ಕಠ್ಮಂಡು[ಜೂ.06]: ವಿಶ್ವದ ಅತ್ಯಂತ ಎತ್ತರದ ಶಿಖರ ಮೌಂಟ್‌ ಎವರೆಸ್ಟ್‌ನಲ್ಲಿ ನೇಪಾಳ ಸರ್ಕಾರ ಕೈಗೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ 11,000 ಕೆ.ಜಿ. ಕಸವನ್ನು ಸಂಗ್ರಹಿಸಲಾಗಿದೆ. ಈ ವೇಳೆ ನಾಲ್ಕು ಮೃತದೇಹ ಕೂಡ ಹೊರತೆಗೆಯಲಾಗಿದೆ.

ಮೌಂಟ್‌ ಎವರೆಸ್ಟ್‌ನಲ್ಲಿ ಏ.14ರಂದು ಆರಂಭವಾದ ಸ್ವಚ್ಛತಾ ಅಭಿಯಾನವನ್ನು ಸರ್ಕಾರ ಎರಡು ತಿಂಗಳ ಬಳಿಕ ಮುಕ್ತಾಯಗೊಳಿಸಿದೆ. ಖಾಲಿ ಆಮ್ಲಜನಕ ಸಿಲಿಂಡರ್‌ಗಳು, ಪ್ಲಾಸ್ಟಿಕ್‌ ಬಾಟಲಿಗಳು, ಕ್ಯಾನ್‌ಗಳು, ಬ್ಯಾಟರಿಗಳು, ಆಹಾರ ಪೊಟ್ಟಣಗಳು, ಅಡುಗೆ ಸಾಮಗ್ರಿಗಳು ಸೇರಿದಂತೆ ಸಾವಿರಾರು ಕೆ.ಜಿ. ಕಸದ ರಾಶಿಯನ್ನು ಎವರೆಸ್ಟ್‌ ಬೇಸ್‌ ಕ್ಯಾಂಪ್‌ನಿಂದ ಸೇನಾ ಹೆಲಿಕಾಪ್ಟರ್‌ ಮೂಲಕ ಕಾಠ್ಮಂಡುಗೆ ಸಾಗಿಸಲಾಗಿದೆ.

ಪ್ಲಾಸ್ಟಿಕ್‌ ಸೇರಿದಂತೆ ಕೆಲವು ತ್ಯಾಜ್ಯಗಳನ್ನು ಮರು ಬಳಕೆ ಮಾಡಲು ಎನ್‌ಜಿಒವೊಂದಕ್ಕೆ ನೀಡಲಾಗಿದೆ.