Asianet Suvarna News Asianet Suvarna News

Vedha Movie Review; 'ವೇದ' ಸಿನಿಮಾದಲ್ಲಿ ಸ್ತ್ರಿ ಶಕ್ತಿಯ ದರ್ಶನ

ಇತ್ತೀಚೆಗಿನ ಯಾವುದೇ ಸಿನಿಮಾಗಳಲ್ಲಿ ಸ್ತ್ರೀ ಪಾತ್ರಧಾರಿಗಳಿಗೆ ಮಾಸ್ ಇಮೇಜ್ ಕೊಡುವಂತಹ ದೃಶ್ಯಗಳಿದ್ದದ್ದು ಸಿಕ್ಕಾಪಟ್ಟೆ ಕಡಿಮೆ. ಆದರೆ  "ವೇದ" ದಲ್ಲಿ ಹಾಗಲ್ಲ.

 

shivaraj kumar starrer vedha movie review on asianet Kannada news sgk
Author
First Published Dec 30, 2022, 11:43 AM IST

ವಿಮರ್ಶೆ: ಸಂತೋಷ್‌ ಕುಮಾರ ಎಲ್.ಎಂ.

ಎಲ್ಲರೂ ಇದೇ ವಿಷಯವನ್ನು ಬರೆಯುವಾಗ ಏಕಿರಬಹುದು ಎಂಬ ಪ್ರಶ್ನೆ ನನಗೆ ಸಹಜವಾಗಿ ಬರುತ್ತಿತ್ತು. ಆದರೆ ಸಿನಿಮಾ ನೋಡಿದ ಮೇಲೆ ನನಗೂ ಅದೇ ಅನ್ನಿಸಿದ್ದರಲ್ಲಿ ಅಚ್ಚರಿಯೇನಿಲ್ಲ. ಇತ್ತೀಚೆಗಿನ ಯಾವುದೇ ಸಿನಿಮಾಗಳಲ್ಲಿ ಸ್ತ್ರೀ ಪಾತ್ರಧಾರಿಗಳಿಗೆ ಮಾಸ್ ಇಮೇಜ್ ಕೊಡುವಂತಹ ದೃಶ್ಯಗಳಿದ್ದದ್ದು ಸಿಕ್ಕಾಪಟ್ಟೆ ಕಡಿಮೆ. ಬಹುತೇಕ ಸಿನಿಮಾಗಳಲ್ಲಿ ಹೀರೋ ಬಂದಿಲ್ಲ ಎಂದರೆ ಆ ದೃಶ್ಯ ಬೋರ್ ಹೊಡೆಸಲು ಶುರುವಾಗುತ್ತದೆ. ಅದಕ್ಕೆ ಕಾರಣ ಅಲ್ಲಿ ಬೇಕೆಂದೇ ಬೇರೆ ಪಾತ್ರಗಳನ್ನು ಅಷ್ಟು ಆಕರ್ಷಕವಾಗಿ ತೋರಿಸುವುದಿಲ್ಲ. "ವೇದ" ದಲ್ಲಿ ಹಾಗಲ್ಲ. ಸಿನಿಮಾ ಶಿವಣ್ಣನದಾದರೂ ಅಲ್ಲಿ ಅವರೊಬ್ಬರನ್ನೇ ಹೀರೋ ಅಂತ ಬಿಂಬಿಸಲು ಬಳಸಿಕೊಂಡಿಲ್ಲ. ಸಿನಿಮಾ ನಾಯಕನಾದರೂ ಎಲ್ಲರಿಗೂ ಅವಕಾಶ ಸಿಗುವಂತೆ ನೋಡಿಕೊಂಡಿದ್ದಾರೆ.

