ಸಹರನ್‌ಪುರ್(ಫೆ.09): ಉತ್ತರಾಖಂಡ್ ಮತ್ತು ಉತ್ತರಪ್ರದೇಶದ ಗಡಿ ಭಾಗದ ಎರಡು ಜಿಲ್ಲೆಗಳಲ್ಲಿ ನಡೆದ ಕಳ್ಳಭಟ್ಟಿ ದುರಂತದಲ್ಲಿ 70 ಜನ ಮೃತಪಟ್ಟಿದ್ದಾರೆ. 
 
ಉತ್ತರಾಖಂಡ್‌ದ ಹರಿದ್ವಾರ ಜಿಲ್ಲೆಯ ಬಾಲುಪುರ್‌ ಮತ್ತು ಪಕ್ಕದ ಹಳ್ಳಿಗಳಲ್ಲಿ ಕಳ್ಳಭಟ್ಟಿ ಕುಡಿದು 24 ಮಂದಿ ಮೃತಪಟ್ಟಿದ್ದರೆ, ನೆರೆಯ ಉತ್ತರಪ್ರದೇಶದ ಸಹರನ್‌ಪುರ್ ಜಿಲ್ಲೆಯಲ್ಲಿ ಕಳ್ಳಭಟ್ಟಿ ದುರಂತಕ್ಕೆ 46 ಮಂದಿ ಬಲಿಯಾಗಿದ್ದಾರೆ. 

ಕಳೆದ ಗುರುವಾರ ರಾತ್ರಿ ಬಾಲುಪುರ್‌ದಲ್ಲಿ ಇವರೆಲ್ಲ ವಿಷಪೂರಿತ ಮದ್ಯ ಸೇವಿಸಿದ್ದರು ಎನ್ನಲಾಗಿದ್ದು, ಬಳಿಕ ತೀವ್ರ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಸಹರನ್‌ಪುರ್ ಜಿಲ್ಲೆಯ ನಿವಾಸಿಯೊಬ್ಬ ಉತ್ತರಾಖಂಡದಿಂದ ಹಿಂದಿರುಗುವಾಗ 30 ಪ್ಯಾಕೆಟ್ ಸಾರಾಯಿ ತಂದು ಮಾರಾಟ ಮಾಡಿದ್ದ. ಈ ಮದ್ಯ ಕುಡಿದವರೆಲ್ಲರೂ ಮೃಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಎರಡೂ ರಾಜ್ಯಗಳು ನಿರ್ಲಕ್ಷ್ಯದ ಆರೋಪದಲ್ಲಿ ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ಸ್ಥಳೀಯ ಅಧಿಕಾರಿಗಳನ್ನು ಅಮಾನತು ಮಾಡಿದ್ದು, ಉನ್ನತ ಮಟ್ಟದ ತನಿಖೆಗೆ ಆದೇಶಿಸಿವೆ.