ಕೋಲ್ಕತ್ತಾ(ಜ.19): ‘ಇದು ವ್ಯಕ್ತಿಯೊಬ್ಬರ ವಿರುದ್ಧದ ಹೋರಾಟವಲ್ಲ, ದೇಶವನ್ನು ಸರ್ವಾಧಿಕಾರಿ ಆಡಳಿತದ ಕಪಿಮುಷ್ಠಿಯಿಂದ ಮುಕ್ತಗೊಳಿಸಿ, ಸಂವಿಧಾನವನ್ನು ಪುನರ್‌ ಸ್ಥಾಪಿಸುವ ಬಲಿಷ್ಠ ಹೋರಾಟ..’ ಪ.ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಇಂದು ನಡೆದ ವಿಪಕ್ಷಗಳ ಮಹಾ ರ್ಯಾಲಿಯಲ್ಲಿ ಕೇಳಿಬಂದ ಒಕ್ಕೊರಲಿನ ಧ್ವನಿ ಇದು.

ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ಇಂದು ಪ್ರಧಾನಿ ನರೇಂದ್ರ ಮೋದಿ ವಿರೋಧಿ ಬಣ ರಾಜಕೀಯ ನಾಯಕರಿಂದ ತುಂಬಿ ಹೋಗಿತ್ತು. ಉತ್ತರದ ಕಾಶ್ಮೀರದಿಂದ ಹಿಡಿದು ದಕ್ಷಿಣದ ತಮಿಳುನಾಡಿನ ಎಲ್ಲಾ ಪ್ರಮುಖ ಪ್ರಾದೇಶಿಕ ರಾಜಕೀಯ ಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

ಇಲ್ಲಿನ ಬ್ರಿಗೇಡ್ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಲಕ್ಷಾಂತರ ಜನ ಭಾಗವಹಿಸಿದ್ದರು. ವೇದಿಕೆ ಮೇಲಿದ್ದ ಎಲ್ಲ ನಾಯಕರೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ಮೋದಿ ಆಡಳಿತದಲ್ಲಿ ಸಂವಿಧಾನ ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿದ್ದು, ದೇಶ ಪ್ರಜಾಪ್ರಭುತ್ವದಿಂದ ಸರ್ವಾಧಿಕಾರಿ ಆಡಳಿತದ ತೆಕ್ಕೆಗೆ ಜಾರುತ್ತಿದೆ ಎಂದು ಈ ನಾಯಕರು ಎಚ್ಚರಿಸಿದರು. 2014ರ ಲೋಕಸಭೆ ಚುನಾವಣೆಗೂ ಮೊದಲು ಬಿಜೆಪಿ ಮತದಾರರಿಗೆ ನೀಡಿದ್ದ ಎಲ್ಲಾ ಭರವಸೆಗಳನ್ನು ಬದಿಗೊತ್ತಿ, ದೇಶದಲ್ಲಿ ಕೋಮುದ್ವೇಷ ಹಬ್ಬಿಸುವ ಕುತಂತ್ರ ನಡೆಸಿದೆ ಎಂದು ಈ ನಾಯಕರು ಗಂಭೀರ ಆರೋಪ ಮಾಡಿದರು.

ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆದ ವಿಪಕ್ಷಗಳ ಮಹಾ ರ್ಯಾಲಿಯಲ್ಲಿ ಎಲ್ಲಾ ಬಿಜೆಪಿ ವಿರೋಧಿ ಬಣ ಒಗ್ಗೂಡಿತ್ತು. ಪ್ರಮುಖವಾಗಿ ಜಮ್ಮು ಮತ್ತು ಕಾಶ್ಮೀರದ ಎನ್‌ಸಿ ಮುಖಂಡರಾದ ಫಾರೂಖ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ, ಕರ್ನಾಟಕದ ಜೆಡಿಎಸ್ ನಾಯಕರಾದ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಯುಪಿಯ ಎಸ್‌ಪಿ ನಾಯಕ ಅಖಿಲೇಶ್ ಯಾದವ್, ಜೆಡಿಯು ಉಚ್ಛಾಟಿತ ನಾಯಕ ಶರದ್ ಯಾದವ್, ಗುಜರಾತ್ ಯುವ ನಾಯಕರಾದ ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಮಹಾರಾಷ್ಟ್ರದ ಎನ್‌ಸಿಪಿ ನಾಯಕ ಶರದ್ ಪವಾರ್, ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

ಇನ್ನೊಂದು ವಿಶೇಷ ಏನೆಂದರೆ ಈ ಸಮಾವೇಶದಲ್ಲಿ ಹಿಂದೊಮ್ಮೆ ಬಿಜೆಪಿ ಪ್ರಮುಖ ನಾಯಕರೆನಿಸಿಕೊಂಡಿದ್ದ ಯಶ್ವಂತ್ ಸಿನ್ಹಾ, ಅರುಣ್ ಶೌರಿ ಹಾಗೂ ಹಾಲಿ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಕೂಡ ಭಾಗವಹಿಸಿದ್ದರು. ಅಲ್ಲದೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಎಸ್‌ಪಿ ನಾಯಕಿ ಮಾಯಾವತಿ ಸಮಾವೇಶಕ್ಕೆ ಬೆಂಬಲ ನೀಡಿ ಪತ್ರ ಬರೆದಿದ್ದರು. ಎಡಪಕ್ಷಗಳು ಈ ಸಮಾವೇಶದಲ್ಲಿ ಭಾಗವಹಿಸಿರಲಿಲ್ಲ.