ಮುಂಬೈ(ನ.30): ಮಹಾರಾಷ್ಟ್ರದಲ್ಲಿ ಸರ್ಕಾರ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಲು ನಿರ್ಧರಿಸಿದ ಬೆನ್ನಲ್ಲೇ, ಮುಸ್ಲಿಮರಿಗೂ ಮೀಸಲಾತಿ ಬೇಕು ಎಂದು ಎಐಎಂಐಎಂ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದೆ.

ಮರಾಠರಿಗೆ ಮೀಸಲಾತಿ ನೀಡುತ್ತಿರುವುದನ್ನು ನಾವು ಪ್ರಶ್ನಿಸುವುದಿಲ್ಲ. ಆದರೆ ಮುಸ್ಲಿಮರಿಗೂ ಮೀಸಲಾತಿ ಬೇಕು ಎಂದು ಎಐಎಂಐಎಂ ಮುಖಂಡ ಇಮ್ತಿಯಾಜ್ ಜಲಿಲ್ ಒತ್ತಾಯಿಸಿದ್ದಾರೆ. ಅಲ್ಲದೇ ಈ ಕುರಿತು ಪಕ್ಷ ಹೈಕೋರ್ಟ್ ಮೆಟ್ಟಿಲೇರಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

ಇನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಸಹ ಮಹಾರಾಷ್ಟ್ರದಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಮರಾಠ ಸಮುದಾಯದಂತೆಯೇ ನಮ್ಮಲ್ಲಿಯೂ ಬಡತನವಿದೆ. ಮುಸ್ಲಿಮರು ಹಲವು ವರ್ಷಗಳಿಂದ ಕಡು ಬಡತನದಲ್ಲಿ ಬದುಕುತ್ತಿದ್ದಾರೆ ಎಂದು ಒವೈಸಿ ಅಭಿಪ್ರಾಯಪಟ್ಟಿದ್ದಾರೆ. 

ಮುಸ್ಲಿಂ ಸಮುದಾಯದ ಅಭಿವೃದ್ದಿಗಾಗಿ ವಿಶೇಷ ಮೀಸಲಾತಿ ಸೌಲಭ್ಯ ನೀಡಬೇಕು. ಮೀಸಲಾತಿಗೆ ನಮ್ಮ ಇಡೀ ಸಮುದಾಯ ಅರ್ಹವಾಗಿದೆ. ಇತರೆ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಿದಂತೆಯೇ, ನಮಗೂ ಪ್ರಾಮುಖ್ಯತೆ ಕೊಡಬೇಕೆಂದು ಒವೈಸಿ ಆಗ್ರಹಿಸಿದ್ದಾರೆ.

ನಿನ್ನೆಯಷ್ಟೆ ಮಹಾರಾಷ್ಟ್ರ ಸರ್ಕಾರ ಮರಾಠರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ.16 ಮೀಸಲಾತಿ ನೀಡುವ ಮಸೂದೆಯನ್ನು ವಿಧಾನಸಭೆಯಲ್ಲಿ ಆಂಗೀಕರಿಸಿರುವುದನ್ನು ಇಲ್ಲಿ ಸ್ಮರಿಸಬಹುದು.