Asianet Suvarna News Asianet Suvarna News

ಮಕ್ಕಳಿಗೆ ಉಚಿತ ಪುಸ್ತಕ: ಸಾಹಿತ್ಯ ಸಮ್ಮೇಳನದಲ್ಲಿ ವಸುದೇಂದ್ರರ ಕೌತುಕ!

ಸಮ್ಮೇಳನವು ಮಾನಸಿಕ ಸಂತೋಷವನ್ನು ನೀಡಿದರೂ ದೈಹಿಕವಾಗಿ ಜರ್ಜರಿತಗೊಳಿಸುತ್ತದೆ. ಕಳೆದ ಹಲವು ವರ್ಷಗಳಿಂದ ಪುಸ್ತಕದ ಮಳಿಗೆಗಳು ಗುಣಮಟ್ಟದಲ್ಲಿ ಪ್ರಗತಿ ಹೊಂದುತ್ತಾ ಬಂದಿದ್ದವು. ಶ್ರವಣಬೆಳಗೊಳ, ರಾಯಚೂರು, ಮೈಸೂರು ? ಎಲ್ಲಾ ಕಡೆಯೂ ಸಾಕಷ್ಟುಉತ್ತಮ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರು. ಧಾರವಾಡದವರು ಮಾತ್ರ ಹತ್ತು ವರ್ಷದ ಹಿಂದಿನ ಅಧೋಗತಿಗೆ ಅದನ್ನು ತೆಗೆದುಕೊಂಡು ಹೋದರು. ಪೂರ್ಣಕುಂಭ ಮೆರವಣಿಗೆ ಕಾಡಿದಷ್ಟುಈ ಅವ್ಯವಸ್ಥೆ ಸಾಹಿತಿಗಳನ್ನು ಕಾಡಲಿಲ್ಲ. ಪೂರ್ಣಕುಂಭ ವಿರೋಧಿಸಿ ಕವಿತೆಗಳನ್ನು ಹಲವರು ಓದಿದರೂ, ಅವ್ಯವಸ್ಥೆಯನ್ನು ಖಂಡಿಸಿ ಯಾರೂ ಕವಿತೆ ಓದಿದ್ದು ಕಾಣಲಿಲ್ಲ.

Writter Vasudendra Distributed Literature Books for Free to Children in Dharwad
Author
Bengaluru, First Published Jan 13, 2019, 1:14 PM IST

ವಸುಧೇಂದ್ರ

ಈ ಬಾರಿಯ ಸಾಹಿತ್ಯ ಸಮ್ಮೇಳನಕ್ಕೆ ಒಂದು ವಿನೂತನ ಯೋಜನೆಯೊಂದಿಗೆ ಹೋಗಿದ್ದೆ.

ಪ್ರತಿ ಸಮ್ಮೇಳನದಲ್ಲಿಯೂ ಸುತ್ತಮುತ್ತಲಿನ ಶಾಲೆಯ ಮಕ್ಕಳನ್ನು ಅವರ ಮಾಸ್ತರರು ಕರೆದುಕೊಂಡು ಬರುತ್ತಾರೆ. ಆ ಮಕ್ಕಳು ಸೊಗಸಾಗಿ ಸಮವಸ್ತ್ರ ಧರಿಸಿ, ಕೈಕೈ ಹಿಡಿದುಕೊಂಡು ಇಡೀ ಪುಸ್ತಕದಂಗಡಿಗಳನ್ನು ಸುತ್ತುತ್ತಾರೆ. ಇಡೀ ಸಮ್ಮೇಳನದ ಗದ್ದಲದ ಅಂಗಳದಲ್ಲಿ ಈ ಮಕ್ಕಳು ಬಣ್ಣದ ರಂಗೋಲಿಯ ಎಳೆಗಳಂತೆ ಕಾಣುತ್ತಾರೆ. ಅವರು ಆಗಾಗ ಅಂಗಡಿಯ ಮುಂದೆ ನಿಂತು ಪುಸ್ತಕಗಳನ್ನು ಸವರುತ್ತಾರೆ. ಬಿಡಿಸಿ ಒಂದಿಷ್ಟುಓದುತ್ತಾರೆ. ಆದರೆ ಯಾರ ಬಳಿಯಲ್ಲಿಯೂ ಹಣವಿರುವುದಿಲ್ಲ. ಆದ್ದರಿಂದ ಪುಸ್ತಕ ಕೊಳ್ಳುವುದಕ್ಕೆ ಆಸೆಯಿದ್ದರೂ ಪೂರೈಸಿಕೊಳ್ಳಲಾಗುವುದಿಲ್ಲ. ಇದೆಲ್ಲಾ ಪುಸ್ತಕದಂಗಡಿಯವರಿಗೆ ಗೊತ್ತಿರುವುದರಿಂದ, ಈ ಮಕ್ಕಳನ್ನು ಅಂಗಡಿಯ ಒಳಕ್ಕೆ ಬರುವುದನ್ನೂ ತಡೆಯುತ್ತಾರೆ. ಹೊಲಸಾದ ಕೈಗಳಿಂದ ಪುಸ್ತಕಗಳನ್ನು ಮುಟ್ಟಿಅಂದಗೆಡಿಸುತ್ತಾರೆ ಎಂಬುದು ಅವರ ಆತಂಕ.

