ಕೋಲ್ಕತಾ[ಜೂ.06]: ಲೋಕಸಭಾ ಚುನಾವಣೆಯುದ್ದಕ್ಕೂ ಟಿಎಂಸಿ ಮತ್ತು ಬಿಜೆಪಿ ನಾಯಕರು, ಕಾರ್ಯಕರ್ತರ ನಡುವೆ ಭಾರೀ ವಾಕ್ಸಮರ, ಹಿಂಸಾಚಾರಕ್ಕೆ ಕಾರಣವಾಗಿದ್ದ ಪಶ್ಚಿಮ ಬಂಗಾಳದಲ್ಲಿ ಇದೀಗ ನೇರವಾಗಿ ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡುವ ಪೋಸ್ಟರ್‌ಗಳು ಕಾಣಿಸಿಕೊಂಡಿವೆ.

ಯಾರಾದರೂ ಬಿಜೆಪಿ ಸೇರಿದರೆ ಅಥವಾ ಬಿಜೆಪಿ ಸೇರುವಂತೆ ಯಾರ ಮೇಲಾದರೂ ಪ್ರಭಾವ ಬೀರಿದ್ದೇ ಆದಲ್ಲಿ ಅವರನ್ನು ಕತ್ತು ಸೀಳಿ ಹತ್ಯೆ ಮಾಡಲಾಗುವುದು ಎಂದು ಬೆದರಿಕೆ ಹಾಕಿರುವ ಪೋಸ್ಟರ್‌ಗಳನ್ನು ಉತ್ತರ 24 ಪರಂಗಣ ಜಿಲ್ಲೆಯ ಹಲವು ಕಡೆ ಹಾಕಲಾಗಿದೆ.

ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಮತ್ತು ಚುನಾವಣೆ ಬಳಿಕವೂ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಭಾರೀ ಹಿಂಸಾಚಾರ ನಡೆದಿತ್ತು. ಇದೀಗ ಅದರ ಮುಂದುವರೆದ ಭಾಗವಾಗಿ ಇದೀಗ ನೇರನೇರಾ ಹತ್ಯೆ ಬೆದರಿಕೆ ಹಾಕಲಾಗಿದೆ.