ನೈಸ್‌ ಖೇಣಿ ಸಹೋದರ, ಚಿಕ್ಕಪ್ಪ ಜೆಡಿಎಸ್‌ಗೆ ಸೇರ್ಪಡೆ

Ashok Kheny Brother Join JDS Party
Highlights

ನೈಸ್‌ ಕಂಪನಿ ಮುಖ್ಯಸ್ಥ ಅಶೋಕ್‌ ಖೇಣಿ ಅವರನ್ನು ಸೋಲಿಸಬೇಕು ಎಂಬ ಹಟ ತೊಟ್ಟಿರುವ ಜೆಡಿಎಸ್‌ ನಾಯಕರು ಖೇಣಿ ಕುಟುಂಬದ ಪ್ರಮುಖರನ್ನು ತಮ್ಮ ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು : ನೈಸ್‌ ಕಂಪನಿ ಮುಖ್ಯಸ್ಥ ಅಶೋಕ್‌ ಖೇಣಿ ಅವರನ್ನು ಸೋಲಿಸಬೇಕು ಎಂಬ ಹಟ ತೊಟ್ಟಿರುವ ಜೆಡಿಎಸ್‌ ನಾಯಕರು ಖೇಣಿ ಕುಟುಂಬದ ಪ್ರಮುಖರನ್ನು ತಮ್ಮ ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅಶೋಕ್‌ ಖೇಣಿ ಚಿಕ್ಕಪ್ಪ ಹಾಗೂ ವಿಧಾನಪರಿಷತ್ತಿನ ಮಾಜಿ ಸದಸ್ಯ ನರೇಂದ್ರ ಖೇಣಿ ಮತ್ತು ಖೇಣಿ ಸಹೋದರ ಸಂಜಯ್‌ ಖೇಣಿ ಅವರು ಭಾನುವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್‌ ಸೇರ್ಪಡೆಗೊಂಡರು.

ಇದೇ ವೇಳೆ ಮಾತನಾಡಿದ ನರೇಂದ್ರ ಖೇಣಿ, ಈ ಚುನಾವಣೆಯಲ್ಲಿ ಅಶೋಕ್‌ ಖೇಣಿ ಅವರು ಸೋಲುತ್ತಾರೆ. ಅವರನ್ನು ಸೋಲಿಸಿಯೇ ತೀರುತ್ತೇವೆ. ಗೆದ್ದು ಬರಲಿ ನೋಡೋಣ. ಇದು ನನ್ನ ಸವಾಲು ಎಂದು ಹೇಳಿದರು.

‘ಅವರು ಹಣ ಮಾಡಿಕೊಂಡಿದ್ದು, ಬೆಂಗಳೂರಿನಲ್ಲಿ ಮಜಾ ಮಾಡುತ್ತಿದ್ದಾರೆ. ಐದು ವರ್ಷಗಳ ಕಾಲ ಶಾಸಕರಾಗಿದ್ದರೂ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ. ಪಕ್ಷದ ಅಭ್ಯರ್ಥಿಯಾಗಿರುವ ಬಂಡೆಪ್ಪ ಕಾಶೆಂಪೂರ್‌ ಅವರನ್ನು ಗೆಲ್ಲಿಸುತ್ತೇವೆ’ ಎಂದು ತಿಳಿಸಿದರು.

ದೇವೇಗೌಡರು ಮಾತನಾಡಿ, ಖೇಣಿ ಕುಟುಂಬ ಬೀದರ್‌ ಜಿಲ್ಲೆಯಲ್ಲಿ ಒಂದು ದೊಡ್ಡ ವಂಶ. ಆದರೆ, ಅಕ್ರಮ ಎಸಗಿರುವ ಶಾಸಕ ಅಶೋಕ್‌ ಖೇಣಿಯನ್ನು ಸೋಲಿಸುತ್ತೇನೆ ಎಂದು ಹಿಂದೆ ಹೇಳಿದ್ದೆ. ಈಗಲೂ ಅದಕ್ಕೆ ಬದ್ಧನಾಗಿದ್ದೇನೆ. ಈಗ ಅವರ ಚಿಕ್ಕಪ್ಪ ನರೇಂದ್ರ ಖೇಣಿ, ಸಹೋದರ ಸಂಜಯ್‌ ಖೇಣಿ ನಮ್ಮ ಪಕ್ಷಕ್ಕೆ ಸೇರಿದ್ದಾರೆ. ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ ದೊಡ್ಡ ಶಕ್ತಿ ಬಂದಂತಾಗಿದೆ. ಇದೆಲ್ಲವೂ ದೈವದಾಟ ಎಂದರು.

loader