ಈ ಮಕ್ಕಳಿಗೆ ಉಚಿತವಾಗಿ ಪುಸ್ತಕ ಕೊಟ್ಟರೆ ಅವರು ಓದುವ ಹವ್ಯಾಸ ಬೆಳೆಸಿಕೊಳ್ಳಬಹುದೇನೋ ಎಂಬ ವಿಶೇಷ ಆಲೋಚನೆ ನನಗೆ ಹೊಳೆಯಿತು. ಆ ಕಾರಣಕ್ಕಾಗಿ ಒಂದೆರಡು ವಾರಗಳ ಮುಂಚೆಯೇ ಫೇಸ್‌ಬುಕ್‌ನಲ್ಲಿ ಅದರ ಕುರಿತು ಸಮಾನ ಆಸಕ್ತರಿಗಾಗಿ ಒಂದು ಮೆಸೇಜ್‌ ಪೋಸ್ಟ್‌ಮಾಡಿದೆ. ಹತ್ತಾರು ಜನ ಉತ್ಸಾಹದಿಂದ ಕೈಜೋಡಿಸಿ ತಮ್ಮ ಕೈಲಾದ ಹಣ ಸಹಾಯ ಮಾಡಿದರು. ಆ ಹಣದಲ್ಲಿ ಕಾರಂತ, ತೇಜಸ್ವಿ, ನಾಗೇಶ ಹೆಗಡೆ, ಬೊಳುವಾರು, ಜೋಗಿ ಹಾಗೂ ನಮ್ಮ ಪ್ರಕಾಶನದ ಹಲವಾರು ಪುಸ್ತಕಗಳನ್ನು ಜೋಡಿಸಿಕೊಂಡು ಹೋಗಿದ್ದೆ.

ಉಚಿತ ಪುಸ್ತಕ ದೊರೆತಾಗ ಮಕ್ಕಳ ಕಣ್ಣಲ್ಲಿ ಮಿನುಗುವ ಬೆಳಕನ್ನು ನೋಡುವುದೇ ಚಂದ. ಮೊದಲಿಗೆ ಮಕ್ಕಳು ನನ್ನ ಮಾತನ್ನು ನಂಬುತ್ತಲೇ ಇರಲಿಲ್ಲ. ಆದರೆ ನಿಜಕ್ಕೂ ಪುಸ್ತಕ ಅವರ ಕೈಗೆ ಬಂದಾಗ ‘ಥ್ಯಾಂಕ್ಸ್‌ಅಣ್ಣಾ’, ‘ಥ್ಯಾಂಕ್ಸ್‌ಅಂಕಲ್‌’ ಎನ್ನುತ್ತಾ ತಮ್ಮ ಕಮಲದ ಮೊಗ್ಗಿನಂತಹ ಕೈಗಳಿಂದ ನನ್ನ ಕೈಕುಲಿಕಿದಾಗ ವಿಪರೀತ ಸಂಭ್ರಮವಾಗುತ್ತಿತ್ತು. ಅವರನ್ನೆಲ್ಲಾ ಸಾಲಾಗಿ ನಿಲ್ಲಿಸಿ ನಾನು ಫೋಟೋ ತೆಗೆಯುತ್ತಲೇ ಹೋದೆ. ಸುಮಾರು ಐದು ನೂರು ಪುಸ್ತಕಗಳನ್ನು ಕೊಡುವಷ್ಟುಸಹಾಯಧನ ಸಿಕ್ಕಿತ್ತು. ಮಕ್ಕಳು ತಾವು ಪುಸ್ತಕ ತೆಗೆದುಕೊಂಡು ಹೋಗಿ, ಮತ್ತಿಷ್ಟುಹೊಸ ಮಕ್ಕಳನ್ನು ಕಳುಹಿಸಿ ಕೊಡುತ್ತಿದ್ದರು.

ಈ ಸತ್ಕಾರ್ಯದಲ್ಲಿ ಹಲವು ವಿಶೇಷ ಸಂಗತಿಗಳು ನಡೆದವು. ನಾನು ಪುಸ್ತಕವನ್ನು ಕೊಡುವುದಕ್ಕೆ ಮುಂಚೆ ಮಕ್ಕಳಿಗೆ ನಮ್ಮ ಪ್ರಕಾಶನದ ನಾಲ್ಕೈದು ಪುಸ್ತಕದ ಹೆಸರನ್ನಾದರೂ ಓದಿ, ಅದರ ಅರ್ಥವನ್ನು ವಿವರಿಸಲು ಹೇಳುತ್ತಿದ್ದೆ. ಬಹುತೇಕ ಮಕ್ಕಳಿಗೆ ಅದು ಸಾಧ್ಯವಾಗುತ್ತಿರಲಿಲ್ಲ. ಅವರೆಲ್ಲಾ ಹೈಸ್ಕೂಲ್‌ಅಥವಾ ಪಿಯುಸಿ ಓದುತ್ತಿರುವ ಮಕ್ಕಳಾಗಿದ್ದರು. ಉದಾಹರಣೆಗೆ ’ಕಾಲಿಟ್ಟಲ್ಲಿ ಕಾಲುದಾರಿ’ ಎಂಬುದನ್ನು ಕಷ್ಟಪಟ್ಟು ಅಕ್ಷರ ಜೋಡಿಸಿ ಓದಿದರೂ, ಹಾಗಂದರೇನೆಂಬುದು ಬಹುತೇಕರಿಗೆ ತಿಳಿಯುತ್ತಿರಲಿಲ್ಲ. ಅಂತಹವರಿಗೆ ಪುಸ್ತಕ ಕೊಡುವುದು ಬೇಡ ಎಂದು ನಿರ್ಧಿರಿಸಿದೆ. ಒಂದು ಹಂತದಲ್ಲಂತೂ ಪುಸ್ತಕವನ್ನು ಓದುವ ಮಕ್ಕಳನ್ನು ಹುಡುಕುವುದೇ ನನಗೆ ಕಷ್ಟವೆನ್ನಿಸಲಾರಂಭಿಸಿತು. ವೇದಿಕೆಯಲ್ಲಂತೂ ಕನ್ನಡ ಅಥವಾ ಇಂಗ್ಲೀಷ್‌ಮಾಧ್ಯಮದ ಕುರಿತು ಪರ-ವಿರೋಧದ ಚರ್ಚೆ ಬಿರುಸಾಗಿ ನಡೆಯುತ್ತಿತ್ತು. ಆದರೆ ವಾಸ್ತವದಲ್ಲಿ ಯಾವ ಮಾಧ್ಯಮ ಎನ್ನುವುದು ಸಮಸ್ಯೆಯೇ ಅಲ್ಲವೆನ್ನಿಸುತ್ತದೆ. ಇವೆಲ್ಲಾ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದುತ್ತಿರುವವರೇ ಆಗಿದ್ದರು. ಆದರೆ ಕನ್ನಡ ಓದಲೂ ಸಾಧ್ಯವಾಗಷ್ಟುಕಳಪೆಯಾದ ಶಿಕ್ಷಣ ಅವರ ಶಾಲೆಗಳಲ್ಲಿ ಇದೆ ಎಂಬುದು ಸ್ಪಷ್ಟವಾಗುತ್ತಿತ್ತು. ಮೊದಲಿಗೆ ಭಾಷೆಯನ್ನು ಅಚ್ಚುಕಟ್ಟಾಗಿ ಕಲಿಸುವುದನ್ನು ನಾವು ಕಡ್ಡಾಯವಾಗಿ ಪಾಲಿಸಬೇಕು. ಅದರಲ್ಲಿ ಯಶಸ್ವಿಯಾದರೆ ಮಾಧ್ಯಮದ ಪ್ರಶ್ನೆ ಅಷ್ಟೇನೂ ದೊಡ್ಡದಾಗುವುದಿಲ್ಲ. ಇಂಗ್ಲೀಷ್‌ ಮಾಧ್ಯಮದಲ್ಲಿ ಓದಿದ ನನ್ನ ಹಲವಾರು ಸಹಪಾಠಿಗಳು ನನಗಿಂತಲೂ ಯಥೇಚ್ಚವಾಗಿ ಕನ್ನಡದ ಪುಸ್ತಕಗಳನ್ನು ಓದುತ್ತಾರೆಂಬುದನ್ನು ನಾನು ಬಲ್ಲೆ.