ಸೂಕ್ಷ್ಮವಾಗಿ ಗಮನಿಸಿದರೆ ಈ ಸಿನಿಮಾದಲ್ಲಿ ಅನೇಕ ಸ್ತ್ರೀ ಪಾತ್ರಗಳಿವೆ. ಇಂತಹ ಕಥೆಯಲ್ಲೂ ಯಾವ ಸ್ತ್ರೀ ಪಾತ್ರವೂ ತನ್ನನ್ನು "ಕಾಪಾಡಿ" ಅಂತ ಅಂಗಲಾಚುವುದಿಲ್ಲ. ಅವುಗಳ ಹಾವಭಾವ, ಮಾತು ಎಲ್ಲವೂ "ರಫ್ & ಟಫ್". ಆದರೂ ಅಲ್ಲಿ ಅನ್ಯಾಯ ನಡೆಯಲೇಬಾರದೆಂದಿಲ್ಲ. ನಡೆಯುತ್ತದೆ. ಅದರ ಸೇಡು ತೀರಿಸಿಕೊಳ್ಳಲು ಸ್ತ್ರೀ ಪಾತ್ರಗಳೇ ಎದ್ದು ನಿಲ್ಲುತ್ತವೆ. ಅದಕ್ಕೆ ಒತ್ತಾಸೆಯಾಗಿ ನಿಲ್ಲುವುದು ಮಾತ್ರ "ವೇದ". ಅಂದರೆ ಸ್ತ್ರೀ ಪಾತ್ರವೊಂದು ಆರ್ಭಟಿಸುತ್ತ ಮಚ್ಚೆತ್ತಿ ದುಷ್ಟರನ್ನು ಬಲಿ ಹಾಕುವ ಒಂದು ಶಾಟ್ ಕೂಡ ಮಾಸ್ ಆಗಿಯೇ ಚಿತ್ರಿಸಲಾಗಿದೆ. ಇನ್ನೇನು ದುಷ್ಟರ ಕೂಟ ಮೇಲುಗೈ ಸಾಧಿಸುತ್ತದೆ ಅನ್ನುವಾಗ ಮಾತ್ರ "ವೇದ"ನ ಪವರ್‌ಫುಲ್ ಎಂಟ್ರಿ.

ಎಲ್ಲ ಸಿನಿಮಾಗಳಲ್ಲೂ ಪೋಷಕ ಪಾತ್ರಗಳು ಹೀರೋಗೆ ಸಪೋರ್ಟ್ ಮಾಡಿದರೆ, "ವೇದ" ಸಿನಿಮಾದಲ್ಲಿ ಮಾತ್ರ ಪೋಷಕ ಪಾತ್ರಗಳಿಗೆ ಸಪೋರ್ಟ್ ಮಾಡೋಕೆ ನಾಯಕನಿರುತ್ತಾನೆ. ಅದೇ ವಿಶೇಷ. ಹೀಗೆ 125 ನೇ ಮೈಲಿಗಲ್ಲಿನ ಚಿತ್ರವೊಂದರಲ್ಲಿ ಎಲ್ಲರನ್ನೂ ಒಳಗೊಂಡು ತನ್ನೂ ಒಂದು ಪಾತ್ರವಾಗಿ ನಟಿಸಿರುವುದು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರ ದೊಡ್ಡತನ.

