ಚಿತ್ರ ವಿಮರ್ಶೆ: ಕಾಳಿದಾಸ ಕನ್ನಡ ಮೇಷ್ಟ್ರು
ಮಗುಗೆ ಸ್ಕೂಲ್ ಸೀಟ್ ಕೊಡಕ್ಕೆ ನಾವು ಯಾಕೆ ಸಂದರ್ಶನ ಎದುರಿಸಬೇಕು? ಇಪ್ಪತ್ತ ನಾಲ್ಕು ಗಂಟೆಯೂ ಓದೋದೆನಾ, ನಾವು ಆಟ ಆಡೋದು ಯಾವಾಗ?
ಆರ್.ಕೇಶವಮೂರ್ತಿ
-ಮೊದಲ ಪ್ರಶ್ನೆ ಹೆತ್ತವರದ್ದು. ಎರಡನೆಯದು ಮಕ್ಕಳದ್ದು. ಬಹುಶಃ ಇದು ಪ್ರತಿಯೊಂದು ಮನೆ, ಮನಗಳಲ್ಲೂ ಕೇಳಿ ಬರುತ್ತಲೇ ಇರುವ ಪ್ರಶ್ನೆಯೂ ಹೌದು. ಇದು ಚಿತ್ರದ ಪ್ಲಸ್ ಕೂಡ ಹೌದು. ದೊಡ್ಡವರ ಮತ್ತು ಚಿಕ್ಕವರ ಸಂಕಟಗಳೇ ಸಿನಿಮಾ ಆದರೆ ಹೇಗಿರುತ್ತದೆ ಎಂಬುದಕ್ಕೆ ಸಾಕ್ಷಿ ‘ಕಾಳಿದಾಸ ಕನ್ನಡ ಮೇಷ್ಟು್ರ’. ನಿರ್ದೇಶಕ ಕವಿರಾಜ್ ಅವರು ಈ ಸಾಹಸ ಮಾಡಿದ್ದಾರೆ. ಅಕ್ಷರ ಜ್ಞಾನಕ್ಕೆ ಹಾತೊರೆಯುತ್ತಿರುವ ಪ್ರತಿಯೊಬ್ಬರಿಗೂ ಗೊತ್ತಿರುವ ಮತ್ತು ಎದುರಿಸುತ್ತಿರುವ ಸಮಸ್ಯೆಯನ್ನೇ ತೆರೆ ಮೇಲೆ ತಂದಿದ್ದಾರೆ. ಶಿಕ್ಷಣ ಗಂಭೀರ ವಿಷಯ. ಹಾಗಂತ ಇಡೀ ಸಿನಿಮಾ ಹೀಗೆ ಸಾಗುತ್ತದೆ ಎನ್ನಲಾಗದು.
ಇಲ್ಲಿ ಕನ್ನಡ ಶಿಕ್ಷಕನ ತಳಮಳಗಳ, ತಮ್ಮ ಮಗ ಪ್ರತಿಷ್ಠಿತ ಖಾಸಗಿ ಆಂಗ್ಲ ಶಾಲೆಯಲ್ಲೇ ಓದಿಸಬೇಕೆಂಬ ಗೃಹಿಣಿಯ ಹಠ, ಸರ್ಕಾರಿ ಶಾಲೆಗಳನ್ನು ಮುಚ್ಚಬೇಕೆಂಬ ಸರ್ಕಾರದ ನೀತಿ, ಕನ್ನಡ ಶಾಲೆಗಳಲ್ಲಿ ಓದುವ ಬಡ ಮಕ್ಕಳ ನೆಮ್ಮದಿ, ಕೇಜಿಗಟ್ಟಲೇ ಪುಸ್ತಕಗಳನ್ನು ಹೊತ್ತು ಕಾನ್ವೆಂಟ್‌ಗಳತ್ತ ಸಾಗುವ ಮಕ್ಕಳ ಪ್ರಾಣ ಸಂಕಟಗಳು... ಈ ಎಲ್ಲವನ್ನೂ ಮನರಂಜನೆಯ ನೆರಳಿನಲ್ಲಿ ಹೇಳುತ್ತಲೇ ಮಕ್ಕಳನ್ನು ಮಾರ್ಕ್ಸ್ ತೆಗೆಯುವ ರೇಸ್ ಕುದುರೆಗಳನ್ನಾಗಿಸಿದ ಶಿಕ್ಷಣ ಪದ್ದತಿಯನ್ನು ಗಟ್ಟಿಯಾಗಿ ಪ್ರಶ್ನಿಸುತ್ತಾರೆ ನಿರ್ದೇಶಕರು. ಸರ್ಕಾರಿ ಶಾಲೆಯ ಶಿಕ್ಷಕ ಕಾಳಿದಾಸನದ್ದು, ಎಲ್ಲ ಮಕ್ಕಳು ಸರ್ಕಾರಿ ಶಾಲೆಗಳಲ್ಲೇ ಓದಬೇಕೆಂಬ ಆಸೆ. ಆದರೆ, ತಾನು ಕೆಲಸ ಮಾಡುವ ಶಾಲೆಯನ್ನೇ ಮುಚ್ಚಬೇಕು ಎನ್ನುವ ಮೇಲಾಧಿಕಾರಿಗಳ ನಿರ್ಧಾರ ತೆಗೆದುಕೊಂಡಿದೆ. ಮಾಸಿದ ಗೋಡೆಗಳ ಶಾಲೆಯಲ್ಲೇ ಹೇಗೋ ಕಾಲ ದೂಡುತ್ತಿರುವ ಕಾಳಿದಾಸನನ್ನು ಇಷ್ಟಪಟ್ಟು ಕೈ ಹಿಡಿದವಳ ಆಸೆಗಳು ದುಬಾರಿ. ಆಕೆಗೆ ತನ್ನ ಮಗನನ್ನು ಇಂಗ್ಲಿಷ್ ಮೀಡಿಯಂನಲ್ಲೇ ಓದಿಸಬೇಕು. ಆದರೆ, ಇದಕ್ಕೆ ತಗಲುವ ಲಕ್ಷ ಲಕ್ಷ ಹಣ ಜೋಡಿಸುವುದಾದರೂ ಹೇಗೆ ಎನ್ನುವ ಚಿಂತೆ ಕಾಳಿದಾಸನದ್ದು. ಮುಂದೇನು ಎಂಬುದು ಅಸಲಿ ಕತೆ.