ಪುಕ್ಕಟೆ ಪುಸ್ತಕ ಸಿಗುತ್ತದೆಂದಾಕ್ಷಣ ಎಳೆಯ ಮಕ್ಕಳು ತಾಯಿ ಹಕ್ಕಿ ಕೊಡುವ ಆಹಾರಕ್ಕೆ ಮರಿಹಕ್ಕಿಗಳು ಬಾಯಿತೆರೆದಂತೆ ಕೈಚಾಚುತ್ತಿದ್ದವು. ಪುಟ್ಟಪುಟ್ಟಕೈಗಳಿಗೆಲ್ಲಾ ನಾನು ಒಂದೊಂದೇ ಪುಸ್ತಕ ಕೊಡುತ್ತಿದ್ದೆ. ವಿಚಿತ್ರವೆಂದರೆ ಕೆಲವೊಮ್ಮೆ ಅವರನ್ನು ಕರೆದುಕೊಂಡು ಬಂದ ಮಾಸ್ತರರೂ ಕೈಚಾಚಿ ‘ನಮಗೂ ಕೊಡ್ರಿ ಸಾರ್‌...’ ಎನ್ನುತ್ತಿದ್ದರು. ನಾನು ಕಡ್ಡಾಯವಾಗಿ ಬಲಿತ ಕೈಗಳಿಗೆ ಪುಸ್ತಕ ನಿರಾಕರಿಸಿ ‘ಈ ಪುಸ್ತಕ ಮಕ್ಕಳಿಗೆ ಮಾತ್ರ. ನಿಮಗೆಲ್ಲಾ ಅಲ್ಲಾ...’ ಎಂದು ಹೇಳುತ್ತಿದ್ದೆ. ಹಾಗೆ ನಾನು ಹೇಳಿದ ತಕ್ಷಣ ಮಕ್ಕಳಿಗೆ ಅದೇನು ಖುಷಿಯಾಗುತ್ತಿತ್ತೋ ಕಾಣೆ, ಕೇಕೆ ಹಾಕಿ ಹೇಷಾರವ ಮಾಡುತ್ತಿದ್ದರು. ಮಾಸ್ತರರಿಗೆ ಸಿಗದ್ದು ತಮಗೆ ಸಿಕ್ಕಿತೆಂಬುವುದು ಅವಕ್ಕೆ ಎಂತಹದೋ ಸಂಭ್ರಮವನ್ನು ತರುತ್ತಿತ್ತು. ನಡೆದ ಅವಮಾನಕ್ಕೆ ಮಾಸ್ತರರು ಮುಖ ಸಣ್ಣದು ಮಾಡಿಕೊಂಡರೂ, ಈ ಮಕ್ಕಳ ಸಂಭ್ರಮ ನನಗೆ ವಿಚಿತ್ರ ಮುದವನ್ನು ನೀಡುತ್ತಿತ್ತು.

