Asianet Suvarna News Asianet Suvarna News

'ದಬಾಂಗ್‌ 3’ ಕನ್ನಡಿಗರ ಸಿನಿಮಾ: ಸುದೀಪ್ ನನ್ನ ಸೋದರ, ಅವರೇ ಹೀರೋ'

‘ದಬಾಂಗ್‌ 3’ ಸುದೀಪ್‌ ಸಿನಿಮಾ: ಸಲ್ಲು| ಕನ್ನಡದಲ್ಲೂ ಬಿಡುಗಡೆಯಾಗುತ್ತಿರುವ ಸಿನಿಮಾ ಪ್ರಚಾರಕ್ಕೆ ಸಲ್ಮಾನ್‌ ಬೆಂಗಳೂರಿಗೆ| ಸಲ್ಲು, ಕಿಚ್ಚ, ಸೋನಾಕ್ಷಿ, ಪ್ರಭುದೇವ ಸುದ್ದಿಗೋಷ್ಠಿ

Dabang 3 Is A Movie Of kannadigas Sudeep Is My Brother He Is The Hero Says Bollywood Actor Salman Khan
Author
Bangalore, First Published Dec 18, 2019, 11:29 AM IST

ಬೆಂಗಳೂರು[ಡಿ.18]: ಕಿಚ್ಚ ಸುದೀಪ್‌ ನನ್ನ ಸಹೋದರ. ಅವರು ನಿಜವಾದ ಸೂಪರ್‌ ಸ್ಟಾರ್‌. ‘ದಬಾಂಗ್‌ 3’ ಅನ್ನೋದು ನನ್ನ ಸಿನಿಮಾ ಅಲ್ಲ, ಇದು ಸುದೀಪ್‌ ಸಿನಿಮಾ. ಜತೆಗೆ ಕನ್ನಡಿಗರ ಸಿನಿಮಾ..!

- ಸುದೀಪ್‌ ಅವರನ್ನು ಹೀಗೆ ಮುಕ್ತ ಕಂಠದಿಂದ ಬಣ್ಣಿಸಿ, ‘ದಬಾಂಗ್‌ 3’ ಕನ್ನಡಿಗರ ಸಿನಿಮಾ ಎಂದು ಹೇಳಿದ್ದು ಆ ಚಿತ್ರದ ನಾಯಕ ನಟ ಸಲ್ಮಾನ್‌ ಖಾನ್‌. ಅದು ‘ದಬಾಂಗ್‌ 3’ ಚಿತ್ರದ ಪ್ರಚಾರ ಕಾರ್ಯಕ್ರಮದ ಸಂದರ್ಭ.

ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ನಿರ್ಮಿಸಿ, ನಾಯಕ ನಟರಾಗಿ ಅಭಿನಯಿಸಿರುವ ಹಿಂದಿ ಚಿತ್ರ ‘ದಬಾಂಗ್‌ 3’ ಡಿಸೆಂಬರ್‌ 20ರಂದು ಹಿಂದಿ, ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಅದರ ಪ್ರಚಾರಕ್ಕಾಗಿ ಮಂಗಳವಾರ ‘ದಬಾಂಗ್‌ 3’ ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು. ನಟ ಸಲ್ಮಾನ್‌ ಖಾನ್‌, ನಾಯಕಿಯರಾದ ಸೋನಾಕ್ಷಿ ಸಿನ್ಹಾ, ಸಾಯಿ ಮಂಜ್ರೇಕರ್‌, ನಿರ್ದೇಶಕ ಪ್ರಭುದೇವ್‌ ಜತೆಗೆ ಆ ಚಿತ್ರದ ಪ್ರಮುಖ ಪಾತ್ರಧಾರಿಯೂ ಆದ ಕಿಚ್ಚ ಸುದೀಪ್‌ ಹಾಜರಿದ್ದರು. ನಗರದ ಪಂಚತಾರಾ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ಮಾತನಾಡಿತು.

‘ಬಹು ದಿನಗಳ ನಂತರ ಬೆಂಗಳೂರಿಗೆ ಬಂದಿದ್ದೇನೆ. ಇದಕ್ಕೆ ಕಾರಣ ಸುದೀಪ್‌. ಅವರ ಪ್ರೇರಣೆಯಿಂದಲೇ ‘ದಬಾಂಗ್‌ 3’ ಕನ್ನಡಕ್ಕೆ ಬರುತ್ತಿದೆ. ಸುದೀಪ್‌ ಅವರು ನನ್ನ ಸಹೋದರ. ಅವರು ನಿಜವಾದ ಸೂಪರ್‌ ಸ್ಟಾರ್‌. ಇದು ಸುದೀಪ್‌ ಸಿನಿಮಾ. ಹಾಗೆಯೇ ಕನ್ನಡಿಗರ ಸಿನಿಮಾ’ ಎಂದ ಸಲ್ಮಾನ್‌ ಖಾನ್‌, ‘ತಾರೀಖು ನಂದು, ಟೈಮು ನಂದು’ ಎಂದು ಕನ್ನಡದಲ್ಲೇ ಹೇಳಿದರು. ‘ಕನ್ನಡ ನಂಗೂ ಬರುತ್ತೆ’ ಎಂದು ಭಾರಿ ಸಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡರು.

ಚಿತ್ರದ ನಾಯಕಿ ಸೋನಾಕ್ಷಿ ಸಿನ್ಹಾ ಮಾತನಾಡಿ, ಬೆಂಗಳೂರು ಅಂದ್ರೆ ನನಗೆ ತುಂಬಾ ಪ್ರೀತಿ. 9 ಬಾರಿ ನಾನಿಲ್ಲಿಗೆ ಬಂದಿದ್ದೇನೆ. ಸಾಕಷ್ಟುಫ್ರೆಂಡ್ಸ್‌ ಇಲ್ಲಿದ್ದಾರೆ ಎಂದರು. ಸಾಯಿ ಮಂಜ್ರೇಕರ್‌, ನಟ, ನೃತ್ಯ ನಿರ್ದೇಶಕ ಪ್ರಭುದೇವ್‌ ಮಾತನಾಡಿದರು.

ಬರೀ ಪ್ರಚಾರಕ್ಕಾಗಿ ಸಲ್ಲು ಬಂದಿಲ್ಲ

ಸಲ್ಮಾನ್‌ ಖಾನ್‌ ಇಲ್ಲಿಗೆ ಬಂದಿದ್ದು ಬರೀ ಚಿತ್ರದ ಪ್ರಚಾರಕ್ಕಾಗಿ ಅಲ್ಲ. ಕನ್ನಡ ಸಿನಿಮಾ ಮತ್ತು ಕನ್ನಡದ ಮೇಲಿನ ಪ್ರೀತಿಗಾಗಿ ಬಂದಿದ್ದಾರೆ. ಅವರೇ ಆಸಕ್ತಿ ವಹಿಸಿ ‘ದಬಾಂಗ್‌ 3’ ಚಿತ್ರವನ್ನು ಕನ್ನಡಕ್ಕೆ ತರುತ್ತಿದ್ದಾರೆ. ಅವರೇ ಆಸಕ್ತಿ ವಹಿಸಿ, ಗೊತ್ತಿಲ್ಲದ ಭಾಷೆಯನ್ನು ಪ್ರೀತಿಸಿ ಕನ್ನಡಕ್ಕೆ ಡಬ್ಬಿಂಗ್‌ ಮಾಡಿದ್ದಾರೆ.

