ಬೆಂಗಳೂರು (ಜ. 12): ಲೋಕಸಭೆ ಚುನಾವಣೆಗೆ ಸರ್ವ ರೀತಿಯಲ್ಲೂ ಸಿದ್ಧವಾಗುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಎರಡು ದಿನಗಳ ಅರಬ್‌ ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದಾರೆ. ತಮ್ಮ ಮಾತಿನ ಮೋಡಿ ಮೂಲಕ ಅನಿವಾಸಿ ಭಾರತೀಯರ ಮನ ಸೆಳೆಯಲು ಯತ್ನಿಸಿದ ಅವರು, ‘2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎರಡು ದಿನಗಳ ಅರಬ್‌ ಪ್ರವಾಸದಲ್ಲಿ ಶುಕ್ರವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೇರುವ ಮೂಲಕ ಭಾರತವನ್ನು ಏಕತೆಯೆಡೆಗೆ ಕೊಂಡೊಯ್ಯುವುದು ಸಿದ್ಧ ಎಂದು ಹೇಳಿದರು.

ಮೊದಲ ಬಾರಿಗೆ ದುಬೈ ಪ್ರವಾಸ ಮಾಡಿರುವ ಅವರು ಇದಕ್ಕೂ ಮೊದಲು ಜಬೇಲ್‌ ಅಲಿ ಕಾರ್ಮಿಕ ಕಾಲೋನಿಗೆ ಭೇಟಿ ನೀಡಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ‘ನಾನು ನನ್ನ ಮನದ ಮಾತು (ಮನ್‌ ಕಿ ಬಾತ್‌) ಹೇಳುವ ಬದಲಾಗಿ, ನಿಮ್ಮ ಮನದ ಮಾತನ್ನು ಕೇಳಲು ಬಂದಿದ್ದೇನೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ಟೀಕಿಸಿದರು.

ಯುಎಇ ಅಭಿವೃದ್ಧಿಯಲ್ಲಿ ಕಾರ್ಮಿಕರ ಪರಿಶ್ರಮವನ್ನು ಶ್ಲಾಘಿಸಿದ ರಾಹುಲ್‌ ಗಾಂಧಿ ಅವರು, ದುಬೈನಲ್ಲಿ ನಿರ್ಮಾಣವಾಗಿರುವ ಬೃಹತ್‌ ಮೆಟ್ರೋ, ವಿಮಾನ ನಿಲ್ದಾಣಗಳು ಹಾಗೂ ಗಗನ ಚುಂಬಿ ಕಟ್ಟಡಗಳ ಹಿಂದೆ ನಿಮ್ಮ ಕೊಡುಗೆ ಅಪಾರವಾಗಿದೆ. ಈ ದೇಶದ ಅಭಿವೃದ್ಧಿಗಾಗಿ ನಿಮ್ಮ ಬೆವರು, ರಕ್ತ ಹರಿಸಿದ್ದೀರಿ. ಈ ಮೂಲಕ ಹಿಂದೂಸ್ತಾನದ ಹೆಸರು ಪ್ರಜ್ವಲಿಸುವಂತೆ ಮಾಡಿದ್ದೀರಿ ಎಂದು ಅನಿವಾಸಿ ಭಾರತೀಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತದಿಂದ ಇಷ್ಟುದೂರ ಬಂದು ದಿನಪೂರ್ತಿ ಕೆಲಸ ಮಾಡಿ, ನಿಮ್ಮ ಕುಟುಂಬಗಳಿಗೆ ಹಣ ಕಳುಹಿಸುತ್ತೀರಿ. ಇಲ್ಲಿಯ ಕಾರ್ಮಿಕರ ಸಮಸ್ಯೆಗಳ ಕುರಿತು ಕಾಂಗ್ರೆಸ್‌ ಪಕ್ಷಕ್ಕೆ ಅರಿವಿದೆ. ನಿಮಗೆ ಸಹಾಯ ಮಾಡಲು ಬಯಸುತ್ತೇವೆ. ನಾನು ನಿಮ್ಮಂತೆ ಸಾಮಾನ್ಯ ವ್ಯಕ್ತಿ. ನಿಮ್ಮ ಸಹಾಯಕ್ಕಾಗಿ ಸದಾ ಸಿದ್ಧನಿರುತ್ತೇನೆ ಎಂದು ಭರವಸೆ ನೀಡಿದರು.

ಗುರುವಾರ ರಾತ್ರಿಯೇ ದುಬೈ ತಲುಪಿದ್ದ ರಾಹುಲ್‌ ಗಾಂಧಿ, ಶುಕ್ರವಾರ ದುಬೈ ಪ್ರವಾಸ ಹಾಗೂ ಶನಿವಾರ ಅಬುಧಾಬಿ ಪ್ರವಾಸ ಕೈಗೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ದುಬೈನಲ್ಲಿ ನಡೆಸಿದ ಸಭೆಯಲ್ಲಿ ಅನಿವಾಸಿ ಭಾರತೀಯ ಉದ್ಯಮಿಗಳಾದ ಎನ್‌ಆರ್‌ಐ ಉದ್ಯಮಿ ಬಿ.ಆರ್‌. ಶೆಟ್ಟಿ, ಫಾರ್ಚೂನ್‌ ಗ್ರೂಪ್‌ ಆಫ್‌ ಹೋಟೆಲ್‌ ಮಾಲೀಕ ಪ್ರವೀಣ್‌ ಶೆಟ್ಟಿಸೇರಿದಂತೆ 200 ಉದ್ಯಮಿಗಳು ಭಾಗವಹಿಸಿದ್ದರು. ಬಳಿಕ ಯುಎಇ ಪ್ರಧಾನಮಂತ್ರಿ ಷೇಕ್‌ ಮಹಮ್ಮದ್‌ ಜತೆ ರಾಹುಲ್‌ ಮಾತುಕತೆ ನಡೆಸಿದರು.

ಸ್ಟೇಡಿಯಂ ಸಂಪೂರ್ಣ ಭರ್ತಿ:

ಈ ಬಗ್ಗೆ ಪ್ರತಿಕ್ರಿಯಿಸಿರುವ ಅನಿವಾಸಿ ಕಾಂಗ್ರೆಸ್‌ನ ಕಾರ್ಯದರ್ಶಿ ಬೆಂಗಳೂರು ಮೂಲದ ಆರತಿ ಕೃಷ್ಣನ್‌, ದುಬೈ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಜನ ಪ್ರವಾಹ ಹರಿದುಬಂದಿದೆ. ಸ್ಟೇಡಿಯಂ ಭರ್ತಿಯಾಗಿ ಹೊರ ಭಾಗದಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಇದ್ದರು. ವಿವಿಧ ಸಂಘಟನೆಗಳು ಹಾಗೂ ಅನಿವಾಸಿ ಕಾಂಗ್ರೆಸ್‌ ಪ್ರಯತ್ನ ಯಶಸ್ವಿಯಾಗಿದೆ ಎಂದು ಹೇಳಿದರು.