ಅಮೇಥಿ (ಉತ್ತರ ಪ್ರದೇಶ), [ಮೇ.26]: ನೂತನ ಬಿಜೆಪಿ ಸಂಸದೆ ಸ್ಮೃತಿ ಇರಾನಿ ಆಪ್ತ ಸುರೇಂದ್ರ ಸಿಂಗ್ ಕೊಲೆ ಪ್ರಕರಣ ಸಂಬಂಧ 7 ಮಂದಿ ಶಂಕಿತ ಆರೋಪಿಗಳನ್ನ ಉತ್ತರ ಪ್ರದೇಶದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

7 ಮಂದಿ ಶಂಕಿತ ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದ್ದು, ಕೊಲೆ ಪ್ರಕರಣದಲ್ಲಿ ಭಾಗಿಯಾಗಿರೋದು ಪ್ರಾಥಮಿಕ ತನಿಖೆಯಯಲ್ಲಿ ಮೇಲ್ನೋಟಕ್ಕೆ ಕಂಡು ಬಂದಿದೆ. ಹಾಗಾಗಿ ವಿಚಾರಣೆ ತೀವ್ರಗೊಳಿಸಿದ್ದೇವೆ ಎಂದು ಎಂದು ಡಿಜಿಪಿ ಒಪಿ ಸಿಂಗ್ ತಿಳಿಸಿದ್ದಾರೆ.

ಹತ್ಯೆಗೀಡಾದ ಕಾರ್ಯಕರ್ತನ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಸ್ಮೃತಿ ಇರಾನಿ

ನಿನ್ನೆ [ಶನಿವಾರ] ರಾತ್ರಿ ಅಮೇಥಿಯ ಬರೌಲಿಯಾ ಗ್ರಾಮದಲ್ಲಿ ಬಿಜೆಪಿ ಸಂಸದೆ ಸ್ಮೃತಿ ಇರಾನಿ ಆಪ್ತ ಸುರೇಂದ್ರ ಸಿಂಗ್​ ಅವರನ್ನು ಅಪರಿಚಿರು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆ ಬಗ್ಗೆ ಅಮೇಥಿ ಸೇರಿದಂತೆ ಉತ್ತರಪ್ರದೇಶದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. 

ಹತ್ಯೆಗೀಡಾದ ಸುರೇಂದ್ರ ಸಿಂಗ್ ಕೊಲೆಯ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಆರೋಪಗಳು ಕೇಳಿಬಂದಿದ್ದು, ಹಂತಕರನ್ನ 24 ಗಂಟೆಯೊಳಗೆ ಪತ್ತೆ ಹಚ್ಚಬೇಕು ಎಂದು ಸಿಎಂ ಯೋಗಿ ಆದಿತ್ಯನಾಥ್,  ಪೊಲೀಸ್ ಇಲಾಖೆಗೆ ಖಡಕ್ ಸೂಚನೆ ನೀಡಿದ್ದರು. ಅದರಂತೆ ಪ್ರಕರಣದ ಜಾಡು ಹಿಡಿದು ಹೊರಟಿದ್ದ ಉತ್ತರ ಪ್ರದೇಶದ ಪೊಲೀಸರು 7 ಮಂದಿ ಶಂಕಿತರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಮೃತ ಸುರೇಂದ್ರ ಸಿಂಗ್ ಅವರ ಅಂತ್ಯಕ್ರಿಯೆ ಬರೌಲಿಯಲ್ಲಿ ನಡೆಯಿತು. ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಸ್ಮೃತಿ ಇರಾನಿ ಕೂಡ ಭಾಗವಹಿಸಿ, ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟು ಅಂತ್ಯಕ್ರಿಯೆ ನಡೆಯುವ ತನಕ ಇದ್ದರು. ನಂತರ ಸುರೇಂದ್ರ ಸಿಂಗ್ ಕುಟುಂಬದ ಸದಸ್ಯರ ಜತೆ ಮಾತುಕತೆ ನಡೆಸಿ ಸಾಂತ್ವನ ಹೇಳಿದರು.