2018ರ ಜೂನ್ನಲ್ಲಿ ಭಾರತೀಯ ಸೇನಾ ಜವಾನ ಔರಂಗಜೇಬ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇನೆಯು ಮೂವರು ಸೈನಿಕರನ್ನು ವಿಚಾರಣೆಗೊಳಪಡಿಸಿದೆ. ಈದ್ ಹಬ್ಬಕ್ಕೆಂದು ತಮ್ಮ ಖಾಸಗಿ ವಾಹನದಲ್ಲಿ ತೆರಳುತ್ತಿದ್ದ ಔರಂಗಜೇಬ್ರನ್ನು ಫುಲ್ವಾಲಾ ಪ್ರದೇಶದಲ್ಲಿ ಉಗ್ರರು ಅಪಹರಿಸಿ ಹತ್ಯೆಗೈದಿದ್ದರು. ಇದಾದ ಬಳಿಕ ಶೋಧ ನಡೆಸುತ್ತಿದ್ದ ಸೇನಾ ಹಾಗೂ ಪೊಲೀಸ್ ಸಿಬ್ಬಂದಿಗೆ ಗುಂಡೇಟಿನಿಂದ ಛಿದ್ರಗೊಂಡಿದ್ದ ಔರಂಗಜೇಬ್‌ರವರ ಮೃತದೇಹ ಸಿಕ್ಕಿತ್ತು. ಅವರ ತಲೆ ಹಾಗೂ ಕತ್ತಿಗೆ ಗುಂಡು ಹೊಡೆದು ಹತ್ಯೆಗೈಯ್ಯಲಾಗಿತ್ತು.

ಸದ್ಯ ಔರಂಗಬಜೇಬ್ ಸೇವೆ ಸಲ್ಲಿಸುತ್ತಿದ್ದ ರೆಜಿಮೆಂಟ್-44 ಆರ್‌ಆರ್‌ನ ಮೂವರು ಯೋಧರನ್ನು ಬಂಧಿಸಿ ವಿಚಾರಣೆ ಆರಂಭಿಸಲಾಗಿದೆ. ತನಿಖೆ ನಡೆಸಿದ್ದ ಪೊಲೀಸರಿಗೆ ಈ ಮೂವರು ಜವಾನರೇ ಔರಂಗಜೇಬ್ ರವರ ಮಾಹಿತಿಯನ್ನು ಲೀಕ್ ಮಾಡಿದ್ದಾರೆಂಬ ಸಂಶಯ ಕಾಡಿತ್ತು. ಉಗ್ರರಿಂದ ಹತ್ಯೆಯಾಗಿದ್ದ ಔರಂಗಬೇಬ್‌ರನ್ನು ಮರಣೋತ್ತರ ಔರ್ಯ ಚಕ್ರ ನೀಡಿ ಗೌರವ ಸಲ್ಲಿಸಲಾಗಿತ್ತು.

ಹುತಾತ್ಮ ಔರಂಗಬೇಬ್‌ರವರ ಒಂದು ವಿಡಿಯೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದು ಉಗ್ರರು ಅವರನ್ನು ಹತ್ಯೆಗೈಯ್ಯುವುದಕ್ಕೂ ಮುನ್ನ ಚಿತ್ರೀಕರಿಸಲಾಗಿದ್ದು, ಚಿತ್ರಹಿಂಸೆ ನೀಡಿ ಎನ್ ಕೌಂಟರ್ ಒಂದರ ಮಾಹಿತಿ ಕಲೆ ಹಾಕಲು ಯತ್ನಿಸಿದ್ದರು. ಉಗ್ರರು ಪ್ರಶ್ನಿಸಿದ್ದ ಎನ್ ಕೌಂಟರ್ ನಲ್ಲಿ ಔರಂಗಜೇಬ್ ಕೂಡಾ ಭಾಗವಹಿಸಿದ್ದು, ಇದರಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸುವ ಮೂಲಕ ಆಪರೇಷನ್ ಯಶಸ್ವಿಯಾಗಿಸಿದ್ದರು.

ಸದ್ಯ ಓರ್ವ ಸೈನಿಕನ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನೆಯು ಕೆಲ ಸೈನಿಕರನ್ನೇ ವಿಚಾರಣೆ ನಡೆಸುತ್ತಿರುವುದು ಆತಂಕವುಂಟು ಮಾಡಿದೆ ಎಂಬುವುದರಲ್ಲಿ ಅನುಮಾನವಿಲ್ಲ