ಬೆಂಗಳೂರು[ಮೇ.08]: ಮನೆಯಲ್ಲಿ ಟಿವಿಯಲ್ಲಿ ಧಾರಾವಾಹಿ ನೋಡುತ್ತ ಕುಳಿತ್ತಿದ್ದ ಹನ್ನೊಂದು ವರ್ಷದ ಬಾಲಕಿಯೊಬ್ಬಳು, ಕೆಲ ಹೊತ್ತಿನ ಬಳಿಕ ದಿಢೀರನೇ ಆತ್ಮಹತ್ಯೆಗೆ ಶರಣಾಗಿರುವ ನಿಗೂಢ ಘಟನೆ ಬಾಗಲಗುಂಟೆ ಸಮೀಪದ ಮಲ್ಲಸಂದ್ರದಲ್ಲಿ ನಡೆದಿದೆ.

ಗೋಬಿ ಮಂಚೂರಿ ವ್ಯಾಪಾರಿ ರಂಗೇಗೌಡ ಮತ್ತು ಶಾರಾದ ದಂಪತಿ ಪುತ್ರಿ ಪೂಜಾ (11) ಮೃತ ದುರ್ದೈವಿ. ಮನೆಯಲ್ಲಿ ಸೋಮವಾರ ರಾತ್ರಿ ಎಂಟು ಗಂಟೆ ಸುಮಾರಿಗೆ ಪೂಜಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವ್ಯಾಪಾರ ವಹಿವಾಟು ಮುಗಿಸಿ ಮೃತಳ ಪೋಷಕರು ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗುತ್ತಿಲ್ಲ. ಟಿವಿಯಲ್ಲಿ ಪ್ರಸಾರವಾದ ಧಾರವಾಹಿಯ ದೃಶ್ಯದಿಂದ ಪ್ರಚೋದನೆಗೊಳಗಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊಸರು ತೆಗೆದುಕೊಂಡು ಮನೆಗೆ ಬಂದಳು:

ಹದಿನೈದು ವರ್ಷಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದ ಆಂಧ್ರಪ್ರದೇಶದ ಮಡಕಸಿರಾ ತಾಲೂಕಿನ ರಂಗೇಗೌಡ, ಮಲ್ಲಸಂದ್ರದಲ್ಲಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳ ಜತೆ ನೆಲೆಸಿದ್ದಾರೆ. ಮನೆ ಸಮೀಪದ ರಸ್ತೆ ಬದಿ ರಂಗೇಗೌಡ ದಂಪತಿ, ಸಂಜೆ ಹೊತ್ತಿನಲ್ಲಿ ಗೋಬಿ ಮಂಚೂರಿ ವ್ಯಾಪಾರ ಮಾಡುತ್ತಾರೆ. ಹೆತ್ತವರ ಜೊತೆ ವ್ಯಾಪಾರಕ್ಕೆ ಹೋಗಿದ್ದ ಪೂಜಾ, 7ರ ಸುಮಾರಿಗೆ ಮೊಸರು ತೆಗೆದುಕೊಂಡು ಮನೆಗೆ ಮರಳಿದ್ದಾಳೆ.

ಆನಂತರ ಮನೆಯಲ್ಲಿ ಟಿವಿಯಲ್ಲಿ ಪ್ರಸಾರವಾಗುವ ಧಾರಾವಾಹಿ ನೋಡುತ್ತಾ ಆಕೆ ಕುಳಿತಿದ್ದಾಳೆ. ಬಳಿಕ ಬಟ್ಟೆನೇತು ಹಾಕುವ ಹುಕ್ಕಿಗೆ ಟವಲ್‌ ಕಟ್ಟಿನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಾತ್ರಿ 9ಕ್ಕೆ ರಂಗೇಗೌಡ ದಂಪತಿ ಮನೆಗೆ ಮರಳಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮಗಳ ಕಂಡು ಆಘಾತಗೊಂಡಿದ್ದಾರೆ. ತಕ್ಷಣವೇ ಕುಣಿಕೆಯಿಂದ ಆಕೆಯನ್ನು ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಿ ಬಾಲಕಿ ಕೊನೆಯುಸಿರೆಳೆದಿದ್ದಾಳೆ ಎಂದು ಪೊಲೀಸರು ವಿವರಿಸಿದ್ದಾರೆ.

ಆತ್ಮಹತ್ಯೆಗೆ ಕಾರಣ ನಿಗೂಢ

ಸಂಜೆ ಆಕೆ ಮನೆಯಲ್ಲಿದ್ದಾಗ ಹೊರಗಿನ ವ್ಯಕ್ತಿಗಳು ಯಾರೂ ಬಂದಿಲ್ಲ. ರಂಗೇಗೌಡ ನೆಲೆಸಿರುವ ಮನೆಗಳು ತೀರಾ ಕಿರಿದಾಗಿದ್ದು ಸ್ವಲ್ಪ ಚೀರಾಡಿದರೂ ಅಕ್ಕಪಕ್ಕದ ಮನೆಯವರಿಗೆ ಕೇಳಿಸುತ್ತದೆ. ಇನ್ನೂ ಪೂಜಾ ಅಂಗಡಿಯಿಂದ ಸಂಜೆ ಮನೆಗೆ ಬಂದಾಗ ಅವರ ಪಕ್ಕದ ಮನೆ ಮಹಿಳೆಯ, ಮನೆ ಹೊರಗೆ ಬಟ್ಟೆಒಗೆಯುತ್ತಿದ್ದರು. ಮನೆಯಲ್ಲಿ ಟಿವಿ ನೋಡುತ್ತ ಕುಳಿತಿದ್ದ ಪೂಜಾಳನ್ನು ರಾತ್ರಿ ಎಂಟು ಗಂಟೆಯಲ್ಲಿ ಆ ಮಹಿಳೆ ನೋಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಆತ್ಮಹತ್ಯೆ ಎಂದೂ ದೃಢಪಡಿಸಿದ್ದಾರೆ. ಹೀಗಾಗಿ ಆತ್ಮಹತ್ಯೆಗೆ ಕಾರಣವೇ ನಿಗೂಢವಾಗಿದೆ. ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಾಪಾರ ವಹಿವಾಟು ಮುಗಿಸಿ ಮನೆಗೆ ಮೃತಳ ಪೋಷಕರು ಮನೆಗೆ ಬಂದಾಗಲೂ ಟಿವಿ ಚಾಲನೆಯಲ್ಲಿತ್ತು. ಹೀಗಾಗಿ ಟಿವಿ ಧಾರಾವಾಹಿ ದೃಶ್ಯ ಬಾಲಕಿ ಮೇಲೆ ಪ್ರಭಾವ ಬೀರಿರುವ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.