ಕೆಲವು ಮಾಸ್ತರರು ನಾಡಿನ ಮೂಲೆಗಳಿಂದ ಬಂದಿದ್ದರು. ಅವರು ಮಕ್ಕಳನ್ನು ಕರೆದುಕೊಂಡು ಬಂದಿರಲಿಲ್ಲ. ಅವರೆಲ್ಲಾ ತಮ್ಮ ಮಕ್ಕಳಿಗೂ ಪುಸ್ತಕಗಳನ್ನು ಕೊಂಡೊಯ್ಯುವ ಆಸೆಯನ್ನು ವ್ಯಕ್ತ ಪಡಿಸಿದರು. ಅವರ ಕೋರಿಕೆ ನನಗೆ ಸಾಧುವೆನ್ನಿಸಿತು. ನಾಡಿನ ಯಾವುದೋ ಮೂಲೆಯ ಶಾಲೆಗೆ ಪುಸ್ತಕ ಕಳುಹಿಸುವ ಸೌಭಾಗ್ಯ ಅಷ್ಟುಸುಲಭವಾಗಿ ಸಿಕ್ಕುವುದಿಲ್ಲವಲ್ಲವೆ? ಆದರೆ ನನ್ನ ಜಾಗೃತಿಯಲ್ಲಿ ನಾನಿರಬೇಕು ಎಂದು ನಿರ್ಧರಿಸಿ, ಅವರ ಹೆಸರು, ಊರು, ಶಾಲೆ, ಮೊಬೈಲ್‌ ನಂಬರ್‌ ಇತ್ಯಾದಿ ವಿವರಗಳ ಜೊತಗೆ ಅವರ ಜೊತೆ ಸೆಲ್ಫಿಯನ್ನು ತೆಗೆಸಿಕೊಂಡು ದಾಖಲಿಸಿಕೊಂಡೆ. ಊರಿಗೆ ಹೋದ ತಕ್ಷಣ ಮಕ್ಕಳಿಗೆ ಕೊಟ್ಟು ಒಂದು ಫೋಟೋವನ್ನು ವಾಟ್ಸಪ್‌ನಲ್ಲಿ ಕಳುಹಿಸಬೇಕೆಂದು ಹೇಳಿದೆ. ಸರಿಯಾಗಿ 19 ಜನ ಉಪಾಧ್ಯಾಯರು ಹತ್ತು ಪುಸ್ತಕಗಳನ್ನು ತೆಗೆದುಕೊಂಡು ಹೋದರು. ಎರಡು ದಿನದಲ್ಲಿ ಎಲ್ಲರೂ ಫೋಟೋಗಳನ್ನು ನನಗೆ ವಾಟ್ಸಾಪ್‌ನಲ್ಲಿ ಕಳುಹಿಸಿಕೊಟ್ಟರು. ನಾನು ಹೆಸರೇ ಕೇಳಿಲ್ಲದ ಊರಿನ ಮಕ್ಕಳು ನಾವು ಕೊಟ್ಟಕನ್ನಡ ಪುಸ್ತಕಗಳನ್ನು ಕೈಯಲ್ಲಿ ಹಿಡಿದು ಸಂಭ್ರಮಿಸುತ್ತಿರುವ ಫೋಟೋಗಳು ನನಗೆ ಸಂತೋಷವನ್ನು ತಂದವು. ಜೊತೆಗೆ ಈ ಅನುಭವ ಮಾಸ್ತರರ ಕುರಿತು ವಿಶೇಷ ಮಾಹಿತಿಯನ್ನು ನನಗೆ ನೀಡಿತು. ಅವರೆಲ್ಲರೂ ವಾಟ್ಸಾಪ್‌ಅನ್ನು ಸೊಗಸಾಗಿ ಬಳಸಲು ಬಲ್ಲವರಾಗಿದ್ದರು. ಸ್ಪಷ್ಟವಾಗಿ ಕನ್ನಡದಲ್ಲಿ ಸಂದೇಶವನ್ನು ಟೈಪಿಸಿ ಕಳುಹಿಸಿದ್ದರು. ಹತ್ತು ಪುಸ್ತಕಗಳ ಭಾರವನ್ನು ಒಯ್ದು ತಮ್ಮ ಶಾಲೆಯ ಮಕ್ಕಳಿಗೆ ಕೊಡುವಷ್ಟುಮಕ್ಕಳ ಮೇಲೆ ಅವರಿಗೆ ಪ್ರೀತಿಯಿತ್ತು. ಎಲ್ಲಕ್ಕೂ ಹೆಚ್ಚಾಗಿ ಅವರು ಅತ್ಯಂತ ಪ್ರಾಮಾಣಿಕರಾಗಿದ್ದರು. ಈ ಸತ್ಕಾಯಕ ನನಗೆ ಕನ್ನಡ ನಾಡಿನ ಮಾಸ್ತರರ ಬಗ್ಗೆ ಗೌರವ ಹೆಚ್ಚಾಗುವಂತೆ ಮಾಡಿತು.

ಕೊಟ್ಟಪುಸ್ತಕವನ್ನು ನೋಡಿದ ನಂತರ ಮಕ್ಕಳು ಬೇರೊಂದು ಪುಸ್ತಕವನ್ನು ಕೇಳುವುದು ಸಾಮಾನ್ಯವಾಗಿತ್ತು. ಅವುಗಳಿಗೆ ಸಾಹಿತ್ಯ ಜ್ಞಾನವಿಲ್ಲದ ಕಾರಣ, ಬಣ್ಣ ಗಾತ್ರ ಆಕಾರ ಹೊಳಪುಗಳನ್ನು ಗಮನಿಸಿ ಇನ್ನೊಂದಕ್ಕೆ ಬೇಡಿಕೆ ಇಡುತ್ತಿದ್ದರು. ಸಾಧ್ಯವಾದಷ್ಟುಪೂರೈಸುತ್ತಿದ್ದೆ. ಆದರೆ ಒಬ್ಬ ಹುಡುಗ ಮಾತ್ರ ನನ್ನನ್ನು ಕಂಗಾಲುಗೊಳಿಸಿಬಿಟ್ಟ. ಅವನಿಗೆ ಬೊಳುವಾರು ಮಹಮದ್‌ ಕುಂಞಿ ಅವರು ಬರೆದು ‘ಪಾಪು ಗಾಂಧಿ, ಬಾಪು ಗಾಂಧಿ’ ಪುಸ್ತಕವನ್ನು ಕೊಟ್ಟೆ. ಅವನು ಅದನ್ನು ಹಿಂದೆ ಮುಂದೆ ನೋಡಿ ‘ಇದು ಬ್ಯಾಡ ರ್ರೀ? ’ನರೇಂದ್ರ ಮೋದಿ’ ಪುಸ್ತಕ ಇದ್ದರೆ ಕೊಡ್ರಿ’ ಅಂದ. ನಂಗೆ ನಿಜಕ್ಕೂ ಆಘಾತವಾಯ್ತು. ಆದರೆ ಸುಧಾರಿಸಿಕೊಂಡು ‘ಈ ಪುಸ್ತಕ ಓದಿದೀಯಾ?’ ಎಂದು ಸಮಾಧಾನದಿಂದಲೇ ಕೇಳಿದೆ. ‘ಇಲ್ಲರ್ರೀ?’ ಅಂದ. ‘ಹಾಗಿದ್ರೆ ಮೊದಲು ಈ ಪುಸ್ತಕ ಓದು. ಅನಂತರ ’ನರೇಂದ್ರ ಮೋದಿ’ ಪುಸ್ತಕ ಓದುವಿಯಂತೆ’ ಎಂದು ಹೇಳಿ ಕಳುಹಿಸಿದೆ. ಸದ್ಯದ ರಾಜಕೀಯ ಸಂಗತಿಗಳು ನಾವು ಊಹಿಸಿದ್ದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಮಕ್ಕಳ ಮೇಲೆ ಪ್ರಭಾವ ಬೀರುತ್ತಿರುತ್ತವೆ.

