ವಿಧಾನಸೌಧ :  ಉತ್ತರ ಕರ್ನಾಟಕ ಜನರ ಬಹುಕಾಲದ ಬೇಡಿಕೆಯು ಕೊನೆಗೂ ಈಡೇರಿದ್ದು, ಆರು ಇಲಾಖೆಗಳ ವ್ಯಾಪ್ತಿಯ ಒಂಬತ್ತು ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರ ಮಾಡುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.

"

ಬುಧವಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಆದರೆ, ಸ್ಥಳಾಂತರವಾಗುವ ಕಚೇರಿಗಳ ಪೈಕಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಎಷ್ಟುಕಚೇರಿಗಳನ್ನು ಆರಂಭಿಸಬೇಕು ಎಂಬುದನ್ನು ಸಭಾಪತಿ ಹಾಗೂ ಸ್ಪೀಕರ್‌ ಜೊತೆ ಚರ್ಚಿಸಿ ನಿರ್ಧರಿಸಲು ಸಂಪುಟದಲ್ಲಿ ನಿರ್ಧರಿಸಲಾಗಿದೆ.

ಪ್ರಮುಖವಾಗಿ ಜಲಸಂಪನ್ಮೂಲ, ವಾಣಿಜ್ಯ ಮತ್ತು ಕೈಗಾರಿಕೆ, ನಗರಾಭಿವೃದ್ಧಿ, ಪ್ರವಾಸೋದ್ಯಮ, ಕಾನೂನು ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ವ್ಯಾಪ್ತಿಯ ಕಚೇರಿಗಳನ್ನು ಸ್ಥಳಾಂತರಗೊಳಿಸಲು ತೀರ್ಮಾನಿಸಲಾಗಿದೆ. ಕೃಷ್ಣಾ ಜಲಭಾಗ್ಯ ನಿಗಮ, ಕರ್ನಾಟಕ ನೀರಾವರಿ ನಿಗಮ, ರಾಜ್ಯ ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮ, ಸಕ್ಕರೆ ನಿರ್ದೇಶಕರು ಮತ್ತು ಕಬ್ಬು ಅಭಿವೃದ್ಧಿ ಆಯುಕ್ತರ ಕಚೇರಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬೆಂಗಳೂರನ್ನು ವಿಭಜಿಸಿ ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕ ಮಂಡಳಿ), ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರ ಪೈಕಿ ಒಬ್ಬ ಸದಸ್ಯರ ಕಚೇರಿ, ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತರ ಕಚೇರಿಗಳು ಕಲಬುರಗಿಗೆ ಮತ್ತು ಎರಡು ಮಾಹಿತಿ ಆಯುಕ್ತರ ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಲೋಕಾಯುಕ್ತದಲ್ಲಿನ ಎರಡು ಉಪಲೋಕಾಯುಕ್ತ ಕಚೇರಿಗಳ ಪೈಕಿ ಒಂದು ಉಪಲೋಕಾಯುಕ್ತ ಕಚೇರಿಯನ್ನು ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

ಉತ್ತರ ಕರ್ನಾಟಕಕ್ಕೆ ಕಚೇರಿ ಸ್ಥಳಾಂತರ ಮಾಡಲು ಆರ್ಥಿಕ ಇಲಾಖೆಯ ವಿರೋಧದ ನಡುವೆಯೂ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ಹೇಳಿವೆ. ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಇತರೆ ಜಿಲ್ಲೆಗಳಿಗೂ ಕೆಲವು ಕಚೇರಿಗಳನ್ನು ಸ್ಥಳಾಂತರ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಉತ್ತರ ಕರ್ನಾಟಕ ಭಾಗಕ್ಕೆ ಯಾವ ಯಾವ ಇಲಾಖೆ ಮತ್ತು ನಿಗಮಗಳನ್ನು ಸ್ಥಳಾಂತರ ಮಾಡಬೇಕು ಎಂಬುದರ ಬಗ್ಗೆ ಪರಿಶೀಲನೆ ನಡೆಸಲು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಲಾಗಿತ್ತು. ಉಪಸಮಿತಿಯು ಅಧ್ಯಯನ ನಡೆಸಿ ವರದಿಯನ್ನು ನೀಡಿದೆ. ಈ ವರದಿಯ ಆಧಾರದ ಮೇಲೆ ಯೋಜನಾ ಇಲಾಖೆಯು ಪ್ರಸ್ತಾವನೆ ಸಿದ್ಧಪಡಿಸಿ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಯಿತು. ಪ್ರಸ್ತಾವನೆಗೆ ಸಚಿವ ಸಂಪುಟ ಸಭೆ ಅಸ್ತು ಎಂದಿದೆ.

ಹಲವು ವರ್ಷಗಳ ಬೇಡಿಕೆ:

ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧಿವೇಶನ ಆರಂಭಿಸಿದ ವರ್ಷದಿಂದಲೂ ಉತ್ತರ ಕರ್ನಾಟಕ ಭಾಗಕ್ಕೆ ಪ್ರಮುಖ ಕಚೇರಿಗಳು ಸ್ಥಳಾಂತರಿಸಬೇಕು ಎಂಬ ಬೇಡಿಕೆ ಇತ್ತು. ಕಬ್ಬು ಬೆಳೆ, ಕೃಷ್ಣಾ ಯೋಜನೆ ಸೇರಿದಂತೆ ಕೆಲವು ಕಚೇರಿಗಳು ಉತ್ತರ ಕರ್ನಾಟಕದಲ್ಲಿ ಇರಬೇಕು. ಎಲ್ಲ ಕೆಲಸಗಳಿಗೆ ದೂರದ ಬೆಂಗಳೂರಿಗೆ ಹೋಗುವುದು ದುಬಾರಿಯಾಗುವುದರಿಂದ ಕೆಲವು ಕಚೇರಿಗಳನ್ನು ಸ್ಥಳಾಂತರ ಮಾಡಬೇಕೆಂಬ ಕೂಗು ಜನಪ್ರತಿನಿಧಿಗಳು, ಜನರಿಂದ ನಿರಂತರವಾಗಿ ಕೇಳಿ ಬರುತ್ತಿತ್ತು. 

ಇದಲ್ಲದೇ,ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡುವ ಸಲುವಾಗಿ ಬೆಳಗಾವಿಯನ್ನು ಎರಡನೇ ರಾಜಧಾನಿ ಮಾಡುವ ಉದ್ದೇಶ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೊಂದಿದ್ದರು. ಆದರೆ, ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಹೀಗಾಗಿ ಎರಡನೇ ರಾಜಧಾನಿ ಮಾಡುವ ಬದಲು ಅಭಿವೃದ್ಧಿಗೆ ಪೂರಕವಾಗುವಂತಹ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ಇದರ ಭಾಗವಾಗಿ ಉತ್ತರ ಕರ್ನಾಟಕಕ್ಕೆ ಪ್ರಮುಖ ಕಚೇರಿ ಸ್ಥಳಾಂತರ ಮಾಡಲು ತೀರ್ಮಾನಿಸಿದೆ.