ವಿಧಾನ ಪರಿಷತ್‌ :  ಡಾ.ಸರೋಜಿನಿ ಮಹಿಷಿ ವರದಿ ಅನುಷ್ಠಾನದಡಿ ರಾಜ್ಯದಲ್ಲಿ 2018ರ ಸೆಪ್ಟೆಂಬರ್‌ ಅಂತ್ಯದವರೆಗಿನ ಮಾಹಿತಿ ಪ್ರಕಾರ 50ಕ್ಕಿಂತ ಹೆಚ್ಚು ಕಾರ್ಮಿಕರುಳ್ಳ 1,375 ಕೈಗಾರಿಕೆಗಳಲ್ಲಿ ಶೇ.94ರಷ್ಟುಉದ್ಯೋಗಗಳನ್ನು ಕನ್ನಡಿಗರಿಗೆ ಅಥವಾ ಸ್ಥಳೀಯರಿಗೆ ನೀಡಲಾಗಿದೆ ಎಂದು ಬೃಹತ್‌ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಜೆಡಿಎಸ್‌ ಸದಸ್ಯ ಎನ್‌.ಅಪ್ಪಾಜಿಗೌಡ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ರಾಜ್ಯಾದ್ಯಂತ ಖಾಸಗಿ ಕಾರ್ಖಾನೆಗಳಲ್ಲಿನ ಉದ್ಯೋಗದಲ್ಲಿ ಕನ್ನಡಿಗರಿಗೆ ಅಥವಾ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡುವ ಸಂಬಂಧ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರಲಾಗಿದೆ.

ಟೊಯೋಟಾದಲ್ಲಿ ಕನ್ನಡಿಗರಿಗೆ ಶೇ.98 ಉದ್ಯೋಗ

ಈ ವರದಿ ಅನುಷ್ಠಾನ ಸಂಬಂಧ ಸರ್ಕಾರ ಕ್ರೋಢೀಕರಿಸಿರುವ ಮಾಹಿತಿಯಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ 50ಕ್ಕಿಂತ ಹೆಚ್ಚು ಕಾರ್ಮಿಕರುಳ್ಳ 1,375 ಕೈಗಾರಿಕಾ ಘಟಕಗಳಲ್ಲಿರುವ 4.06 ಲಕ್ಷ ಉದ್ಯೋಗದಲ್ಲಿ 3.83 ಲಕ್ಷ ಉದ್ಯೋಗಗಳನ್ನು (ಶೇ.96) ಕನ್ನಡಿಗರಿಗೆ ನೀಡಲಾಗಿದೆ. ಉಳಿದ 22,998 ಉದ್ಯೋಗಗಳಲ್ಲಿ ಇತರರಿರುವುದು ಕಂಡು ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಪೈಕಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 50ಕ್ಕಿಂತ ಹೆಚ್ಚು ಕಾರ್ಮಿಕರುಳ್ಳ 669 ಕೈಗಾರಿಕೆಗಳಲ್ಲಿನ ಒಟ್ಟು 1.52 ಲಕ್ಷ ಕಾರ್ಮಿಕರಲ್ಲಿ 1.46 ಲಕ್ಷ ಉದ್ಯೋಗಿಗಳೂ ಕನ್ನಡಿಗರಾಗಿದ್ದಾರೆ ಎಂದು ತಿಳಿಸಲಾಗಿದೆ.