Asianet Suvarna News Asianet Suvarna News

ಶಿವಮೊಗ್ಗ ಶೇ.64.80 ಮತದಾನ: ಗೆಲುವು ಯಾರತ್ತ..?

ಬೈಂದೂರು ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟಾರೆ ಶೇ.64.80ರಷ್ಟುಮತದಾನ ನಡೆದಿದೆ.

64 percent Voting In Shimoga
Author
Bengaluru, First Published Nov 4, 2018, 7:54 AM IST

ಶಿವಮೊಗ್ಗ :  ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಶನಿವಾರ ನಡೆದ ಉಪಚುನಾವಣೆ ಮತದಾನ ಪ್ರಕ್ರಿಯೆ ಸಣ್ಣಪುಟ್ಟಘಟನೆ ಹೊರತುಪಡಿಸಿದರೆ, ಬಹುತೇಕ ಶಾಂತಿಯುತವಾಗಿ ಮುಕ್ತಾಯವಾಯಿತು. ಬೈಂದೂರು ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟಾರೆ ಶೇ.64.80ರಷ್ಟುಮತದಾನ ನಡೆದಿದೆ.

ಶಿವಮೊಗ್ಗ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳ ಒಟ್ಟು 2002 ಮತಗಟ್ಟೆಗಳಲ್ಲಿ ಮತದಾನಕ್ಕೆ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಕೆಲವು ಮತಗಟ್ಟೆಗಳಲ್ಲಿ ಬೆಳಗ್ಗೆಯಿಂದಲೇ ಮತದಾನಕ್ಕೆ ಸರದಿ ಸಾಲು ಕಂಡುಬಂದರೆ, ಕೆಲವು ಮತಗಟ್ಟೆಗಳಲ್ಲಿ ಮಂದಗತಿಯಲ್ಲಿ ಮತದಾನ ನಡೆಯಿತು.

ಎಲ್ಲ ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭಗೊಂಡಿತು. ಕೆಲ ಮತಗಟ್ಟೆಗಳಿಗೆ ಬೆಳಗ್ಗೆಯಿಂದಲೇ ಮತದಾರರು ಮತಗಟ್ಟೆಯತ್ತ ಧಾವಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಹಿಳೆಯರು, ವಯೋವೃದ್ಧರು ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದರು. ಎಲ್ಲ ಚುನಾವಣೆಯಲ್ಲಿಯೂ ನಡೆಯುವಂತೆ ಮತದಾರರ ಹೆಸರು ಯಾವ್ಯಾವುದೋ ವಾರ್ಡುಗಳಲ್ಲಿ ಇನ್ನಾವುದೋ ಮತದಾರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದರಿಂದ ಮತದಾರರು ಸಹಜವಾಗಿಯೇ ಆತಂಕ, ಗಡಿಬಿಡಿ, ಸಮಸ್ಯೆಯಲ್ಲಿ ಸಿಲುಕಿದರು. ಕೆಲವರಿಗೆ ಹೆಸರು ಸಿಕ್ಕು ಮತ ಚಲಾಯಿಸಿದರೆ, ಇನ್ನು ಕೆಲವರು ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಮತದಾನ ಮಾಡದೆ ತೆರಳಿದ ಪ್ರಸಂಗಗಳೂ ನಡೆದವು.

ಮತಯಂತ್ರದಲ್ಲಿ ದೋಷ: ಚುನಾವಣಾ ಆಯೋಗ ಯಾವುದೇ ಗೊಂದಲಕ್ಕೆ ಆಸ್ಪದ ಕೊಡದಂತೆ ಸಕಲ ರೀತಿಯ ಸಿದ್ಧತೆ ಕೈಗೊಂಡಿತ್ತಾದರೂ ಕೆಲವು ಮತಗಟ್ಟೆಗಳಲ್ಲಿ ಮತಯಂತ್ರದಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಕೆಲ ನಿಮಿಷ ಮತದಾನ ಪ್ರಕ್ರಿಯೆ ವಿಳಂಬವಾಯಿತು. ಮತದಾನ ಆರಂಭಕ್ಕೂ ಮೊದಲು ಎಲ್ಲ ಮತಗಟ್ಟೆಗಳಲ್ಲೂ ಅಣಕು ಮತದಾನ ನಡೆಸಲಾಯಿತು. ಈ ವೇಳೆ, ಕೆಲವು ಕಡೆ ಮತಯಂತ್ರದಲ್ಲಿ ದೋಷ ಕಂಡುಬಂದಿದೆ. ಕೂಡಲೇ ತಂತ್ರಜ್ಞರು ಮತಯಂತ್ರದಲ್ಲಿನ ದೋಷ ಸರಿಪಡಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.

ಶಿಕಾರಿಪುರ ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಸ್ಥಾಪಿಸಲಾದ ಮತಗಟ್ಟೆಸಂಖ್ಯೆ 132 ರಲ್ಲಿ ಮತಯಂತ್ರದಲ್ಲಿ ಮತದಾನದ ಆರಂಭದಲ್ಲಿಯೇ 10 ನಿಮಿಷ ತಾಂತ್ರಿಕ ಸಮಸ್ಯೆ ಕಾಣಿಸಿತ್ತು. ತಕ್ಷಣವೇ ಸರಿಪಡಿಸಲಾಯಿತು. ಇದೇ ಮತಗಟ್ಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮತ ಚಲಾಯಿಸಿದರು. ಸಾಗರ ತಾಲೂಕಿನ ತಾಳಗುಪ್ಪ ಹಾಗೂ ಹೊಸನಗರ ತಾಲೂಕು ನಿಲಗಳಲೆ ಗ್ರಾಮದ ಮತಗಟ್ಟೆಯಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಕೆಲಕಾಲ ಮತದಾನಕ್ಕೆ ತೊಂದರೆಯುಂಟಾಗಿತ್ತು. ದೋಷ ಸರಿಪಡಿಸಿದ ಬಳಿಕ ಮತದಾನ ಪ್ರಕ್ರಿಯೆ ಆರಂಭಗೊಂಡಿತು.

ಮತದಾನ ಬಹಿಷ್ಕಾರ: ಮೂಲ ಸೌಕರ್ಯಕ್ಕೆ ಆಗ್ರಹಿಸಿ ಶಿವಮೊಗ್ಗ ತಾಲೂಕಿನ ಹೊಳೆಬೆಳಗಲು ಮತ್ತು ದೊಡ್ಡಮಟ್ಟಿಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದ ಘಟನೆ ನಡೆದಿತ್ತು. ವಿಷಯ ತಿಳಿಯುತ್ತಿದ್ದಂತೆ ತಹಸೀಲ್ದಾರ್‌ ಸತ್ಯನಾರಾಯಣ ಸೇರಿದಂತೆ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸುವಲ್ಲಿ ಸಫರಾದರು.

ಅಭ್ಯರ್ಥಿ ಭವಿಷ್ಯ ಮತಪಟ್ಟಿಗೆಯಲ್ಲಿ

ಶಿವಮೊಗ್ಗ ಲೋಕಾಸಭೆ ಕ್ಷೇತ್ರಕ್ಕೆ ಸ್ಪರ್ಧಿಸಿರುವ ನಾಲ್ವರು ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ನಿರ್ಧರಿಸಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪಟ್ಟಿಗೆಯಲ್ಲಿ ಭದ್ರವಾಗಿದೆ.

ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿನ ಒಟ್ಟು 2002 ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸಲು 6609 ಸಿಬ್ಬಂದಿಯನ್ನು ನೇಮಕ ಮಾಡಲಾಗಿತ್ತು. ವಿಶೇಷವಾಗಿ 16 ಗುಲಾಬಿ ಬಣ್ಣದ (ಪಿಂಕ್‌) ಮತಗಟ್ಟೆಗಳನ್ನು ತೆರೆಯಲಾಗಿತ್ತು. ಇಲ್ಲಿ ಮಹಿಳಾ ಸಿಬ್ಬಂದಿಗಳೇ ಕಾರ್ಯನಿರ್ವಹಿಸಿದರು. ಮಹಿಳೆಯರೇ ಅತಿ ಹೆಚ್ಚು ಸಂಖ್ಯೆಯಲ್ಲಿ ಮತದಾರರಾಗಿರುವ ಮತಗಟ್ಟೆಗಳಲ್ಲಿ ಪಿಂಕ್‌ ಮತಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿತ್ತು.

ಭದ್ರತೆ: ಪ್ರತಿ ಮತಗಟ್ಟೆಗೂ ಪೊಲೀಸ್‌ ಹಾಗೂ ಅರೆಸೇನಾ ಪಡೆಗಳನ್ನು ಪಡೆಗಳ ಸರ್ಪಗಾವಲು ಹಾಕಲಾಗಿತ್ತು. ಅಲ್ಲದೆ, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿತ್ತು. ಮತಕೇಂದ್ರದ 200 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾತ್ತು.

ನ.6ರಂದು ಮತ ಎಣಿಕೆ: ಚುನಾವಣಾ ಫಲಿತಾಂಶ ನ.6ರಂದು ಹೊರಬೀಳಲಿದೆ. ಮತ ಎಣಿಕೆ ಕಾರ್ಯ ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ನಡೆಯಲಿದೆ. ಶನಿವಾರ ರಾತ್ರಿಯೇ ಎಲ್ಲ ಮತಯಂತ್ರಗಳು ಮತ ಎಣಿಕೆ ಕೇಂದ್ರವನ್ನು ತಲುಪಿದೆ.

ಕಾಲೇಜು ಆವರಣದಲ್ಲಿ ಭದ್ರತೆಗೆ ಸಕಲ ವ್ಯವಸ್ಥೆ ಮಾಡಲಾಗಿದೆ. ಸುತ್ತಲೂ ಬೆಳಕಿನ ಸೌಲಭ್ಯ ಕಲ್ಪಿಸಲಾಗಿದೆ. ಮತ ಎಣಿಕೆ ಕಾರ್ಯ ಮುಕ್ತಾಯ ಆಗುವವರೆಗೆ ಹಗಲು ರಾತ್ರಿ ನಿರಂತರವಾಗಿ ಪೊಲೀಸ್‌ ಹಾಗೂ ಅರೆಸೇನಾ ಪಡೆಗಳ ಸರ್ಪಗಾವಲು ಹಾಕಲಾಗಿದೆ. ನ.6ರ ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬರುವ ಸಾಧ್ಯತೆ ಇದೆ.

Follow Us:
Download App:
  • android
  • ios