ರಾಣೆಬೆನ್ನೂರಿನ ಎಳೆಯ ತರುಣನೊಬ್ಬ ಮಳಿಗೆಗೆ ಬಂದಿದ್ದ. ನನ್ನ ಕತೆಗಳ ಕುರಿತು ಮೆಚ್ಚುಗೆಯ ಮಾತನಾಡಿದ. ಪತ್ರಿಕೆಯಲ್ಲಿ ಓದಿದ ಲೇಖನಗಳನ್ನು ಹೆಸರಿಸಿದ. ಅನಂತರ ಒಂದು ಸೆಲ್ಫಿ ತೆಗೆದುಕೊಂಡ. ಅವೆಲ್ಲಾ ಆದ ಮೇಲೆ ಇದ್ದಕ್ಕಿದ್ದಂತೆಯೇ ‘ನಾನೂ ಗೇ ಸಾರ್‌’ ಎಂದು ಹೇಳಿದ. ಅವನ ಕಣ್ಣಲ್ಲಿ ತೇವವಿತ್ತು. ನಾನು ಮುಗುಳ್ನಕ್ಕು ‘ವೆಲ್‌ಕಂ ಟು ಫ್ಯಾಮಿಲಿ’ ಎಂದೆ. ಅವನ ಮುಖದಲ್ಲಿ ಸಂತೋಷ ಅರಳಿತು. ಸಾಕಷ್ಟುಮಾತಾಡಲು ತೊಡಗಿದ. ‘ಬಿಜಿ ಇದ್ದೀನಿ ಕಣಪ್ಪಾ? ನಾಳೆ ಬಾರೋ?’ ಎಂದು ಹೇಳಿ ಕಳುಹಿಸಿದೆ. ಮರುದಿನ ತಪ್ಪದೆ ಬಂದ. ಜೊತೆಗೆ ಮತ್ತೊಬ್ಬ ಗೆಳೆಯನನ್ನು ಕರೆದುಕೊಂಡು ಬಂದು ‘ಇವನೂ ನಮ್ಮ ಫ್ಯಾಮಿಲಿ ಸಾರ್‌? ವೆಲ್‌ಕಂ ಮಾಡ್ರಿ?’ ಎಂದು ಪರಿಚಯಿಸಿ, ಅವನಿಗೆ ’ಮೋಹನಸ್ವಾಮಿ’ ಪುಸ್ತಕ ಕೊಡಿಸಿದ. ಪುಸ್ತಕವೊಂದು ಸಮಾಜದಲ್ಲಿ ಮೂಡಿಸುವ ಧೈರ್ಯಕ್ಕೆ ಬೆರಗಾದೆ.

ಅಂಗಡಿ ಬಿಟ್ಟು ನಾನು ಹೊರಗೆ ಹೋಗಿದ್ದು ಅಪರೂಪ. ಆದರೆ ಊಟಕ್ಕಾಗಿ ಮಾಧ್ಯಮಕೇಂದ್ರಕ್ಕೆ ಹೋಗುತ್ತಿದ್ದ. ಪುಸ್ತಕದಂಗಡಿಯವರಿಗೆ ಅಲ್ಲಿ ಖಂಡಿತಾ ಪ್ರವೇಶವಿರಲಿಲ್ಲ. ಆದರೆ ಮಾಧ್ಯಮ ಕೇಂದ್ರದಲ್ಲಿರುವ ಬಹುತೇಕರು ನನ್ನ ಗೆಳೆಯರೇ ಆದ್ದರಿಂದ ಹೇಗೋ ನನ್ನನ್ನು ಒಳಗೆ ಕರೆದುಕೊಂಡು ಹೋಗಿ ಊಟ ಹಾಕಿಸುತ್ತಿದ್ದರು. ಇಲ್ಲೊಂದು ವಿಚಿತ್ರ ಅನುಭವವಾಯ್ತು. ಊಟದಲ್ಲಿ ವಿಚಿತ್ರ ಕಾಳಿನ ಪಲ್ಯವೊಂದನ್ನು ಬಡಿಸಿದ್ದರು. ಅದು ಯಾವ ಕಾಳೆಂದು ನನಗೆ ತಿಳಿಯಲಿಲ್ಲ. ಜೊತೆಯಲ್ಲಿ ಉಣ್ಣುತ್ತಿದ್ದ ಗೆಳೆಯರನ್ನು ಕೇಳಿದೆ. ಅವರು ಹಲವು ಊಹೆ ಮಾಡಿದರು. ನನಗೆ ನಂಬಿಕೆ ಬರಲಿಲ್ಲ. ಕಡೆಗೆ ಯಾವುದಕ್ಕೂ ಇರಲಿ ಎಂದು ಸೀದಾ ಬಫೆ ಬಡಿಸುವವರ ಬಳಿ ಹೋದೆ. ನೀಲಿ ಕೋಟು, ಬಿಳಿ ಅಂಗಿ, ಇಸ್ತ್ರಿ ಕುದುರಿಸಿದ ಪ್ಯಾಂಟು ? ಇತ್ಯಾದಿ ಅಚ್ಚುಕಟ್ಟಾದ ಧಿರಿಸು ಹಾಕಿಕೊಂಡ ಎಳೆಯರು ಅಲ್ಲಿದ್ದರು. ಅವರಿಗೆ ನನ್ನ ಪ್ರಶ್ನೆಯನ್ನು ಕೇಳಿದೆ. ಎಲ್ಲರೂ ಕಣ್ಣುಕಣ್ಣು ಬಿಟ್ಟು ನನ್ನ ಕಡೆ ನೋಡಿದರು. ಮತ್ತೊಮ್ಮೆ ಪ್ರಶ್ನೆ ಕೇಳಿದೆ. ‘ಹಿಂದಿ ಮೆ ಪೂಚೋ?’ (ಹಿಂದಿಯಲ್ಲಿ ಕೇಳು) ಎಂದರು. ಕನ್ನಡ ಬರುವುದಿಲ್ಲ ಎಂದು ಗೊತ್ತಾಗಿ ಅಚ್ಚರಿಯಾಯ್ತು. ‘ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಷೆ ಬರಲಾರದವರನ್ನು ಬಡಿಸೋಕೆ ನಿಲ್ಲಿಸಿದ್ದಾರಲ್ಲಾ?’ ಎಂದು ನನ್ನ ಹರಕು-ಮುರುಕು ಹಿಂದಿಯಲ್ಲಿ ಸಿಟ್ಟು ತೋರಿಸಿದೆ. ಅವರಲ್ಲೊಬ್ಬ ಧೈರ್ಯ ತೆಗೆದುಕೊಂಡು ‘ದಾನೆ ಪೆ ಖಾನೆವಾಲಾ ಕಾ ನಾಮ್‌ಕನ್ನಡ್‌ಪೆ ಲಿಖಾ ರಹತೆ ಹೈ ಕ್ಯಾ?’ (ಅಗಳಿನಲ್ಲಿ ತಿನ್ನುವವನ ಹೆಸರನ್ನು ಕನ್ನಡದಲ್ಲಿ ಬರೆದಿರುತ್ತದಾ?) ಎಂದು ಹೇಳಿ ನಕ್ಕುಬಿಟ್ಟ. ಉಳಿದವರೆಲ್ಲರೂ ಅವನ ಜೊತೆ ನಕ್ಕರು. ಅವನ ಈ ಅಧ್ಯಾತ್ಮದ ಮಾತಿಗೆ ಏನೆಂದು ಉತ್ತರಿಸಬೇಕೋ ತಿಳಿಯದೆ ನನ್ನ ಜಾಗಕ್ಕೆ ವಾಪಾಸಾದೆ.

2007ರ ಶಿವಮೊಗ್ಗದ ಸಾಹಿತ್ಯ ಸಮ್ಮೇಳನದಿಂದಲೂ ನಾನು ನಿರಂತರವಾಗಿ ಪುಸ್ತಕ ಮಳಿಗೆಯನ್ನು ಹಾಕುತ್ತಾ ಬಂದಿದ್ದೇನೆ. ಇದು ತನ್ನದೇ ರೀತಿಯಲ್ಲಿ ನನಗೆ ಆತ್ಮೀಯ ಓದುಗರನ್ನು ದಕ್ಕಿಸಿ ಕೊಟ್ಟಿದೆ. ‘ಉಡುಪಿ ಸಮ್ಮೇಳನದಲ್ಲಿ ನಿಮ್ಮ ಪುಸ್ತಕ ಮೊದಲಿಗೆ ಓದಿದ್ವಿ ಸಾರ್‌...’ ಎನ್ನುತ್ತಾ ಮಾತನಾಡಿಸಲು ಬರುತ್ತಾರೆ. ‘ಬರೀ ಪ್ರಕಟಣೆ ಮಾಡ್ಕೊಂತಾ ನೀವು ಬರೆಯೋದು ಕಡಿಮಿ ಮಾಡಿ ಬಿಟ್ರಿ...’ ಎಂದು ಬೇಸರವನ್ನೂ ವ್ಯಕ್ತ ಪಡಿಸುತ್ತಾರೆ. ‘ಚಿತ್ರದುರ್ಗ ಸಮ್ಮೇಳನಕ್ಕೆ ನಮ್ಮಾಕೆ ಕೂಡೆ ಬಂದಿದ್ದೆ... ಹೋದ ವರ್ಷ ಹೋಗಿ ಬಿಟ್ಳು ಸಾರ್‌...’ ಎಂದು ಹನಿಗಣ್ಣಾಗಿ ನನ್ನನ್ನು ತಮ್ಮ ಸ್ನೇಹವಲಯದಲ್ಲಿ ಸೇರಿಸಿಕೊಳ್ಳುತ್ತಾರೆ. ಸಾಹಿತ್ಯ ಸಮ್ಮೇಳನಕ್ಕೆ ನಿರಂತರವಾಗಿ ಬರುವ ಜನರು ಇದ್ದೇ ಇದ್ದಾರೆ. ಇವರು ಯಾರೂ ಜನಪ್ರಿಯ ಸಾಹಿತಿಗಳಲ್ಲ. ಕೇವಲ ಪ್ರೀತಿಯ ಓದುಗರು. ಆಗೊಮ್ಮೆ ಈಗೊಮ್ಮೆ ತಮಗೆ ತೋಚಿದ್ದನ್ನು ಬರೆಯುವವರು. ಅಂತಹವರ ಭೇಟಿಯೇ ನನಗೆ ಸಮ್ಮೇಳನದ ಯಶಸ್ಸಾಗಿ ಕಾಣುತ್ತದೆ. ಮುಂದಿನ ಸಮ್ಮೇಳನಕ್ಕೆ ಎದುರು ನೋಡುವಂತೆ ಮಾಡುತ್ತದೆ.

ಸಮ್ಮೇಳನವು ಮಾನಸಿಕ ಸಂತೋಷವನ್ನು ನೀಡಿದರೂ ದೈಹಿಕವಾಗಿ ಜರ್ಜರಿತಗೊಳಿಸುತ್ತದೆ. ಕಳೆದ ಹಲವು ವರ್ಷಗಳಿಂದ ಪುಸ್ತಕದ ಮಳಿಗೆಗಳು ಗುಣಮಟ್ಟದಲ್ಲಿ ಪ್ರಗತಿ ಹೊಂದುತ್ತಾ ಬಂದಿದ್ದವು. ಶ್ರವಣಬೆಳಗೊಳ, ರಾಯಚೂರು, ಮೈಸೂರು ? ಎಲ್ಲಾ ಕಡೆಯೂ ಸಾಕಷ್ಟುಉತ್ತಮ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರು. ಧಾರವಾಡದವರು ಮಾತ್ರ ಹತ್ತು ವರ್ಷದ ಹಿಂದಿನ ಅಧೋಗತಿಗೆ ಅದನ್ನು ತೆಗೆದುಕೊಂಡು ಹೋದರು. ಎಷ್ಟುಜನ ಬರಬಹುದು, ಹೇಗೆ ಅವರೆಲ್ಲಾ ಅಡ್ಡಾಡಬಹುದು, ಧೂಳನ್ನು ಹೇಗೆ ತಡಗಟ್ಟಬೇಕು ? ಯಾವುದನ್ನೂ ಯೋಚಿಸದೆ ಬೇಕಾಬಿಟ್ಟಿಯಾಗಿ ಮಳಿಗೆಗಳನ್ನು ಹಾಕಿದ್ದರು. ಎಲ್ಲಿ ನೋಡಿದರೂ ಧೂಳು, ನೂಕು ನುಗ್ಗಲು, ಕಿರುಚಾಟ, ಬಿಸಿಲು ? ಮೂರು ದಿನದಲ್ಲಿ ಸುಸ್ತು ಹೊಡೆದು ಹೋದೆ. ಏನಾದರೂ ಅಗ್ನಿ ಅನಾಹುತವಾಗಿದ್ದರೆ ಸಾವಿರಾರು ಜನರು ನೂಕುನುಗ್ಗಲಿನಲ್ಲಿಯೇ ಸಾಯುವಂತಹ ವಾತಾವರಣ ಅಲ್ಲಿತ್ತು. ಧಾರವಾಡಕ್ಕೆ ಉಚಿತ ವಾಹನದ ವ್ಯವಸ್ಥೆ ಮಾಡಿದ್ದರು. ಆದರೆ ಅದನ್ನು ಬಳಸಲು ಒಂದು ಸರದಿಯ ವ್ಯವಸ್ಥೆ ಇರಲಿಲ್ಲ. ಒಬ್ಬರಿಗೊಬ್ಬರು ಮೈಮೇಲೆ ಬೀಳುತ್ತಾ ಬಸ್ಸನ್ನು ಹತ್ತಬೇಕಿತ್ತು. ವೈಕುಂಠ ಏಕಾದಶಿ ಬಂದರೆ ಒಂದು ಪುಟ್ಟದೇವಾಲಯದವರೂ ಸಾವಿರಾರು ಜನರು ಸರದಿಯಲ್ಲಿ ದರುಶನ ಮಾಡಲು ವ್ಯವಸ್ಥೆ ಮಾಡುತ್ತಾರೆ. ಆದರೆ 84 ವರ್ಷ ಅನುಭವ ಉಳ್ಳವರಾದ, ಕೋಟ್ಯಾಂತರ ರೂಪಾಯಿ ಹಣವನ್ನು ವ್ಯಯಿಸುವ ಪರಿಷತ್‌ಗೆ ಒಂದು ಸುಖ ಅನುಭವ ನೀಡುವಂತಹ ವಾತಾವರಣವನ್ನು ವರ್ಷಕ್ಕೊಮ್ಮೆ ನಿರ್ಮಿಸಲು ಸಾಧ್ಯವಾಗುವುದಿಲ್ಲವೆ? ವಿಚಿತ್ರವೆಂದರೆ ಈ ಸಂಗತಿ ಬಹುತೇಕ ಸಾಹಿತಿಗಳನ್ನು ಕಾಡುವುದಿಲ್ಲವೆನ್ನುವುದು. ಪೂರ್ಣಕುಂಭ ಮೆರವಣಿಗೆ ಕಾಡಿದಷ್ಟುಈ ಅವ್ಯವಸ್ಥೆ ಅವರನ್ನು ಕಾಡಲಿಲ್ಲ. ಪೂರ್ಣಕುಂಭ ವಿರೋಧಿಸಿ ಕವಿತೆಗಳನ್ನು ಹಲವರು ಓದಿದರೂ, ಅವ್ಯವಸ್ಥೆಯನ್ನು ಖಂಡಿಸಿ ಯಾರೂ ಕವಿತೆ ಓದಿದ್ದು ಕಾಣಲಿಲ್ಲ. ನನ್ನ ಪಾಲಿಗೆ ಈ ಧೂಳು, ನೂಕುನುಗ್ಗಲು ಮತ್ತು ಸುರಕ್ಷಣೆಗಳ ಕಡೆಗೆ ಗಮನ ಹರಿಸುವುದು ಪೂರ್ಣಕುಂಭಕ್ಕಿಂತಲೂ ಹೆಚ್ಚು ಮಹತ್ವದ ಸಂಗತಿ ಎನ್ನಿಸಿತು.

