ಜೈಪುರ :  ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಹಾಗೂ ಬಿಜೆಪಿ ಮುಖಂಡರು ಗೆಲುವಿನ ಭರವಸೆಯಲ್ಲಿದ್ದಾರೆ. 

ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಮತ್ತೊಮ್ಮೆ ರಾಜ್ಯದಲ್ಲಿ ಸರ್ಕಾರ ರಚನೆ ಮಾಡುತ್ತದೆ ಎಂದು ರಾಜೆ ಹಾಗೂ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಕಾವತ್ ಹೇಳಿದ್ದಾರೆ. 

ಈಗಾಗಲೇ ಸರ್ಕಾರ ರಚನೆಗೆ ಬಿಜೆಪಿ ಸಿದ್ಧವಾಗಿದ್ದು, ಯಾರ ಬೆಂಬಲದ ಅಗತ್ಯವೂ ಇಲ್ಲ. ನಮ್ಮ ಹಿರಿಯ ನಾಯಕರು ಈಗಾಗಲೇ ಸ್ವತಂತ್ರ ಅಭ್ಯರ್ಥಿಗಳನ್ನು ಸಂಪರ್ಕ ಮಾಡಿದ್ದಾರೆ ಎಂದು ಶೇಕಾವತ್ ಹೇಳಿದ್ದಾರೆ. 

ಡಿಸೆಂಬರ್ 7 ರಂದು ರಾಜಸ್ಥಾನದಲ್ಲಿ ಚುನಾವಣೆ ಮುಕ್ತಾಯವಾಗಿದ್ದು, 11ರ ಮಂಗಳವಾರ ಫಲಿತಾಂಶ  ಪ್ರಕಟವಾಗುತ್ತಿದೆ. ಫಲಿತಾಂಶ ಪ್ರಕಟವಾಗುವ ನಿಟ್ಟಿನಲ್ಲಿ ಬಿಜೆಪಿ  ವಿಶೇಷ ಸ್ಟ್ರಾಟಜಿಯೊಂದನ್ನು ಸಿದ್ಧಮಾಡಿಕೊಂಡಿದೆ. ಪ್ರತೀ ಜಿಲ್ಲೆಯಲ್ಲಿಯೂ ಕೂಡ ಓರ್ವ ಹಿರಿಯ ಮುಖಂಡರು ಇರಬೇಕೆಂದು ಸೂಚನೆ ನೀಡಿದೆ. 

ಭಾನುವಾರ ಮುಖ್ಯಮಂತ್ರಿ ವಸುಂಧರಾ ರಾಜೇ ನೇತೃತ್ವದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿದ್ದು, ಈ ಸಭೆಯಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಕಾವತ್, ಅಶೋಕ್ ಪರ್ನಾಮಿ,  ಮದನ್ ಲಾಲ್ ಸೈನಿ, ಚಂದ್ರಶೇಕರ್, ಸಚಿವ ಅರುಣ್ ಚತುರ್ವೇದಿ ಪಾಲ್ಗೊಂಡಿದ್ದರು. 

ಕಾಂಗ್ರೆಸ್ ಕೂಡ ಈಗಾಗಲೇ ರಾಜಸ್ಥಾನದಲ್ಲಿ ಗೆಲುವಿನ ಭರವಸೆ ಹೊಂದಿದ್ದು, ಸರ್ಕಾರ ರಚನೆ ಮಾಡಲು ಸಿದ್ಧರಾಗಿದ್ದಾರೆ. ಈಗಾಗಲೇ ರಾಜ್ಯ ಮುಖಂಡರು ಕಾಂಗ್ರೆಸ್ ಹೈ ಕಮಾಂಡ್ ಭೇಟಿ ಮಾಡಿ ಈ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದಾರೆ.