Asianet Suvarna News Asianet Suvarna News

ಅರೆಸ್ಟ್ ವಾರೆಂಟ್ : ರೈತರಿಗಿನ್ನೂ ತೀರದ ಆತಂಕ

ರೈತರಿಗೆ ಇದೊಂದು ಮುಗಿಯದ ಆತಂಕವಾಗಿ ಪರಿಣಮಿಸಿದೆ. ಅರೆಸ್ಟ್ ವಾರೆಂಟ್ ಬಗ್ಗೆ ಇನ್ನೂ ಕೂಡ  ಗೊಂದಲ ಮುಂದುವರಿದಿದೆ. ಒಟಿಎಸ್‌(ಒನ್‌ಟೈಂ ಸೆಟಲ್ ಮೆಂಟ್‌) ಸಭೆಯಲ್ಲೂ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ ಬ್ಯಾಂಕ್‌ ಅಧಿಕಾರಿಗಳು ಸಾಲ ಪಡೆದಿರುವ ರೈತರ ವಿವರಗಳನ್ನು ನೀಡಲು ವಿಫಲರಾಗಿದ್ದಾರೆ.

Arrest Warrant About Axis Bank Lone Fear Continue In Farmers
Author
Bengaluru, First Published Nov 14, 2018, 7:51 AM IST

ಬೈಲಹೊಂಗಲ :  ಸಾಲ ಪಡೆದ ರೈತರಿಗೆ ಚೆಕ್‌ ಬೌನ್ಸ್‌ ಕೇಸ್‌ ಸಂಬಂಧ ಕೋಲ್ಕತಾ ಕೋರ್ಟ್‌ನಿಂದ ಬಂಧನ ವಾರೆಂಟ್‌ ಜಾರಿಯಾಗಿರುವ ಬಗ್ಗೆ ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿಗಳೊಂದಿಗಿನ ಸಭೆಯಲ್ಲಿ ಸ್ಪಷ್ಟಉತ್ತರ ಕೊಡದೆ ಛೀಮಾರಿ ಹಾಕಿಸಿಕೊಂಡಿದ್ದ ಎಕ್ಸಿಸ್‌ ಬ್ಯಾಂಕ್‌ ಅಧಿಕಾರಿಗಳು ಇದೀಗ ಮತ್ತೆ ಗೊಂದಲ ಪ್ರದರ್ಶಿಸಿದ್ದಾರೆ. 

ಮಂಗಳವಾರ ನಡೆದ ಒಟಿಎಸ್‌(ಒನ್‌ಟೈಂ ಸೆಟಲ್ ಮೆಂಟ್‌) ಸಭೆಯಲ್ಲೂ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ ಬ್ಯಾಂಕ್‌ ಅಧಿಕಾರಿಗಳು ಸಾಲ ಪಡೆದಿರುವ ರೈತರ ವಿವರಗಳನ್ನು ನೀಡಲು ವಿಫಲರಾಗಿದ್ದಾರೆ. ಅಧಿಕಾರಿಗಳ ಅಸಮರ್ಪಕ ಉತ್ತರಗಳಿಂದಾಗಿ ಸ್ಪಷ್ಟನಿರ್ಧಾರಕ್ಕೆ ಬರುವಲ್ಲಿ ಸಭೆ ವಿಫಲವಾಗಿದ್ದು, ಈ ಹಿಂದಿದ್ದ ಆತಂಕಗಳೇ ಮುಂದುವರಿದಿವೆ. ಹೀಗಾಗಿ ಡಿ.9ರಂದು ಮತ್ತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸುವುದಾಗಿ ಜಿಲ್ಲಾಡಳಿತ ತಿಳಿಸಿದೆ.

ಜಿಲ್ಲಾಧಿಕಾರಿಗಳ ಆದೇಶದನ್ವಯ ಮಂಗಳವಾರ ಇಲ್ಲಿನ ಉಪವಿಭಾಗಾಧಿಕಾರಿಗಳ ಕಾರ್ಯಾಲಯದಲ್ಲಿ ರೈತರು ಮತ್ತು ಎಕ್ಸಿಸ್‌ ಬ್ಯಾಂಕ್‌ ಅಧಿಕಾರಿಗಳ ಸಭೆಯು ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಅಧ್ಯಕ್ಷತೆಯಲ್ಲಿ ಜರುಗಿತು. ಈ ವೇಳೆ ಸಭೆಯಲ್ಲಿ ರೈತರಿಗೆ ಒದಗಿಸಬೇಕಾದ ಸಮರ್ಪಕ ಮಾಹಿತಿಯನ್ನು ನೀಡಲು ಎಕ್ಸಿಸ್‌ ಬ್ಯಾಂಕ್‌ ಅಧಿಕಾರಿಗಳು ತಡಬಡಾಯಿಸಿದರು. ಇದರಿಂದ ಸಿಟ್ಟಿಗೆದ್ದ ರೈತರು ಅಧಿಕಾರಿಗಳನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಎಸಿಯನ್ನು ಒತ್ತಾಯಿಸಿದರು.

