ಹೈದರಾಬಾದ್[ಡಿ.06]: ಹೈದರಾಬಾದ್ ಪಶುವೈದ್ಯೆಯ ಮೇಲಿನ ರೇಪ್ ಹಾಗೂ ಕೊಲೆ ಪ್ರಕರಣದ ಆರೋಪಿಗಳು ಮುಂಜಾನೆ ನಡೆದ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದಾರೆ. ಈ ಪೊಲೀಸ್ ಎನ್‌ಕೌಂಟರ್ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಜನರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ನೀಡಲಾರಂಭಿಸಿದ್ದಾರೆ. ಹೀಗಿರುವಾಗ ಬಾಲಿವುಡ್ ನಟ ವಿವೇಕ್ ಒಬೆರಾಯ್ ಕೂಡಾ ಟ್ವೀಟ್ ಮೂಲಕ ಈ ಸಂಬಂಧ ಪ್ರತಿಕ್ರಿಯಿಸಿದ್ದಾರೆ. ಸದ್ಯ ಅವರ ಟ್ವೀಟ್ ಭಾರೀ ವೈರಲ್ ಆಗಿದೆ.

ತಮ್ಮ ಟ್ವಿಟರ್ ಖಾತೆಯಲ್ಲಿ ಎನ್‌ಕೌಂಟರ್ ಕುರಿತು ಬರೆದುಕೊಂಡಿರುವ ಒಬೆರಾಯ್ 'ಅದೇ ಸ್ಥಳ, ಅದೇ ಸಮಯ, ಬೇಟೆಗಾರರೇ ಬೇಟೆಯಾದ್ರು. ಇದು ಸರಿಯಾದ ನ್ಯಾಯ. ಇದರಿಂದಾಗಿ ಇಂತಹ ರಾಕ್ಷಸರು ಇನ್ಮುಂದೆ ಇಂತಹ ಘೋರ ಕೃತ್ಯವೆಸಗಲು ಭಯಪಡುತ್ತಾರೆ. ಹೆಣ್ಮಕ್ಕಳನ್ನು ಅತ್ಯಾಚಾರ ಹಾಗೂ ಕೊಲೆ ಮಾಡುವ ಮುನ್ನ ನೂರು ಬಾರಿಯಾದರೂ ಯೋಚಿಸುತ್ತಾರೆ' ಎಂದು ಬರೆದಿದ್ದಾರೆ. 

ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿರುವ ವಿವೇಕ್ ಒಬೆರಾಯ್ 'ಸರಿಯಾದ ನ್ಯಾಯ ಕೊಟ್ಟ ತೆಲಂಗಾಣ ಮುಖ್ಯಮಂತ್ರಿ, ಸೈಬರಾಬಾದ್ ಪೊಲೀಸ್ ಅದರಲ್ಲೂ ವಿಶೇಷವಾಗಿ ವಿ. ಸಿ. ಸಜ್ಜನರ್ ರವರಿಗೆ ಅಭಿನಂದನೆಗಳು. ಕಾನೂನು ಉಲ್ಲಂಘಿಸಿ, ಸಮಾಜದ ವ್ಯವಸ್ಥೆ ಹಿಂದೆ ಅಡಗಿ ರಕ್ಷಣೆ ಪಡೆಯುವ ಎಲ್ಲಾ ರಾಕ್ಷಸರಿಗೂ ಇದು ಬಹುದೊಡ್ಡ ಸಂದೇಶ ರವಾನಿಸಿದೆ. ಇನ್ಮುಂದೆ ಇಂತಹ ಎಲ್ಲಾ ರಾಕ್ಷಸರು ಭಯದಿಂದ ಕಂಪಿಸುತ್ತಾರೆ ಎಂಬ ನಂಬಿಕೆ ನನಗಿದೆ' ಎಂದಿದ್ದಾರೆ.

ಹೈದರಾಬಾದ್ ಎನ್‌ಕೌಂಟರ್: ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು

ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಿದ ಬಳಿಕ ಪ್ರಕರಣದ ನಾಲ್ವರೂ ಆರೋಪಿಗಳನ್ನು ಪೊಲೀಸರು ಮಹಜರು ನಡೆಸಲು ಶುಕ್ರವಾರ ಬೆಳಗ್ಗಿನ ಜಾವ ಪ್ರಕರಣ ನಡೆದ ಸ್ಥಳಕ್ಕೆ ಕರೆ ತಂದಿದ್ದರು. ಈ ವೇಳೆ ಆರೋಪಿಗಳ ಪೊಲೀಸರ ಕೈಯ್ಯಲ್ಲಿದ್ದ ಪಿಸ್ತೂಲ್ ಕಸಿದು ಪರಾರಿಯಾಗಲು ಯತ್ನಿಸಿದ್ದರು. 'ಒಂದು ವೇಳೆ ಈ ಆರೋಪಿಗಳು ತಪ್ಪಿಸಿಕೊಂಡಿದ್ದರೆ ಬಹುದೊಡ್ಡ ಅಪಾಯ ಎದುರಾಗುತ್ತಿತ್ತು. ಹೀಗಾಗಿ ಬೇರೆ ವಿಧಿ ಇಲ್ಲದೇ ನಾವು ಫೈರಿಂಗ್ ನಡೆಸಿದೆವು. ಈ ಎನ್‌ಕೌಂಟರ್‌ನಲ್ಲಿ ಆರೋಪಿಗಳು ಬಲಿಯಾದರು' ಎಂದಿದ್ದಾರೆ.

'ಪೊಲೀಸರಿಗೆ ಗನ್ ಕೊಟ್ಟದ್ದು ಶೋಕಿಗಾಗಿ ಅಲ್ಲ'