ಬೆಳಗಾವಿ :  ಬೆಳೆಸಾಲ, ಕೃಷಿ ಉಪಕರಣ ಸಾಲ ಮಾಡಿದ್ದ ಬೆಳಗಾವಿ ರೈತರ ವಿರುದ್ಧ ಎಕ್ಸಿಸ್‌ ಬ್ಯಾಂಕ್‌ ಕುತಂತ್ರ ಮತ್ತೊಂದು ಮಜಲಿಗೆ ತಲುಪಿದೆ. ಚೆಕ್‌ಬೌನ್ಸ್‌ ಪ್ರಕರಣಗಳಲ್ಲಿ ಬೆಳಗಾವಿಯ 180ಕ್ಕೂ ಹೆಚ್ಚು ರೈತರಿಗೆ ಇದೀಗ ಬಂಧನ ವಾರಂಟ್‌ ಜಾರಿಯಾಗಿದೆ. ಇದರಿಂದಾಗಿ ಕಂಗೆಟ್ಟ ರೈತರು ತಲೆಮರೆಸಿಕೊಂಡು ಓಡಾಡುವ ಪರಿಸ್ಥಿತಿಗೆ ಸಿಲುಕಿದ್ದಾರೆ.

ರೈತರ ವಿರುದ್ಧ ಎಕ್ಸಿಸ್‌ ಬ್ಯಾಂಕ್‌ ಕೋಲ್ಕತಾದ ನ್ಯಾಯಾಲಯದಲ್ಲಿ ಚೆಕ್‌ ಬೌನ್ಸ್‌ ಕೇಸು ಹಾಕಿದ್ದು, ವಿಚಾರಣೆಗೆ ಹಾಜರಾಗುವಂತೆ ಸೆಪ್ಟೆಂಬರ್‌ನಲ್ಲಿ ಸಮನ್ಸ್‌ ಜಾರಿಯಾಗಿತ್ತು. ಈ ಬಗ್ಗೆ ವಿವಾದ ಭುಗಿಲೆದ್ದು, ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ಬ್ಯಾಂಕು ಭರವಸೆಯನ್ನೂ ನೀಡಿತ್ತು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೂ ಅಧಿಕಾರಿಗಳ ಜತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದರು. ಆದರೆ, ಅದಾವುದೂ ಆಗಲೇ ಇಲ್ಲ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ರೈತರ ವಿರುದ್ಧ ಬಂಧನ ವಾರಂಟ್‌ ಜಾರಿಯಾಗಿದೆ. ಈ ದಿಢೀರ್‌ ಬೆಳವಣಿಗೆಯಿಂದಾಗಿ ತತ್ತರಿಸಿ ಹೋಗಿರುವ ರೈತರು ಇದೀಗ ಕಂಗಾಲಾಗಿ ಕುಳಿತಿದ್ದಾರೆ.

ಬ್ಲಾಂಕ್‌ ಚೆಕ್ಕೇ ಅಸ್ತ್ರ: ಕೃಷಿ ಸಾಲ, ಕೃಷಿ ಸಲಕರಣೆ, ಪೈಪ್‌ಲೈನ್‌ ಸಾಲ ಪಡೆಯಲು ಭದ್ರತೆಗಾಗಿ ಎಕ್ಸಿಸ್‌ ಬ್ಯಾಂಕ್‌ಗೆ ರೈತರು ಖಾಲಿ ಚೆಕ್‌ಗೆ ಸಹಿ ಮಾಡಿಕೊಟ್ಟಿದ್ದರು. ಈ ಚೆಕ್‌ನ್ನೇ ತನ್ನ ಅಸ್ತ್ರವನ್ನಾಗಿಸಿಕೊಳ್ಳುವ ಮೂಲಕ ರೈತರ ಮೇಲೆ ಬ್ಯಾಂಕ್‌ ಗದಾಪ್ರಹಾರ ಮಾಡುತ್ತಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ, ಬೈಲಹೊಂಗಲ ಹಾಗೂ ರಾಮದುರ್ಗ ತಾಲೂಕಿನ ಸುಮಾರು 180 ರೈತರಿಗೆ ಈ ರೀತಿಯ ಅರೆಸ್ಟ್‌ ವಾರಂಟ್‌ ನೀಡಿದೆ ಎಂದು ತಿಳಿದುಬಂದಿದೆ.