ಸಭೆಗೆ ಬಂದಿದ್ದೀರೋ, ಪಿಕ್ನಿಕ್‌ಗೋ?: ಜಿಲ್ಲಾಧಿಕಾರಿಗಳ ಸೂಚನೆಯ ಹೊರತಾಗಿಯೂ ಬೈಲಹೊಂಗಲ ಸಭೆಗೆ ಸಮರ್ಪಕ ದಾಖಲೆ, ವಿವರಗಳನ್ನು ತಾರದ ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ಇದೇನು ಸಭೆ ಎಂದುಕೊಂಡಿದ್ದೀರೋ ಇಲ್ಲವೋ? ಪಿಕ್‌ನಿಕ್‌ ಹೋಗುವ ರೀತಿ ಬಂದಿದ್ದೀರಲ್ಲ ಎಂದು ಪ್ರಶ್ನಿಸಿದರು. ಈ ಹಿಂದೆ ಸಾಲ ಮನ್ನಾ ವ್ಯಾಪ್ತಿಗೆ ಕೇವಲ 15 ರಿಂದ 20 ಜನ ರೈತರು ಬರುತ್ತಾರೆ ಎಂದು ಹೇಳಿದ್ದಿರಿ. ಈಗ ಬೈಲಹೊಂಗಲ ವಿಭಾಗದ 65 ರೈತರ ಪೈಕಿ 42 ಜನ ರೈತರು ಸಾಲ ಮನ್ನಾ ವ್ಯಾಪ್ತಿಗೆ ಬರುತ್ತಾರೆ. ಉಳಿದ 23 ಜನ ರೈತರು ಟ್ರ್ಯಾಕ್ಟರ್‌, ಪೈಪಲೈನ್‌ ಸಾಲಕ್ಕೆ ಒಳಪಡುತ್ತಾರೆ ಎಂಬ ಮಾಹಿತಿಯನ್ನು ನೀಡುತ್ತಿದ್ದೀರಿ. ಆದರೂ ನಿಮ್ಮ ಬಳಿ ಯಾವುದೇ ರೈತರ ಹೆಸರೇ ಇಲ್ಲ ಎಂದು ಹರಿಹಾಯ್ದರು. ನಿಮ್ಮ ಮೇಲೆ ಕಾನೂನಿನ ಕ್ರಮ ತೆಗೆದುಕೊಳ್ಳಲು ರೈತರು ಸಿದ್ಧರಾಗಿದ್ದಾರೆ. ರೈತರಿಗೆ ತೊಂದರೆ ಆದರೆ ಜಿಲ್ಲಾಡಳಿತವೂ ಸಹಿಸಿಕೊಳ್ಳುವುದಿಲ್ಲ ಎಚ್ಚರಿಕೆ ನೀಡಿದರು.

ಎಕ್ಸಿಸ್‌ ಬ್ಯಾಂಕ್‌ ಅಧಿಕಾರಿಗಳು ಓಟಿಎಸ್‌ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದರು. ಆದರೆ ಯಾವುದೇ ಕಾರಣಕ್ಕೂ ಸಾಲ ಮರುಪಾವತಿಸುವುದಿಲ್ಲ ಎಂದು ತಿಳಿಸಿದ ರೈತರು ನಮಗೆ ಋುಣಮುಕ್ತ ಪ್ರಮಾಣ ಪತ್ರ ನೀಡಬೇಕು ಎಂದೇ ಪಟ್ಟು ಹಿಡಿದರು. ಸಭೆಯಲ್ಲಿ ಯಾವುದೇ ಒಮ್ಮತ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗದ್ದರಿಂದ ಡಿ.9ರಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಸಭೆಯಲ್ಲಿ ಸಂಪೂರ್ಣ ಸಾಲ ಮಾಹಿತಿ ನೀಡಿ ನಿರಾಳತೆ ನೀಡಬೇಕು ಎಂದು ರೈತರು ಆಗ್ರಹಿಸಿದರು.

ಎಕ್ಸಿಸ್‌ ಬ್ಯಾಂಕ್‌ ಅಧಿಕಾರಿಗಳ ಮತ್ತು ರೈತರ ಸಭೆಯನ್ನು ಅಂತಿಮವಾಗಿ ನಿರ್ಣಯಿಸಲು ಡಿ.9 ರಂದು ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಜರುಗಿಸಲಾಗುವುದು.

