ಜೈಪುರ: ರಾಜಸ್ಥಾನದಲ್ಲಿ ಕಾಂಗ್ರೆಸ್‌ 199 ಕ್ಷೇತ್ರಗಳ ಪೈಕಿ 99 ಕ್ಷೇತ್ರಗಲ್ಲಿ ಗೆಲುವು ದಾಖಲಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಹುಮತಕ್ಕೆ ಕೇವಲ 1 ಸ್ಥಾನದ ಅಗತ್ಯವಿರುವುದರಿಂದ ಸ್ವತಂತ್ರರು ಹಾಗೂ ಇತರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ. ಆದರೆ, ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಬುಧವಾರ ನಡೆದ ಶಾಸಕಾಂಗ ಪಕ್ಷದ ಸಭೆ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅಥವಾ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಸಚಿನ್‌ ಪೈಲಟ್‌ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಲು ವಿಫಲವಾಗಿದೆ. ಅಶೋಕ್‌ ಗೆಹ್ಲೋಟ್‌ ಹಾಗೂ ಸಚಿನ್‌ ಪೈಲಟ್‌ ಬೆಂಬಲಿಗರ ಬಿಗಿ ಪಟ್ಟಿನಿಂದಾಗಿ ಮುಖ್ಯಮಂತ್ರಿ ಹುದ್ದೆ ಕಗ್ಗಂಟಾಗಿ ಪರಿಗಣಿಸಿದೆ. ಅಂತಿಮವಾಗಿ ಮುಖ್ಯಮಂತ್ರಿ ಯಾರಾಗಬೇಕು ಎಂಬ ನಿರ್ಧಾರವನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ವಿವೇಚನೆಗೆ ಬಿಡಲು ಶಾಸಕಾಂಗ ಸಭೆ ಗೊತ್ತುವಳಿಯೊಂದನ್ನು ಅಂಗೀಕರಿಸಿದೆ.

ದೆಹಲಿಗೆ ರಾಹುಲ್‌ ಬುಲಾವ್‌:  ಇದೇ ವೇಳೆ ಮುಖ್ಯಮಂತ್ರಿ ಆಯ್ಕೆ ಸಂಬಂಧ ಸಚಿನ್‌ ಪೈಲಟ್‌ ಹಾಗೂ ಅಶೋಕ್‌ ಗೆಹ್ಲೋಟ್‌ ಜೊತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಗುರುವಾರ ದೆಹಲಿಯಲ್ಲಿ ಮಾತುಕತೆ ನಡೆಸಲಿದ್ದು, ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಇದೇ ವೇಳೆ, ನಾವು ರಾಹುಲ್‌ ಗಾಂಧಿ ಅವರ ಭೇಟಿಗೆ ಸಮಯ ಕೇಳಿದ್ದು, ಬುಧವಾರ ಅವರನ್ನು ಭೇಟಿಯಾಗಿ ಶಾಸಕಾಂಗ ಸಭೆಯ ವಿವರಗಳನ್ನು ನೀಡಲಾಗುವುದು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಅವಿನಾಶ್‌ ಪಾಂಡೆ ಸಭೆಯ ಬಳಿಕ ಮಾಹಿತಿ ನೀಡಿದ್ದಾರೆ.

ರಾಜ್ಯಪಾಲರ ಭೇಟಿ:  ಶಾಸಕಾಂಗ ಸಭೆಯ ಬಳಿಕ ಕಾಂಗ್ರೆಸ್‌ ಪಕ್ಷದ ನಿಯೋಗ ಬುಧವಾರ ಸಂಜೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ಕಲ್ಯಾಣ್‌ ಸಿಂಗ್‌ ಅವರ ಬಳಿ ಸರ್ಕಾರ ರಚನೆಗೆ ರಾಜ್ಯಪಾಲ ಹಕ್ಕು ಮಂಡಿಸಿದೆ.