ಸಿಎಂ ಆದೇಶಕ್ಕೆ ಗೌರವ ನೀಡದ ಬ್ಯಾಂಕ್‌:

ಕಳೆದ ತಿಂಗಳು ಕೋಲ್ಕತಾ ಕೋರ್ಟ್‌ ನಿಂದ ಸಮನ್ಸ್‌ ಬಂದಾಗ ದಿಕ್ಕುತೋಚದಾದ ರೈತರು ಬೈಲಹೊಂಗಲ ಶಾಖೆ ಮುಂದೆ ಧರಣಿ ನಡೆಸಿದ್ದರು. ಈ ಬಗ್ಗೆ ಕನ್ನಡಪ್ರಭವೂ ವಿಸ್ಕೃತವಾಗಿ ವರದಿ ಮಾಡಿ ರಾಜ್ಯಾಡಳಿತದ ಗಮನ ಸೆಳೆದಿತ್ತು. ಈ ವಿಚಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗಮನಕ್ಕೆ ಬಂದಾಗ, ಯಾವುದೇ ಕಾರಣಕ್ಕೂ ರಾಜ್ಯದ ರೈತರಿಗೆ ನೀಡಿದ ಸಾಲವನ್ನು ಒತ್ತಾಯಪೂರ್ವಕವಾಗಿ ವಸೂಲಾತಿ ಮಾಡದಂತೆ, ನೀಡಿರುವ ಸಮನ್ಸ್‌ ಅನ್ನು ವಾಪಸ್‌ ಪಡೆಯುವಂತೆ ಎಕ್ಸಿಸ್‌ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸಿದ್ದರು. ಪೊಲೀಸ್‌ ಅಧಿಕಾರಿಗಳು ಹಾಗೂ ಬ್ಯಾಂಕ್‌ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಸಂಧಾನ ಕೂಡ ಮಾಡಲಾಗಿತ್ತು. ಆಗ ಸಾಲ ವಸೂಲಾತಿಗೆ ರೈತರಿಗೆ ಯಾವುದೇ ನೋಟಿಸ್‌ ನೀಡುವುದಿಲ್ಲ, ಅರೆಸ್ಟ್‌ ವಾರಂಟ್‌ ಕಳಿಸುವುದಿಲ್ಲ ಎಂದು ಬ್ಯಾಂಕ್‌ ಸಹ ಹೇಳಿಕೆ ನೀಡಿತ್ತು. ಜೊತೆಗೆ ಈಗ ನೀಡಿರುವ ನೋಟಿಸ್‌ಗಳನ್ನು ಆಯಾ ಬ್ಯಾಂಕಿನ ಶಾಖೆಗಳಲ್ಲಿ ನೀಡುವಂತೆ ಬೈಲಹೊಂಗಲ ಎಕ್ಸಿಸ್‌ ಬ್ಯಾಂಕ್‌ ಶಾಖೆ ರೈತರಿಗೆ ಸೂಚನೆ ನೀಡಿತ್ತು. ಇದೀಗ ಬ್ಯಾಂಕ್‌ ಉಲ್ಟಾಹೊಡೆದಿದೆ.

ಬಾಂಕ್‌ ಜತೆ ಮಾತಾಡ್ತೀನಿ

ಎಕ್ಸಿಸ್‌ ಬ್ಯಾಂಕಿನ ಬೈಲಹೊಂಗಲ ಶಾಖೆಯಲ್ಲಿ ಸಾಲ ಪಡೆದುಕೊಂಡ ರೈತರಿಗೆ ಸಾಲ ವಸೂಲಿಗೆ ಬ್ಯಾಂಕ್‌ ಅರೆಸ್ಟ್‌ ವಾರಂಟ್‌ ಜಾರಿಗೊಳಿಸಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಅಲ್ಲಿ ಸಾಲ ಪಡೆದುಕೊಂಡ ರೈತರು ಯಾರೂ ನನ್ನನ್ನು ಭೇಟಿಯಾಗಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಯೂ ನನಗಿಲ್ಲ. ಆದರೂ ಸಂಕಷ್ಟದಲ್ಲಿರುವ ರೈತರ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ಬ್ಯಾಂಕಿನ ಅಧಿಕಾರಿಗಳ ಜೊತೆಗೆ ಮಾತುಕತೆ ಮಾಡಲಾಗುವುದು.

- ಸುರೇಶ ಅಂಗಡಿ, ಸಂಸದ

ವಾರಂಟ್‌ ಬಗ್ಗೆ ಗೊತ್ತಿಲ್ಲ

ಎಕ್ಸಿಸ್‌ ಬ್ಯಾಂಕಿನ ಬೈಲಹೊಂಗಲ ಶಾಖೆಯು ಸಾಲ ಪಡೆದ ರೈತರಿಗೆ ಕೋಲ್ಕತಾ ನ್ಯಾಯಾಲಯದಿಂದ ಸಮನ್ಸ್‌ ಜಾರಿ ಮಾಡಿತ್ತು. ಆದರೆ, ರೈತರಿಗೆ ಅರೆಸ್ಟ್‌ ವಾರಂಟ್‌ ಜಾರಿಗೊಳಿಸಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ.

- ಸುಧೀರಕುಮಾರ ರೆಡ್ಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಸಾಂದರ್ಬಿಕ ಚಿತ್ರ