ಶಿವಾನಂದ ಭಜಂತ್ರಿ, ಉಪವಿಭಾಗಾಧಿಕಾರಿ, ಬೈಲಹೊಂಗಲ

ರೈತರ ಬೇಡಿಕೆಯನ್ನು ಪರಿಗಣಿಸಿ ನನ್ನ ವ್ಯಾಪ್ತಿಯಲ್ಲಿ ಬರುವಷ್ಟುಬಡ್ಡಿ ಮನ್ನಾ ಮಾಡಲಾಗುವುದು. ಜಿಲ್ಲೆಯ ಅಥಣಿ ಮತ್ತು ಗೋಕಾಕನಲ್ಲಿಯೂ ಸಭೆ ದಿನಾಂಕ ನಿಗದಿಯಾಗಿದೆ. ಈ ಸಭೆಯಲ್ಲಿ ಚರ್ಚೆ ನಡೆಸಿ, ರೈತರ ಸಾಲಕ್ಕೆ ಹೆಚ್ಚಿನ ಮೊತ್ತದ ಮನ್ನಾ ವಿಷಯವನ್ನು ನಮ್ಮ ಮೇಲಧಿಕಾರಿಗಳಿಗೆ ತಿಳಿಸಿ ಮುಂಬರುವ ಡಿ.9 ರಂದು ನಡೆಯುವ ಡಿಸಿ ಸಭೆಯಲ್ಲಿ ತಿಳಿಸಲಾಗುವುದು.

-ರಾಜಕುಮಾರ.ಜಿ. ಎಕ್ಸಿಸ್‌ ಬ್ಯಾಂಕ್‌ ಹುಬ್ಬಳ್ಳಿ ವಿಭಾಗದ ಸಾಲ ಮರುಪಾವತಿ ಅಧಿಕಾರಿ

ರೈತರ ಬಂಧನ ವಾರಂಟ್‌ಗೆ ಸುಪ್ರೀಂ ತಡೆ​: ತಡವಾಗಿ ಬೆಳಕಿಗೆ ಬಂದ ವಿಚಾರ

ಎಕ್ಸಿಸ್‌ ಬ್ಯಾಂಕಿನಿಂದ ಸಾಲ ಪಡೆದಿದ್ದ ರೈತ ಕುಟುಂಬವೊಂದಕ್ಕೆ ಕೋಲ್ಕತಾ ಕೋರ್ಟ್‌ ಹೊರ​ಡಿ​ಸಿದ್ದ ಬಂಧನ ವಾರಂಟ್‌ಗೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿರುವ ವಿಚಾರ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಸವದತ್ತಿ ತಾಲೂಕಿನ ಬಡ್ಲಿ ಗ್ರಾಮದ ಅಶೋಕ ಖನಗಾಂವಿ ತಡೆಯಾಜ್ಞೆ ತಂದಿರುವ ರೈತ. ಎಕ್ಸಿಸ್‌ ಬ್ಯಾಂಕಿನಲ್ಲಿ ಸಾಲ ಪಡೆದು ಕಟ್ಟಲು ವಿಫಲರಾದ ರೈತ ಅಶೋಕ ಸೇರಿದಂತೆ ಮಕ್ಕಳು, ಪತ್ನಿ, ಹಿರಿಯ ಸಹೋದರ ಹಾಗೂ ಚಿಕ್ಕಪ್ಪನ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಎಂಟು ಜನರಿಗೆ ಕೋಲ್ಕತಾ ನ್ಯಾಯಾಲದಿಂದ ಬಂಧನ ವಾರಂಟ್‌ ಜಾರಿ ಮಾಡಲಾ​ಗಿತ್ತು. ಇದನ್ನು ಪ್ರಶ್ನಿಸಿ ರೈತರು ಜು.25ರಂದು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ತ್ರಿಸದಸ್ಯ ಪೀಠವು ಆ.7ರಂದು ತಡೆಯಾಜ್ಞೆ ನೀಡಿದೆ. ಈ ಮಾಹಿತಿ ಯಾರಿಗೂ ತಿಳಿದಿರಲಿಲ್ಲ. ಬೈಲಹೊಂಗದಲ್ಲಿ ಮಂಗ​ಳ​ವಾರ ನಡೆದ ಸಭೆಯಲ್ಲಿ ಈ ಮಾಹಿತಿಯನ್ನು ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಅವರ ಎದುರು ಹಾಜರುಪಡಿಸಿದ್ದಾರೆ.

Follow Us:
Download App:
  • android
  • ios