ಹೀಗೆ ಕಥೆಗೆ ತಕ್ಕ ಹಾಗೆ ಬದಲಾಗುವ, ಅದಕ್ಕೆ ಬೇಕಾದ ಎನರ್ಜಿ ತುಂಬುವ, ಮಾಸು-ಕ್ಲಾಸು ಅನ್ನುವ ಬೇಧ ತೋರದೆ ಎಲ್ಲ ಪಾತ್ರಗಳಿಗೂ ಸೈ ಅನ್ನಿಸಿಕೊಳ್ಳುವ, ಇಡೀ ಸಿನಿಮಾವನ್ನು ತಾನೇ ಹೊತ್ತೊಯ್ಯಬಲ್ಲ ಸಾಮರ್ಥ್ಯವಿದ್ದರೂ ಇತರೆ ಪಾತ್ರಗಳಿಗೂ ಸ್ಪೇಸ್ ಕೊಡಲು ಆಲೋಚಿಸದ ಶಿವಣ್ಣ ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗಕ್ಕೆ ಪರ್ಫೆಕ್ಟ್ ಪ್ಯಾಕೇಜ್. ಆದರೆ ಆ ಪ್ಯಾಕೇಜ್ ಅನ್ನು ಬಳಸಿಕೊಂಡು ಅದ್ಭುತ ಸಿನಿಮಾಗಳನ್ನು ಸೃಷ್ಟಿಸಬಲ್ಲ, ಅಂತಹ ಸ್ಕ್ರಿಪ್ಟುಗಳನ್ನು ಬರೆಯುವ ನಿರ್ದೇಶಕರು ಬೇಕಿದ್ದಾರೆ. ಹರ್ಷ ಅವರಿಗೆ ಒಳ್ಳೆಯ ಕಮರ್ಷಿಯಲ್ ಸಬ್ಜೆಕ್ಟ್ ಇರುವ ಸಿನಿಮಾಗಳನ್ನು ತೆಗೆಯುವ ಸಾಮರ್ಥ್ಯವಿದೆ. ಆದರೆ ಕಥೆಯ ವಿಷಯಕ್ಕೆ ಬಂದಾಗ ಅವರು ಇತರೆ ಪ್ರತಿಭಾವಂತ ಕಥೆಗಾರರನ್ನು ಅವಲಂಬಿಸುವುದು ಒಳ್ಳೆಯದು.

ಈ ಸಿನಿಮಾದಲ್ಲಿ ಉಮಾಶ್ರೀ, ಗಾನವಿ, ಅಧಿತಿ ಸಾಗರ್, ಶ್ವೇತಾ ಚೆಂಗಪ್ಪ, ವೀಣಾ ಪೊನ್ನಪ್ಪ ಎಲ್ಲ ಪಾತ್ರಗಳಿಗೂ ಮಹತ್ವ ನೀಡಲಾಗಿದೆ. ಯಾವುವೂ ಹಾಗೆ ಬಂದು ಹೀಗೆ ಹೋಗುವಂಥವುಗಳಲ್ಲ. ಗಾನವಿ & ಉಮಾಶ್ರೀ ಪಾತ್ರಗಳಂತೂ ಶಿವಣ್ಣನಿಗೆ ಸಮನಾಗಿ ನಿಂತು ಎದುರುತ್ತರೆ ಕೊಡುತ್ತಲೇ ಮಾತನಾಡುವ ಪಾತ್ರಗಳು. ಸಿಕ್ಕಾಪಟ್ಟೆ ಗತ್ತಿನ ಹಳ್ಳಿ ಹೆಣ್ಣುಮಗಳ ಪಾತ್ರವಿರುವ ಗಾನವಿಯ ಹಾವಭಾವ, ಡೈಲಾಗ್ ಡೆಲಿವರಿ ತುಂಬಾ ಇಷ್ಟವಾಯ್ತು. ರಘು ನಿಡುವಳ್ಳಿ ತಮ್ಮ ಸಂಭಾಷಣೆಯಲ್ಲಿ ಬಳಸಿಕೊಂಡಿರುವ ಗ್ರಾಮ್ಯ ಸೊಗಡು ಚೆನ್ನಾಗಿದೆ. ಅದನ್ನು ಗಾನವಿ ಚೆನ್ನಾಗಿ ನಮಗೆ ದಾಟಿಸುತ್ತಾರೆ. ಈ ಸಿನಿಮಾದಲ್ಲಿ ರಾಘು ಶಿವಮೊಗ್ಗ ಅವರಿಗೂ ಬಹುಮುಖ್ಯ ಪಾತ್ರವೊಂದನ್ನು ನೀಡಲಾಗಿದೆ.

ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾದಲ್ಲಿ "ಯಾರಲ್ಲಿ ಸೌಂಡು ಮಾಡೋದು" ಹಾಡಿನ ಥರವೇ, "ವೇದ"ನ ಎಂಟ್ರಿಗೆ "ಯಾವನೋ ಇವನು ಗಿಲಕ್ಕೋ" ಅನ್ನುವ ಪವರ್‌ಫುಲ್ ಸಾಂಗಿದೆ. ಅರ್ಜುನ್ ಜನ್ಯ ಅವರದು ಸಂಗೀತ ನಿರ್ದೇಶನ. ಜಾನಪದ ಟಚ್ ಇರುವ ಜುಂಜಪ್ಪ ಹಾಡಿದೆ. ಶಿವಣ್ಣನೇ ಹಾಡಿರುವ "ಪುಷ್ಪ" ಹಾಡು ಅಭಿಮಾನಿಗಳಿಗೆ ಹಬ್ಬದೂಟ. ಮಧ್ಯಂತರದ ನಂತರ ಸರ್ಪ್ರೈಸ್ ಆಗಿ ಬರುವ "ಚಿನ್ನುಮರಿ" ಹಾಡು ಹೆಣ್ಣುಮಕ್ಕಳಿಗೆ & ಅಪ್ಪಂದಿರಿಗೆ ಬರೆದಂತಿದೆ. "ಮಹದಾನಂದ ಮಗಳಾದರೆ, ಬಡತಂದೆ ಸಹ ಮೆರೆಯೋ ದೊರೆ" ಅನ್ನುವ ವಿ.ನಾಗೇಂದ್ರಪ್ರಸಾದ್ ಬರೆದ ಸಾಲು ಸಿಕ್ಕಾಪಟ್ಟೆ ಇಷ್ಟವಾಯ್ತು.

ಸೇಡು ತೀರಿಸಿಕೊಳ್ಳುವ ಕಥೆಯಿರುವುದರಿಂದ ಸಿನಿಮಾ ಪೂರ್ತಿ Violence ಇದೆ. ಹಾಗಾಗಿ ಅಂಥವನ್ನು ಇಷ್ಟಪಡದವರು ನೋಡಿದರೆ ಆ ಬಗ್ಗೆ ಮಾತನಾಡುವ ಸಾಧ್ಯತೆ ಹೆಚ್ಚು.

ಒಟ್ಟಿನಲ್ಲಿ "ಕೆಟ್ಟವರನ್ನು ಇಲ್ಲಿ ಇಲ್ಲದಂತೆ ಮಾಡಲಾಗದು. ಆದರೆ ಅವರನ್ನು ಧೈರ್ಯವಾಗಿ ಎದುರಿಸುವ ಛಲವನ್ನು ಹೆಣ್ಣುಮಕ್ಕಳು ಬೆಳೆಸಿಕೊಳ್ಳಬೇಕು" ಅನ್ನುವ ಮೆಸೇಜನ್ನು ಪರೋಕ್ಷವಾಗಿ ಕೊಡುತ್ತ ಸ್ಥೈರ್ಯ ತುಂಬಬಲ್ಲ "ವೇದ" ಸಿನಿಮಾದ ಮೇಕಿಂಗ್ ಚೆನ್ನಾಗಿದೆ.  ಬೋರ್ ಹೊಡೆಸದೆ ಪೂರ್ತಿ ನೋಡಿಸಿಕೊಳ್ಳುತ್ತೆ. ಅಭಿಮಾನಿಗಳಿಗಂತೂ ಹಬ್ಬ. ಶಿವರಾಜ್‌ಕುಮಾರ್ ಅವರ 125ನೇ ಸಿನಿಮಾ ನಿರಾಶೆ ಮೂಡಿಸಲಿಲ್ಲ ಅನ್ನುವುದು ಖುಷಿಯ ವಿಷಯ.
 

Follow Us:
Download App:
  • android
  • ios