ಹೈದರಾಬಾದ್(ಜ.20): ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸುವುದನ್ನು ಪಾಕಿಸ್ತಾನ ಈ ಕೂಡಲೇ ನಿಲ್ಲಿಸಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಒತ್ತಾಯಿಸಿದ್ದಾರೆ.

ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಭಾರತದಿಂದ ಅದನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಒವೈಸಿ ಗುಡುಗಿದ್ದಾರೆ. ಕಾಶ್ಮೀರ ಪಡೆಯುವ ಕನಸು ಕಾಣುತ್ತಿರುವ ಪಾಕಿಸ್ತಾನ, ಈ ಕೂಡಲೇ ತನ್ನ ಹಸ್ತಕ್ಷೇಪ ನಿಲ್ಲಿಸಬೇಕು ಅವರು ಒತ್ತಾಯಿಸಿದರು. ಪಾಕ್‌ ಕಾಶ್ಮೀರದ ವಿಚಾರದಲ್ಲಿ ಕ್ಯಾತೆ ತೆಗೆದರೆ ಅದರ ಪರಿಣಾಮ ಕೆಟ್ಟದಾಗಿರುತ್ತದೆ ಎಂದು ಒವೈಸಿ ಎಚ್ಚರಿಸಿದ್ದಾರೆ.

ಇದೇ ವೇಳೆ ಕೇಂದ್ರದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ, ಕಣಿವೆ ರಾಜ್ಯದಲ್ಲಿ ಶಾಂತಿ ಸ್ಥಾಪನೆ ಸಾಧ್ಯವಿಲ್ಲ ಎಂದಿರುವ ಒವೈಸಿ, ಈ ಪಕ್ಷಗಳಿಗೆ ಕಣಿವೆಗೆ ಸಂಬಂಧಿಸಿದಂತೆ ಯಾವುದೇ ನೀತಿ, ದೂರದೃಷ್ಟಿಯ ಯೋಜನೆ ಇಲ್ಲ ಎಂದು ಆರೋಪಿಸಿದರು.