ಬೆಂಗಳೂರು :  ಗಾಂಜಾ ಪರ ಚಲನಚಿತ್ರ ಗೀತೆ ರಚಿಸಿದ ವಿವಾದದ ಹಿನ್ನೆಲೆಯಲ್ಲಿ ‘ಅಂತ್ಯ’ ಚಿತ್ರದ ನಿರ್ದೇಶಕ ಮುತ್ತು ಗುರುವಾರ ಎಸಿಬಿ ಅಧಿಕಾರಿ ಎದುರು ವಿಚಾರಣೆಗೆ ಹಾಜರಾದರು. 

ಮಧ್ಯಾಹ್ನ ಎರಡು ಗಂಟೆಗೆ ವಿಚಾರಣೆಗೆ ಹಾಜರಾದ ಮುತ್ತು ಎರಡು ಗಂಟೆ ಗಳ ಕಾಲ ವಿಚಾರಣೆ ಎದುರಿಸಿದರು. ಈಗಾಗಲೇ ಅಂತ್ಯ ಚಿತ್ರದ ಹಾಡನ್ನು ಡಿಲೀಟ್ ಮಾಡಲಾಗಿದೆ. ಚಂದನ್‌ಶೆಟ್ಟಿ ಅವರಿಗೆ ನೋಟಿಸ್ ನೀಡಲಾಗಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಹಾಡು ಡಿಲೀಟ್ ಮಾಡಿದ್ದೇನೆ. ಬೇರೆಯವರು ವಿಡಿಯೋ ಡೌನ್‌ಲೋಡ್ ಮಾಡಿ ಮತ್ತೆ ಅಪ್‌ಲೋಡ್ ಮಾಡಿದ್ದಾರೆ. ಅವರ ವಿರುದ್ಧ ದೂರು ನೀಡಿ ಡಿಲೀಟ್ ಮಾಡಿಸುತ್ತೇನೆ. ಮತ್ತೆ ಇಂತಹ ತಪ್ಪುಗಳು ಆಗಲ್ಲ. 

ನಾವೇ ಖುದ್ದು ಮತ್ತೊಂದು ಹಾಡು ಮಾಡುವ ಮೂಲಕ ಮಾದಕ ವಸ್ತುವಿನ ಬಗ್ಗೆ ಜಾಗೃತಿ ಮೂಡಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಚಂದನ್‌ಶೆಟ್ಟಿ ಅವರು ಸಾಹಿತ್ಯ ರಚಿಸಿ ಹಾಡಿರುವ ಅಂತ್ಯ ಎಂಬ ಹೆಸರಿನ ಚಲನಚಿತ್ರ ಗೀತೆಯೊಂದರಲ್ಲಿ ಕೆಲ ಸಾಲುಗಳು ಗಾಂಜಾ ಸೇವನೆಗೆ ಪ್ರಚೋದನೆ ನೀಡುವಂತಿವೆ. 

ಈ ಹಾಡು ಕೇಳಿದ ಕೆಲವರು ಸಿಸಿಬಿ ಗಮನಕ್ಕೆ ತಂದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿಯ ಮಹಿಳೆ ಮತ್ತು ಮಾದಕ ನಿಗ್ರಹ ದಳದ ಎಸಿಪಿ ಮೋಹನ್ ಕುಮಾರ್, ಈ ವಿವಾದ ಕುರಿತು ತಾವು ಖುದ್ದು ಹಾಜರಾಗಿ ವಿವರಣೆ ನೀಡಬೇಕು ಎಂದು ಆ.23ರಂದು ನೋಟಿಸ್ ಜಾರಿಗೊಳಿಸಿದ್ದರು. ಚಂದನ್ ಶೆಟ್ಟಿ ವಿಚಾರಣೆ ಬಳಿಕ ಇದೀಗ ಚಿತ್ರದ ನಿರ್ದೇಶಕ ಮುತ್ತು ವಿಚಾರಣೆ ಎದುರಿಸಿದ್ದಾರೆ.