ಸಾಹಿತ್ಯ ವಲಯದಲ್ಲಿ ಮಾನಸಿಕ ನೆಮ್ಮದಿ ಸಿಕ್ಕರೂ, ದೈಹಿಕವಾಗಿ ಜರ್ಝರಿತರಾಗುವ ಇಂತಹ ಸ್ಥಿತಿ ಏಕಿದೆ ಎಂದು ನಾನು ಸಾಕಷ್ಟುಆಲೋಚಿಸಿದೆ. ಊರಿಗೆ ಮರಳಿ ಬರುವಾಗ ಅದಕ್ಕೆ ಉತ್ತರ ಸಿಕ್ಕಿ ಬಿಟ್ಟಿತು. ನಾನು ಹುಬ್ಬಳ್ಳಿಗೆ ಬಂದು ವಾಪಾಸು ಬೆಂಗಳೂರಿನ ಬಸ್ಸನ್ನು ಹತ್ತಬೇಕಿತ್ತು. ಆದರೆ ಆಗಲೇ ವಿಳಂಬವಾಗಿತ್ತು. ಧಾರವಾಡದ ಓದುಗರೊಬ್ಬರಿಗೆ ಆ ವಿಷಯ ಹೇಳಿದೆ. ಅದಕ್ಕವರು ಒಂದು ಪರಿಹಾರ ಹೇಳಿದರು. ‘ನೀವು ಸೀದಾ ಚಿಗರಿ ಬಸ್ಸಿನಾಗೆ ಹೋಗಿ ಬಿಡ್ರಿ ಸಾರ...’ ಅಂದರು. ಇದೊಂದು ಹೊಸ ವಾಹನ ಸೌಕರ್ಯ ಧಾರವಾಡ ಮತ್ತು ಹುಬ್ಬಳ್ಳಿಯ ಮಧ್ಯ ಏರ್ಪಟ್ಟಿದೆ. ವೋಲ್ವೋ ಮಾದರಿಯ ಹವಾನಿಯಂತ್ರಿತ ಸುಖಾಸೀನ ಬಸ್ಸುಗಳು ಅಲ್ಲಿಂದಿಲ್ಲಿಗೆ ಓಡಾಡುತ್ತವೆ. ಇವುಗಳ ಓಡಾಟಕ್ಕಾಗಿಯೇ ಹೆದ್ದಾರಿಯ ಮಧ್ಯದ ಜಾಗವನ್ನು ಮೀಸಲಿರಿಸಿದ್ದಾರೆ. ಆದ್ದರಿಂದ ಯಾವುದೇ ಟ್ರಾಫಿಕ್‌ ಸಮಸ್ಯೆಯಿಲ್ಲದೆ ಅರ್ಧ ಗಂಟೆಯಲ್ಲಿ ಹುಬ್ಬಳ್ಳಿ ಸೇರಿಬಿಡಬಹುದು. ಅದಕ್ಕಾಗಿಯೇ ನನ್ನ ಓದುಗರು ಚಿಗರಿ ಬಸ್ಸಿನ ಸಂಗತಿ ಹೇಳಿದ್ದು. ಜೊತೆಗೆ ಅವರು ಮತ್ತೊಂದು ಸಂಗತಿಯನ್ನೂ ಸೇರಿಸಿಬಿಟ್ಟರು. ‘ಪ್ರಯಾಣ ಎಷ್ಟುಆರಾಮ ಇರ್ತದೆ ಅಂದ್ರೆ ನಿಮಗೆ ಹುಬ್ಬಳ್ಳಿ ಮುಟ್ಟಿದ್ದೇ ಗೊತ್ತಾಗಂಗಿಲ್ಲ. ಚಿಗರಿ ರಸ್ತೆನಾಗೆ ಬೇಂದ್ರೆ ಬರೋ ಹಂಗಿಲ್ಲ’ ಎಂದರು. ಅವರ ಮಾತು ಅರ್ಥವಾಗಲು ನನಗೆ ಕೆಲವು ಕ್ಷಣ ಬೇಕಾಯ್ತು. ಬೇಂದ್ರೆ ಹೆಸರಿನ ಸಾರಿಗೆಯೊಂದು ಈ ಅವಳಿ ನಗರದಲ್ಲಿದೆ. ಆ ಹಳೆಯ ಲಡಕಾಸಿ ಬಸ್ಸುಗಳು ಟ್ರಾಫಿಕ್‌ನಲ್ಲಿ ಒದ್ದಾಡುತ್ತಾ, ಸದ್ದು ಮಾಡುತ್ತಾ, ಉಬ್ಬು-ತಗ್ಗುಗಳಿಗೆ ಎಗರಿ ಬೀಳುತ್ತಾ ದೇಹವನ್ನು ದಣಿಸಿ ತುಂಬಾ ತಡವಾಗಿ ನಮ್ಮನ್ನು ಗುರಿ ಮುಟ್ಟಿಸುತ್ತವೆ. ಬೇಂದ್ರೆಗೆ ಸುಖ ಪಯಣವನ್ನು ನೀಡುವುದಕ್ಕೆ ಸಾಹಿತಿಗಳಿಗೇ ಮನಸ್ಸಿಲ್ಲ. ಬೇಂದ್ರೆ ಬೆಂದರೇನೆ ಅವರಿಗೆ ಖುಷಿ!

Follow Us:
Download App:
  • android
  • ios