ನವದೆಹಲಿ(ಮೇ.08): ಸಮುದ್ರ ಗಡಿ ಉಲ್ಲಂಘಿಸಿರುವ ಆರೋಪದಡಿಯಲ್ಲಿ ಪಾಕಿಸ್ತಾನವು ಭಾರತದ 34 ಮೀನುಗಾರರನ್ನು ಬಂಧಿಸಿದೆ. 10 ದಿನಗಳ ಹಿಂದಷ್ಟೇ 'ಸನ್ನಡತೆ'ಯ ಆಧಾರದಲ್ಲಿ ಪಾಕಿಸ್ತಾನವು ಭಾರತೀಯ 60 ಕೈದಿಗಳನ್ನು ಬಿಡುಗಡೆಗೊಳಿಸಿತ್ತು.

ಪಾಕಿಸ್ತಾನದ ಸಾಗರ ಸುರಕ್ಷತಾ ಸಂಸ್ಥೆ ವಕ್ತಾರ ಈ ಕುರಿತಾಗಿ ಪ್ರತಿಕ್ರಿಯಿಸುತ್ತಾ 'ಮೀನುಗಾರರನ್ನು ಮೇ 7ರಂದು ಬಂಧಿಸಿ, ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದೇವೆ. ಬಂಧಿತರನ್ನು ನ್ಯಾಯಾಲಯದೆದುರು ಹಾಜರುಪಡಿಸಲಾಗುತ್ತದೆ. ಅಲ್ಲಿನ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೊಳಪಡೆಸಬೇಕಾ ಎಂಬ ನಿರ್ಧಾರ ತೆಗೆದುಕೊಳ್ಳಲಿದ್ದಾರೆ' ಎಂದು ತಿಳಿಸಿದ್ದಾರೆ.

2019ರ ಜನವರಿ ಬಳಿಕ ಸಾಗರ ಸುರಕ್ಷತಾ ಸಂಸ್ಥೆ ಭಾರತೀಯ ಮೀನುಗಾರರನ್ನು ಬಂಧಿಸಿರುವುದು ಇದೇ ಮೊದಲು. ಜನವರಿಯಲ್ಲಿ ಗುಜರಾತ್ನ ಐವರು ಮೀನುಗಾರರನ್ನು ಬಂಧಿಸಿದ್ದ ಪಾಕ್, ಎಲ್ಲರಿಗೂ ಜೈಲು ಶಿಕ್ಷೆ ವಿಧಿಸಿತ್ತು. 

ಪುಲ್ವಾಮಾದಲ್ಲಿ ಉಗ್ರರು ನಡೆಸಿದ್ದ ಬಾಂಬ್ ದಾಳಿ ಬಳಿಕ ಉಭಯ ರಾಷ್ಟ್ರಗಳ ನಡುವೆ ಉದ್ಭವಿಸಿದ್ದ ಮನಸ್ತಾಪವನ್ನು ಶಮನಗೊಳಿಸುವ ಸಲುವಾಗಿ ಏಪ್ರಿಲ್ 29ರಂದು ಪಾಕಿಸ್ತಾನವು ಸನ್ನಡತೆಯ ಆಧಾರದಲ್ಲಿ 55 ಮಂದಿ ಭಾರತೀಯ ಮೀನುಗಾರರು ಹಾಗೂ ಐವರು ನಾಗರಿಕರನ್ನು ಬಿಡುಗಡೆಗೊಳಿಸಿತ್ತು. 

ಇಷ್ಟೇ ಅಲ್ಲದೇ ಕಳೆದ ತಿಂಗಳಿನಲ್ಲಿ ಕರಾಚಿಯ ಲಾಂಧೀ ಹಾಗೂ ಮಾಲಿರ್ ಜೈಲಿನಲ್ಲಿದ್ದ 250ಕ್ಕೂ ಅಧಿಕ ಮಂದಿ ಮೀನುಗಾರರನ್ನು ಬಿಡುಗಡೆಗೊಳಿಸಿತ್ತು. ಪಾಕಿಸ್ತಾನ ಹಾಗೂ ಭಾರತ ಸಾಮಾನ್ಯವಾಗಿ ಮೀನುಗಾರರನ್ನು ಬಂಧಿಸುತ್ತಿರುತ್ತದೆ. ಅರಬ್ಬೀ ಸಮುದ್ರದಲ್ಲಿ ಉಭಯ ದೇಶಗಳ ನಡುವೆ ಯಾವುದೇ ಸ್ಪಷ್ಟ ಗಡಿ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ. 

ಇಷ್ಟೇ ಅಲ್ಲದೇ ಮೀನುಗಾರರ ಬಳಿ ತಾವೆಲ್ಲಿದ್ದೇವೆ ಎಂದು ತಿಳಿಯಲು ತಂತ್ರಜ್ಞಾನವುಳ್ಳ ಬೋಟ್ ಗಳೂ ಇಲ್ಲ. ದೀರ್ಘ ಹಾಗೂ ನಿಧಾನಗತಿಯಲ್ಲಿ ಸಾಗುವ ಕಾನೂನು ಪ್ರಕ್ರಿಯೆಗಳಿಂದಾಗಿ ಮೀನುಗಾರರು ತಿಂಗಳಾನುಗಟ್ಟಲೇ ಜೈಲಿನ್ಲಲೇ ವಾಸಿಸಬೇಕಾಗುತ್ತದೆ.