ಬೆಂಗಳೂರು :  ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಉಪಯೋಗ ಮಾಡಿಕೊಳ್ಳಲು ಅಗತ್ಯ ಇರುವ ಭೂ ಪರಿವರ್ತನೆ ನಿಯಮವನ್ನು ಸರಳೀಕರಣಗೊಳಿಸುವ ಕಂದಾಯ ಇಲಾಖೆಯ ಮಹತ್ವದ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಹಸಿರು ನಿಶಾನೆ ತೋರಿದೆ.

ವಿಧಾನಸೌಧದಲ್ಲಿ ಬುಧವಾರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗಾರಿಕೆಗಳಿಗೆ ಅಗತ್ಯ ಇರುವ ಭೂಮಿಯನ್ನು ಖರೀದಿಸುವ ಭೂಸ್ವಾಧೀನ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.

ಭೂ ಪರಿವರ್ತನೆ ಪ್ರಕ್ರಿಯೆಗಳಿಗೆ ಸಂಬಂಧಪಟ್ಟಂತೆ ಇತರೆ ಇಲಾಖೆಗಳಿಂದ ನಿರಾಕ್ಷೇಪಣೆ ಪಡೆದು ಒಂದು ತಿಂಗಳಲ್ಲಿ ಎಲ್ಲಾ ಕಾರ್ಯಗಳನ್ನು ಮುಗಿಸಬೇಕು. ಕಂದಾಯ ಇಲಾಖೆಯು ಈ ಅವಧಿಯಲ್ಲಿ ಯಾವುದೇ ಆಕ್ಷೇಪಣೆ ಇದ್ದರೆ ಸಲ್ಲಿಕೆ ಮಾಡಬೇಕು. ಇಲ್ಲದಿದ್ದರೆ ಯಾವುದೇ ಆಕ್ಷೇಪಣೆ ಇಲ್ಲದೆ ಒಪ್ಪಿಗೆ ನೀಡಲಾಗಿದೆ ಎಂದು ಭಾವಿಸಿ ಮುಂದಿನ ಕ್ರಮ ಜರುಗಿಸಲಾಗುತ್ತದೆ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ, ಭೂಸ್ವಾಧೀನ ಪ್ರಕ್ರಿಯೆ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿವೆ. ಪರಿಣಾಮ ಸರ್ಕಾರ ಭೂಸ್ವಾಧೀನ ಮಾಡಿ ಕೈಗಾರಿಕೆಗಳಿಗೆ ಸ್ಥಳಾವಕಾಶ ಒದಗಿಸುವುದು ಸರ್ಕಾರಕ್ಕೆ ಸವಾಲು ಆಗುತ್ತಿದೆ. ಹೀಗಾಗಿ 1964ರ ಭೂ ಕಂದಾಯ ಕಾಯ್ದೆಯ ಕಲಂ 95(2)ಕ್ಕೆ ತಿದ್ದುಪಡಿ ಮಾಡಿ ಉದ್ಯಮದಾರರು ಭೂಮಿ ಖರೀದಿಸಲು ನಿಯಮಗಳನ್ನು ಸಡಿಲಗೊಳಿಸುವ ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದರು.

ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದ ರೈತರಿಗೆ ಮತ್ತು ಉದ್ಯಮದಾರರಿಗೆ ತೊಂದರೆಯಾಗುತ್ತಿತ್ತು. ಈ ವಿಳಂಬವನ್ನು ತಪ್ಪಿಸಲು ಭೂ ಪರಿವರ್ತನೆ ಪ್ರಕ್ರಿಯೆಗೆ ಇರುವ ಕೆಲವು ಕಾನೂನು ತೊಡಕುಗಳನ್ನು ಸರಿಪಡಿಸಿ ಕಾಲಮಿತಿಯೊಳಗೆ ಏಕಗವಾಕ್ಷಿ ಯೋಜನೆಯಡಿ ಒಂದೇ ಅರ್ಜಿಯಲ್ಲಿ ಭೂ ಪರಿವರ್ತನೆ ಮಾಡಿಕೊಡುವ ನಿಯಮಾವಳಿ ಸರಳೀಕರಣಗೊಳಿಸಲು ಸಮ್ಮತಿ ನೀಡಲಾಗಿದೆ. ಇದರಿಂದ ರೈತರು ಮತ್ತು ಉದ್ದಿಮೆದಾರರು ಜಿಲ್ಲಾಧಿಕಾರಿಗಳು ಕಚೇರಿಗೆ ಪದೇ ಪದೇ ಅಲೆದಾಡುವ ಬದಲು ತ್ವರಿತವಾಗಿ ಸ್ವಾಧೀನ ಮಾಡಿಕೊಳ್ಳಬಹುದಾಗಿದೆ ಎಂದರು.

ಅರ್ಜಿದಾರರಿಂದ ಭೂ ಪರಿವರ್ತನೆ ಕೋರಿಕೆಯೊಂದಿಗೆ ಪ್ರಮಾಣ ಪತ್ರ ‘ನಮೂನೆ-ಎ’ನಲ್ಲಿ ಪಡೆದು, ವಿವಿಧ ಇಲಾಖೆ, ಪ್ರಾಧಿಕಾರಿಗಳಿಗೆ ಅವರ ಅಭಿಪ್ರಾಯಕ್ಕಾಗಿ ಏಕಕಾಲಕ್ಕೆ ಕೋರಿಕೆಗಳನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸಲಾಗುತ್ತದೆ. ಅವರಿಂದ ಒಂದು ತಿಂಗಳ ಕಾಲಮಿತಿಯಲ್ಲಿ ಅಭಿಪ್ರಾಯ ಪಡೆದುಕೊಳ್ಳಲಾಗುತ್ತದೆ. ಒಂದು ವೇಳೆ ಯಾವುದೇ ಅಭಿಪ್ರಾಯ ಬಾರದಿದ್ದಲ್ಲಿ ಭೂ ಪರಿವರ್ತನೆ ಕೋರಿಕೆ ಬಗ್ಗೆ ಅವರಿಂದ ಯಾವುದೇ ರೀತಿಯ ಆಕ್ಷೇಪಣೆ ಇಲ್ಲವೆಂದು ಪರಿಗಣಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.


ಭೂಸ್ವಾಧೀನ ಪ್ರಕ್ರಿಯೆ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿವೆ. ಪರಿಣಾಮ ಸರ್ಕಾರ ಭೂಸ್ವಾಧೀನ ಮಾಡಿ ಕೈಗಾರಿಕೆಗಳಿಗೆ ಸ್ಥಳಾವಕಾಶ ಒದಗಿಸುವುದು ಸರ್ಕಾರಕ್ಕೆ ಸವಾಲು ಆಗುತ್ತಿದೆ. ಹೀಗಾಗಿ 1964ರ ಭೂ ಕಂದಾಯ ಕಾಯ್ದೆಯ ಕಲಂ 95(2)ಕ್ಕೆ ತಿದ್ದುಪಡಿ ಮಾಡಿ ಉದ್ಯಮದಾರರು ಭೂಮಿ ಖರೀದಿಸಲು ನಿಯಮಗಳನ್ನು ಸಡಿಲಗೊಳಿಸುವ ಒಪ್ಪಿಗೆ ನೀಡಲಾಗಿದೆ.

- ಕೃಷ್ಣ ಬೈರೇಗೌಡ, ಕಾನೂನು, ಸಂಸದೀಯ ವ್ಯವಹಾರ ಸಚಿವ