Asianet Suvarna News Asianet Suvarna News

ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದ 47 KAS ಅಧಿಕಾರಿಗಳು ನಿರಾಳ

ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದ 47 KAS ಅಧಿಕಾರಿಗಳು ಸದ್ಯಕ್ಕೆ ನಿರಾಳವಾಗಿದ್ದಾರೆ.  

47 KAS officers Relaxed due to introduction Of Civil Service Bill
Author
Bengaluru, First Published Dec 22, 2018, 11:06 AM IST

ವಿಧಾನಸೌಧ :  ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ)ದಡಿ 1998, 1999 ಮತ್ತು 2000ನೇ ಸಾಲಿನಲ್ಲಿ ನೇಮಕಗೊಂಡು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದ 47ಕ್ಕೂ ಕೆಎಎಸ್‌ ಅಧಿಕಾರಿಗಳು ಸದ್ಯಕ್ಕೆ ನಿರಾಳವಾಗಿದ್ದಾರೆ.

2018ನೇ ಸಾಲಿನ ಕರ್ನಾಟಕ ಸಿವಿಲ್‌ ಸೇವೆಗಳ (ನೇಮಕಾತಿಯ ಸಮಯದಲ್ಲಿ ಅಭ್ಯರ್ಥಿಗಳ ಆಯ್ಕೆಯ ಕಾರ್ಯವಿಧಾನ) ವಿಧೇಯಕಕ್ಕೆ ಉಭಯ ಸದನವು ಅಂಗೀಕರಿಸಿದೆ. ಪ್ರತಿಪಕ್ಷಗಳ ವಿರೋಧದ ನಡುವೆಯೂ ವಿಧೇಯಕವನ್ನು ಧ್ವನಿ ಮತದ ಮೂಲಕ ಒಪ್ಪಿಗೆ ನೀಡಲಾಯಿತು. ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಕಾನೂನು ಮತ್ತು ಸಂದೀಯ ಸಚಿವ ಕೃಷ್ಣ ಬೈರೇಗೌಡ ವಿಧೇಯಕವನ್ನು ಪರ್ಯಾಲೋಚಿಸುವಂತೆ ಸೂಚಿಸಿದರು.

ಸುಪ್ರೀಂಕೋರ್ಟ್‌ ವಿಶೇಷ ಮೇಲ್ಮನವಿ ಅರ್ಜಿಯ ತೀರ್ಪಿನ ಹಿನ್ನೆಲೆಯಲ್ಲಿ ಕರ್ನಾಟಕ ಸಿವಿಲ್‌ ಸೇವೆಗಳ ನೇಮಕಾತಿ ತಿದ್ದುಪಡಿ ಕಾನೂನಿಗೆ ತಿದ್ದುಪಡಿ ತರಲಾಗಿದೆ. ಕೆಪಿಎಸ್‌ಸಿಯ ಮುಖ್ಯ ಸ್ಪರ್ಧಾತ್ಮಕ ಪರೀಕ್ಷೆ, ವ್ಯಕ್ತಿತ್ವ ಪರೀಕ್ಷೆ ಮತ್ತು ಅಂತಿಮ ಹಾಗೂ ಹೆಚ್ಚುವರಿ ಪಟ್ಟಿಯನ್ನು ಸಿದ್ಧಪಡಿಸುವ ವಿಧಾನದ ಉದ್ದೇಶಕ್ಕಾಗಿ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲು ಸ್ಪಷ್ಟೀಕರಣಕ್ಕೆ ಅನುಕೂಲವಾಗುವ ಅಗತ್ಯ ಹಿನ್ನೆಲೆಯಲ್ಲಿ ತಿದ್ದುಪಡಿ ತರಲಾಗಿದೆ ಎಂದು ಸಚಿವರು ಹೇಳಿದರು.

ಸಭಾಧ್ಯಕ್ಷರು ವಿಧೇಯಕವನ್ನು ಮತಕ್ಕೆ ಹಾಕಿದಾಗ ಧ್ವನಿಮತದಿಂದ ಅಂಗೀಕರಿಸಲಾಯಿತು. ಕರ್ನಾಟಕ ಸಿವಿಲ್‌ ಸೇವೆಗಳ ನೇಮಕಾತಿ ವಿಧೇಯಕ ಸರ್ಕಾರಕ್ಕೆ ಅತ್ಯಂತ ಮಹತ್ವದ್ದಾಗಿದೆ. 1998, 1999, 2000ನೇ ಸಾಲಿನಲ್ಲಿ ನೇಮಕಗೊಂಡಿರುವ 47ಕ್ಕೂ ಹೆಚ್ಚು ಮಂದಿ ಕೆಎಎಸ್‌ ಅಧಿಕಾರಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದರು. ವಿಧೇಯಕವು ಮಂಡನೆಯಾಗಿರುವ ಹಿನ್ನೆಲೆಯಲ್ಲಿ ಅವರುಗಳ ಹುದ್ದೆಯನ್ನು ಸರ್ಕಾರ ರಕ್ಷಣೆ ಮಾಡಿದಂತಾಗಿದೆ.

1998, 1999, 2000ನೇ ಸಾಲಿನಲ್ಲಿ ನಡೆದ ಪ್ರೊಬೆಷನರಿ ಹುದ್ದೆಯ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಅಕ್ರಮವಾಗಿ ನೇಮಕಗೊಂಡವರನ್ನು ವಜಾಗೊಳಿಸಿ ಎಂದು ಹೈಕೋರ್ಟ್‌ ನೀಡಿರುವ ತೀರ್ಪನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿದೆ. ಸರ್ಕಾರವು ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕು. ಇಲ್ಲವೇ, ನ್ಯಾಯಾಂಗ ನಿಂದನೆ ಎದುರಿಸಬೇಕಾಗಿತ್ತು. ಇದರಿಂದ ತಪ್ಪಿಸಿಕೊಳ್ಳಲು ಮತ್ತು ಕೆಎಎಸ್‌ ಅಧಿಕಾರಿಗಳ ರಕ್ಷಣೆಗಾಗಿ ಕರ್ನಾಟಕ ಸಿವಿಲ್‌ ಸೇವೆಗಳ ನೇಮಕಾತಿ ವಿಧೇಯಕವನ್ನು ರಚಿಸಲಾಗಿತ್ತು.

ಇದೇ ವೇಳೆ ವಿಧಾನಸಭೆಯಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ಕುಲಸಚಿವರನ್ನು ನೇಮಕ ಮಾಡುವ ಸಂಬಂಧ ರಾಜೀವ್‌ ಆರೋಗ್ಯ ವಿಶ್ವವಿದ್ಯಾಲಯದ ತಿದ್ದುಪಡಿ ವಿಧೇಯಕ 2018 ಅನ್ನು ಮಂಡನೆ ಮಾಡಲಾಯಿತು. ರೈ ತಾಂತ್ರಿಕ ವಿಶ್ವವಿದ್ಯಾಲಯ ಕೃಷಿ ಕೋರ್ಸ್‌ಗಳನ್ನು ನಡೆಸಲು ಅನುಮತಿ ನೀಡದ ಸಂಬಂಧ ತಿದ್ದುಪಡಿ ಮಾಡಿ ರೈ ತಾಂತ್ರಿಕ ವಿಶ್ವವಿದ್ಯಾಲಯ ಬೆಂಗಳೂರು (ತಿದ್ದುಪಡಿ) ವಿಧೇಯಕ -2018 ಅನ್ನು ಅಂಗೀಕರಿಸಲಾಯಿತು.

Follow Us:
Download App:
  • android
  • ios