೃತಿಗೆಡದೆ ಅದರೊಂದಿಗೆ ಸೆಣಸಾಡಿ ಗೆದ್ದು ಬಂದ ಸಿನಿಮೀಯ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ.

ನಿರ್ಮಲ ನಗರದ ನಾಗರಾಜ ಈರಪ್ಪ ಬಳ್ಳಾರಿ(45) ಮೊಸಳೆಯನ್ನು ಹಿಮ್ಮೆಟ್ಟಿಸಿ ಅಚ್ಚರಿ ಮೂಡಿಸಿರುವ ವ್ಯಕ್ತಿ. ಕೈ, ಕಾಲಿಗೆ ಗಾಯದ ಜತೆ ಆಘಾತಗೊಂಡಿರುವ ಅವರನ್ನು ಈಗ ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಲಾಗಿದೆ.

ಇಲ್ಲಿನ ಈಶ್ವರ ಮಂದಿರದ ಬಳಿ ಸ್ನಾನಕ್ಕೆಂದು ಕಾಳಿ ನದಿಯಲ್ಲಿ ಇಳಿದಾಗ ಹಠಾತ್‌ ಬಂದ ಮೊಸಳೆ ಕೈ ಕಚ್ಚಿ ಎಳೆದುಕೊಂಡು ಹೋಗುತ್ತಿದ್ದಂತೆ ನಾಗರಾಜ ಸಹಾಯಕ್ಕಾಗಿ ಕೂಗಿದ್ದಾರೆ. ಸಮೀಪದಲ್ಲಿ ಬಟ್ಟೆತೊಳೆಯುತ್ತಿದ್ದ ಮಹಿಳೆಯರು ಹಾಗೂ ನಾಗರಾಜ ಕುಟುಂಬದವರು ಕೂಡ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಆದರೆ ಯಾರೂ ಬಂದಿಲ್ಲ. ಈ ವೇಳೆ ನಾಗರಾಜ ತಮ್ಮ ಎಲ್ಲ ಶಕ್ತಿಯನ್ನೂ ಸೇರಿಸಿ ಮೊಸಳೆಯೊಂದಿಗೆ ಸೆಣಸಾಡಿದ್ದಾರೆ. ನೀರು ಹೆಚ್ಚು ಆಳ ಇಲ್ಲದೆ ಇರುವುದು ಅವರಿಗೆ ಸಹಾಯವಾಗಿದೆ. ಹೇಗೋ ತಪ್ಪಿಸಿಕೊಂಡ ಬರುತ್ತಿದ್ದ ನಾಗರಾಜ ಅವರನ್ನು ಮೊಸಳೆ ಮತ್ತೆ ದಾಳಿ ನಡೆಸಿ ಎಳೆದುಕೊಂಡು ಹೋಗಿದೆ. ನಾಗರಾಜ ಕೊಸರಾಡಿ ಮೊಸಳೆ ಬಾಯಿಂದ ತಪ್ಪಿಸಿಕೊಂಡು ನದಿ ನಡುವೆ ಇರುವ ಪೊದೆಯ ಬಳಿ ಹೋಗಿ ಗಿಡಗಂಟಿಯ ನಡುವೆ ಸೇರಿಕೊಂಡು ಚೀರಿದ್ದಾರೆ.

ಅಷ್ಟರಲ್ಲಿ ವೈಲ್ಡ್‌ ರಿವರ್‌ ಅಡ್ವೆಂಚರ್‌ ತಂಡದವರು ರಾಫ್ಟ್‌ ಬೋಟಿನಲ್ಲಿ ನಾಗರಾಜ ಅವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಎರಡು, ಮೂರು ಪೊದೆಗಳನ್ನು ಹುಡುಕಾಡುತ್ತಿದ್ದಾಗ ಸಹಾಯಕ್ಕಾಗಿ ನಾಗರಾಜ ಮೊರೆ ಇಡುತ್ತಿದ್ದುದು ಕೇಳಿದೆ. ತಕ್ಷಣ ಅಲ್ಲಿಗೆ ತೆರಳಿ ನಾಗರಾಜ ಅವರನ್ನು ರಕ್ಷಿಸಿ ಕರೆ ತಂದಿದ್ದಾರೆ. ಆ ವೇಳೆ ನಾಗರಾಜ ಅವರ ಕೈ ಹಾಗೂ ಕಾಲಿಗೆ ಮೊಸಳೆ ಕಚ್ಚಿದ್ದರಿಂದ ತೀವ್ರ ಗಾಯವಾಗಿತ್ತು. ಜತೆಗೆ ನಾಗರಾಜ ಘಟನೆಯಿಂದ ತೀವ್ರ ಆಘಾತಗೊಂಡಿದ್ದರು. ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು.