ನವದೆಹಲಿ : 2019ರ ಲೋಕಸಭಾ ಚುನಾವಣೆಯಲ್ಲಿ ದಲಿತರೇ ಹೆಚ್ಚಿರುವ 100 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲು ವಿದೇಶಗಳಲ್ಲಿರುವ 100ಕ್ಕೂ ಹೆಚ್ಚು ಟೆಕ್ಕಿಗಳು ಸಕ್ರಿಯರಾಗಿ ಹೋರಾಡುತ್ತಿರುವ ವಿಷಯ ಇತ್ತೀಚೆಗೆ ಬಹಿರಂಗವಾಗಿತ್ತು. ಅದರ ಬೆನ್ನಲ್ಲೇ ಇದೀಗ ದಲಿತರ ಪರ ಹೋರಾಟಕ್ಕೆ ಭಾರತದಲ್ಲೇ ಇರುವ 50ಕ್ಕೂ ಹೆಚ್ಚು ಅತ್ಯುನ್ನತ ವಿದ್ಯಾವಂತರು, ಟೆಕ್ಕಿಗಳು ರಾಜಕೀಯ ಕಣಕ್ಕೆ ಇಳಿದಿರುವ ವಿಷಯ ಬೆಳಕಿಗೆ ಬಂದಿದೆ.

ಪ್ರತಿಷ್ಠಿತ ಐಐಟಿ (ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ)ಗಳಲ್ಲಿ ವ್ಯಾಸಂಗ ಮಾಡಿ, ದೊಡ್ಡ ದೊಡ್ಡ ಕಂಪನಿಗಳಲ್ಲಿ ಲಕ್ಷಾಂತರ ರು. ಸಂಬಳ ಪಡೆಯುತ್ತಿದ್ದ 50 ಮಂದಿ ಇದೀಗ ರಾಜಕಾರಣಕ್ಕೆ ಧುಮುಕುವ ಸಲುವಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಗಮನಸೆಳೆದಿದ್ದಾರೆ.

ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಪರವಾಗಿ ಹೋರಾಡುವ ಉದ್ದೇಶದಿಂದ ಹುದ್ದೆ ತ್ಯಾಗ ಮಾಡಿರುವ ಈ ಎಲ್ಲರೂ ಒಂದು ಗುಂಪು ಕಟ್ಟಿಕೊಂಡು ‘ಬಹುಜನ ಆಜಾದ್‌ ಪಕ್ಷ’ ಸ್ಥಾಪಿಸಲು ನಿರ್ಧರಿಸಿದ್ದಾರೆ. ಈ ಸಂಬಂಧ ಈಗಾಗಲೇ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿರುವ ಈ ಗುಂಪು, ಅನುಮತಿಗಾಗಿ ಕಾಯುತ್ತಿದೆ. ಈ ನಡುವೆ ತಳಮಟ್ಟದ ಕೆಲಸಗಳನ್ನು ಆರಂಭಿಸಿದೆ.

2019ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದು ತಮ್ಮ ಉದ್ದೇಶವಲ್ಲ. 2020ರ ಬಿಹಾರ ಚುನಾವಣೆಯೊಂದಿಗೆ ಕಣ ಪ್ರವೇಶಿಸಿ, ಅದರ ನಂತರ ಬರುವ ಲೋಕಸಭೆ ಚುನಾವಣೆಯಲ್ಲಿ ಹೋರಾಡುತ್ತೇವೆ ಎಂದು ದೆಹಲಿ ಐಐಟಿಯಲ್ಲಿ 2015ನೇ ಸಾಲಿನಲ್ಲಿ ಪದವಿ ಪಡೆದಿರುವ, ಸದ್ಯ 50 ಮಂದಿಯ ಗುಂಪನ್ನು ಮುನ್ನಡೆಸುತ್ತಿರುವ ನವೀನ್‌ ಕುಮಾರ್‌ ಎಂಬುವರು ತಿಳಿಸಿದ್ದಾರೆ.

ಈ ಗುಂಪಿನಲ್ಲಿ ಎಸ್ಸಿ, ಎಸ್ಟಿಹಾಗೂ ಒಬಿಸಿ ಸಮುದಾಯದವರೇ ಹೆಚ್ಚಿದ್ದಾರೆ. ಈ ವರ್ಗಕ್ಕೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ದೊರೆಯಬೇಕಾದಷ್ಟುಪಾಲು ಸಿಕ್ಕಿಲ್ಲ ಎಂಬ ಭಾವನೆ ಹೊಂದಿದ್ದಾರೆ.