- ಕಿಚ್ಚ ಸುದೀಪ್‌

ಸಲ್ಮಾನ್‌ ಖಾನ್‌- ವಿಜಯೇಂದ್ರ ಭೇಟಿ

‘ದಬಾಂಗ್‌ 3’ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಹಾಗೂ ಬಿಜೆಪಿ ಮುಖಂಡ ವಿಜಯೇಂದ್ರ ಭೇಟಿ ಮಾಡಿದರು. ಹೋಟೆಲ್‌ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಗೂ ಮುನ್ನ ಸಲ್ಮಾನ್‌ ಅವರನ್ನು ವಿಜಯೇಂದ್ರ ಸ್ವಾಗತಿಸಿದರು. ನಂತರ ಸುದ್ದಿಗೋಷ್ಠಿಗೂ ಮುನ್ನವೇ ವಿಜಯೇಂದ್ರ ಅಲ್ಲಿಂದ ತೆರಳಿದರು. ಚಿತ್ರತಂಡದ ಸದಸ್ಯರೊಬ್ಬರು, ‘ಇದೊಂದು ಸೌಹಾರ್ದಯುತ ಭೇಟಿ ಮಾತ್ರ. ಸಲ್ಮಾನ್‌ ಖಾನ್‌ ಸಿನಿಮಾಗಳಂದ್ರೆ ವಿಜಯೇಂದ್ರ ಅವರಿಗೆ ಇಷ್ಟವಂತೆ. ಆ ಕುತೂಹಲಕ್ಕೆ ಅವರು ಬಂದಿದ್ದರು’ ಎಂದು ಹೇಳಿದರು.

"

 

ಕಿಕ್ಕಿರಿದ ಸುದ್ದಿಗೋಷ್ಠಿ, ಮೂರು ಗಂಟೆ ಲೇಟು

ಅದು ಕಿಕ್ಕಿರಿದ ಸುದ್ದಿಗೋಷ್ಠಿ. ಮಾಧ್ಯಮದವರ ಸಂಖ್ಯೆ ಅಲ್ಲಿ ಅಪಾ"ವಾಗಿತ್ತು. ವರದಿ ಮಾಡಲು ಬಂದಿದ್ದಕ್ಕಿಂತ ಸಲ್ಮಾನ್‌ ಖಾನ್‌ ಅವರನ್ನು ನೋಡಿ ಖುಷಿ ಪಡುವುದಕ್ಕಾಗಿಯೇ ಅಲ್ಲಿ ಸಾಕಷ್ಟುಜನ ಅಲ್ಲಿ ಸೇರಿದ್ದರು. ಸಂಜೆ ನಾಲ್ಕು ಗಂಟೆಗೆ ನಿಗದಿ ಆಗಿದ್ದ ಸುದ್ದಿಗೋಷ್ಠಿ ಅದು. ಹೆಚ್ಚು ಕಡಿಮೆ ಎರಡೂವರೆ ತಾಸುಗಳಷ್ಟುತಡವಾಗಿ ಅಲ್ಲಿಗೆ ಬಂದರು ಸಲ್ಮಾನ್‌ ಖಾನ್‌, ಸುದೀಪ್‌, ಸೋನಾಕ್ಷಿ ಸಿನ್ಹಾ, ಪ್ರಭುದೇವ್‌, ಸಾಯಿ ಮಂಜ್ರೇಕರ್‌. ಅವರ ಆಗಮನದ ಕಾರಣಕ್ಕೆ ಸಾಕಷ್ಟುಭದ್ರತೆ ಒದಗಿಸಲಾಯಿತು. ಖಾಸಗಿ ಸೆಕ್ಯುರಿಟಿ ಜತೆಗೆ ಪೊಲೀಸ್‌ ನೆರವನ್ನು ಪಡೆಯಲಾಗಿತ್ತು. ಭದ್ರತೆಯಲ್ಲೇ ಸುದ್ದಿಗೋಷ್ಠಿಗೆ ಚಿತ್ರ ತಂಡ ಹಾಜರಾದಾಗ, ಸಲ್ಮಾನ್‌ ಖಾನ್‌ ಅವರಿದ್ದ ವಿಮಾನ ಲ್ಯಾಂಡಿಗ್‌ ಆಗುವುದಕ್ಕೆ ತಡವಾಗಿದ್ದರಿಂದ ಇಲ್ಲಿಗೆ ಬರುವುದಕ್ಕೆ ತಡವಾಯಿತು ಎಂದು ಸ್ಪಷ್ಟನೆ ನೀಡಿದರು.

Follow Us:
Download App:
  • android
  • ios