ಬೆಂಗಳೂರು(ಜ.07): ಕೇರಳದಲ್ಲಿ ಹಕ್ಕಿಜ್ವರದ ಆರ್ಭಟ ಹೆಚ್ಚಾಗುತ್ತಿರುವಂತೆಯೇ ರಾಜ್ಯದಲ್ಲೂ ಹೈ ಅಲರ್ಟ್‌ ಘೋಷಣೆ ಮಾಡಿರುವ ಪಶುಸಂಗೋಪನಾ ಇಲಾಖೆ, ರಾಜ್ಯದಲ್ಲಿ ಹಕ್ಕಿ ಜ್ವರ ಹರಡದಂತೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಪಶುಸಂಗೋಪನಾ ಇಲಾಖೆ ಸಚಿವ ಪ್ರಭು ಚವ್ಹಾಣ್‌, ನೆರೆ ರಾಜ್ಯದಿಂದ ಈ ಮಾರಕ ರೋಗ ರಾಜ್ಯಕ್ಕೆ ಹರಡದಂತೆ ಎಲ್ಲ ಜಿಲ್ಲೆಗಳಲ್ಲಿ ನಿಗಾ ವಹಿಸಬೇಕು ಎಂದು ನಿರ್ದೇಶಿಸಿರುವುದಾಗಿ ತಿಳಿಸಿದ್ದಾರೆ.

ಅಲ್ಲದೆ, ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ರಾಜ್ಯದ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಉಪ ನಿರ್ದೇಶಕರುಗಳು ರೋಗ ತಡೆಗಟ್ಟಲು ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಮಟ್ಟದ ರೋಗ ನಿಯಂತ್ರಣ ಸಮಿತಿ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿ ಹೇಳಿದ್ದಾರೆ.

ಈವರೆಗೂ ರಾಜ್ಯದಲ್ಲಿ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಆದರೆ, ಎಚ್ಚರಿಕೆ ಅಗತ್ಯ. ಎಲ್ಲಿಯೇ ರೋಗ ಲಕ್ಷಣ ಕಂಡುಬಂದರೂ ತಕ್ಷಣ ಕಾರ್ಯಪ್ರವೃತ್ತರಾಗಿ ನಿಯಂತ್ರಣಕ್ಕೆ ಮುಂದಾಗಬೇಕು. ರೋಗ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳ ಕುರಿತು ಪ್ರತಿದಿನ ವರದಿಯನ್ನು ಕೋಳಿ ರೋಗ ನಿರ್ಣಯ ಪ್ರಯೋಗಾಲಯದ ಕಚೇರಿಗೆ ಸಲ್ಲಿಸಬೇಕು. ಗಡಿ ಜಿಲ್ಲೆಗಳಲ್ಲಿನ ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಪ್ರತಿ ವಾರ ರಾರ‍ಯಂಡಮ್‌ ಆಗಿ 5 ಮಾದರಿ ಸಂಗ್ರಹಿಸಿ ಬೆಂಗಳೂರಿನ ಪ್ರಾಣಿ ಆರೋಗ್ಯ ಜೈವಿಕ ಸಂಸ್ಥೆ ಪ್ರಯೋಗಾಲಯಕ್ಕೆ ರವಾನಿಸಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.

ಪೂರೈಕೆ ಹೆಚ್ಚಳ: ಕೆಲ ತರಕಾರಿ ಬೆಲೆ ಇಳಿಕೆ!

ಅಲ್ಲದೆ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಕೋಳಿ ಸಾಕಾಣಿಕ ಕೇಂದ್ರಗಳು, ಪಕ್ಷಿಧಾಮ ಹಾಗೂ ನೀರು ಸಂಗ್ರಹಣ ಸ್ಥಳಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಕೋಳಿಗಳು, ಹಿತ್ತಲ ಕೋಳಿಗಳು, ಹಕ್ಕಿಗಳು, ಕಾಡು ಹಕ್ಕಿಗಳು, ವಲಸೆ ಹಕ್ಕಿಗಳ ಯಾವುದೇ ಅಸ್ವಾಭಾವಿಕ ಸಾವು ಕಂಡುಬಂದಲ್ಲಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಜೊತೆಗೆ, ಮೃತ ಪಕ್ಷಿಗಳ ಅವಶೇಷಗಳು ಪತ್ತೆಯಾದಲ್ಲಿ ಪ್ರಯೋಗಾಲಯಕ್ಕೆ ಕಳುಹಿಸಬೇಕು ಎಂದು ಸಂಬಂಧಪಟ್ಟವರಿಗೆ ನಿರ್ದೇಶಿಸಿರುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.