ಈ ನಡುವೆ ಕಾಳಿದಾಸನ ಮಗ ಹಾಗೂ ಹೆಂಡತಿಯ ಸಾವು, ಹಣಕ್ಕಾಗಿ ಕಿಡ್ನಿ ಮಾರುವ ದೃಶ್ಯಗಳು ಚಿತ್ರದ ನಿರೂಪಣೆಗೆ ಎಮೋಷನಲ್ ಟಚ್ ಕೊಡುತ್ತದೆ. ಮೊದಲರ್ಧ ನಕ್ಕರೇ ಅದೇ ಸ್ವರ್ಗ ಎನ್ನುವಂತಿದೆ. ವಿರಾಮದ ನಂತರ ಆ ನಗು ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ. ತನ್ನ ಮಗನನ್ನು ಓದಿಸಲು ಮೈ ಮಾರಿಕೊಳ್ಳುತ್ತೇನೆ ಎನ್ನುವ ಪತ್ನಿಯ ಮಾತು ಅಗತ್ಯವಿತ್ತಾ? ವಿರಾಮದ ನಂತರ ನಡೆಯುವ ಪ್ರತಿಭಟನೆಗಳು, ಸುದ್ದಿಗಳ ದೃಶ್ಯಗಳನ್ನು ಸಂಕ್ಷಿಪ್ತಗೊಳಿಸಬೇಕಿತ್ತೇನೋ. ಯಾವುದೂ ಹೊಸ ವಿಷಯವನ್ನು ತುರುಕಿಲ್ಲ. ಸರ್ಕಾರಿ ಶಾಲೆ ಮುಚ್ಚುವ ಮಾತುಗಳು ಈಗಾಗಲೇ ಸಿನಿಮಾ ಪರದೆಯ ಆಚೆಗೂ ಕೇಳುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಅಕ್ಷರ ಕಲಿಕೆಯನ್ನು ಗೋಲ್ಡ್ ಬ್ಯುಸಿನೆಸ್‌ಗಿಂತಲೂ ಹೆಚ್ಚಾಗಿಸಿರುವುದು ಗೊತ್ತೇ ಇದೆ. ಹಾಗೆ ಮಕ್ಕಳಿಗೆ ಶಾಲೆಯಲ್ಲಿ ಸೀಟು ಸಿಗಲು ಲಕ್ಷಗಳ ಲೆಕ್ಕದಲ್ಲಿ ಕಟ್ಟುವ ಜತೆಗೆ ಪೋಷಕರಿಗೂ ಪರೀಕ್ಷೆ ಕೊಡುವ ಶಾಲೆಗಳೂ ಇಲ್ಲವೆಂದಲ್ಲ.
ಆದರೆ, ವ್ಯಾಪಾರೀಕರಣಗೊಂಡಿರುವ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸುವ ಅಥವಾ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಸಾಧ್ಯವೇ ಎನ್ನುವ ನಿಟ್ಟಿನಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಚರ್ಚಿಸುವುದು ಸಿನಿಮಾ ವ್ಯಾಪ್ತಿ ಮತ್ತು ವಾಸ್ತವದ ಮಿತಿಯನ್ನು ತೋರುತ್ತದೆ. ಯಾಕೆಂದರೆ ಶಿಕ್ಷಣ, ಆರೋಗ್ಯ ಪ್ರತಿಯೊಬ್ಬರಿಗೂ ಸಿಗಬೇಕಾದ ಸಮಾನ ಅವಕಾಶ ಅಲ್ಲ, ಅದು ದುಡ್ಡಿದ್ದವರ ಅಂಗಡಿಯಲ್ಲಿ ಸಿಗುವ ಲಾಲಿ ಪಪ್ಪು. ಹಣ ಇದ್ದವರ ನಾಳಿಗೆ ಸಿಹಿ ಮಾಡುತ್ತದೆ! ಇಡೀ ಚಿತ್ರ ನಿರ್ದೇಶಕರ ನಿರೂಪಣೆ ಹಾಗೂ ಜಗ್ಗೇಶ್ ಹೆಗಲ ಮೇಲೆ ಸಾಗುತ್ತದೆ. ಇವರಿಬ್ಬರೇ ಚಿತ್ರದ ಹೈಲೈಟ್. ಇಂಗ್ಲಿಷ್ ಅಮ್ಮನಾಗಿ ಮೇಘನಾ ಗಾಂವ್ಕರ್ ಗಮನ ಸೆಳೆಯುತ್ತಾರೆ. ಗುರು ಕಿರಣ್ ಅವರ ಸಂಗೀತದಲ್ಲಿ ಎರಡು ಹಾಡು ಕೇಳುವಂತಿದ್ದರೆ, ಸುರೇಶ್ ಗುಂಡ್ಲುಪೇಟೆ ಕ್ಯಾಮೆರಾ ಚಿತ್ರಕ್ಕೆ ಪೂರಕವಾಗಿದೆ.